ಮೆಗ್ಗಾನ್‌ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಡಿಪ್ಲೋಮಾ ವಿದ್ಯಾರ್ಥಿನಿ..!

By Kannadaprabha NewsFirst Published Oct 12, 2022, 12:10 PM IST
Highlights

ಮಗು ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದವಳ ಪತ್ತೆ ಹಚ್ಚಿದ ಸಿಬ್ಬಂದಿ; ವಾರ್ಡಗೆ ದಾಖಲು

ಶಿವಮೊಗ್ಗ(ಅ.12):  ಅಸ್ವಸ್ಥತೆ ನೆಪದಲ್ಲಿ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಶೌಚಗೃಹದಲ್ಲಿ ಮಗುವೊಂದಕ್ಕೆ ಜನ್ಮ ನೀಡಿ ತಪ್ಪಿಸಿಕೊಳ್ಳಲು ಎತ್ನಿಸಿದ ಘಟನೆ ಸಂಭವಿಸಿದ್ದು, ಕೊನೆಗೆ ಆಕೆಯನ್ನು ಪತ್ತೆ ಮಾಡಿ ಬಾಣಂತಿಯರ ವಾರ್ಡ್‌ಗೆ ಹಾಗೂ ಮಗುವನ್ನು ಐಸಿಯುಗೆ ಸೇರಿಸಲಾಗಿದೆ.

ಸುಸ್ತು ಮತ್ತು ಕೈಕಾಲು ನೋವಿನ ಕಾರಣ ಹೇಳಿ 19 ವರ್ಷದ ವಿದ್ಯಾರ್ಥಿನಿ ಒಬ್ಬಳು ಶುಕ್ರವಾರ ರಾತ್ರಿ ನಗರದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಳು. ಶನಿವಾರ ರಾತ್ರಿ ಶೌಚಗೃಹಕ್ಕೆ ತೆರಳಿದ್ದಾಗ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡು ಹೆಣ್ಣು ಮಗು ಜನಿಸಿದೆ. ಗರ್ಭಿಣಿ ಎಂದೇ ಹೇಳಿಕೊಳ್ಳದ ಈ ವಿದ್ಯಾರ್ಥಿನಿ ಮಗುವನ್ನು ಮಗುವನ್ನು ಶೌಚಗೃಹದ ಶೆಲ್ಪ್‌ ಮೇಲೆ ಇರಿಸಿ ಸದ್ದಿಲ್ಲದೆ ವಾರ್ಡ್‌ಗೆ ಬಂದು ಏನೂ ಗೊತ್ತಿಲ್ಲದಂತೆ ಮಲಗಿಕೊಂಡಿದ್ದಾಳೆ.

ಕರ್ನಾಟಕಕ್ಕೆ ಎಫ್‌ಎಸ್‌ಎಲ್‌ ವಿವಿ ಮಂಜೂರು: ಗೃಹ ಸಚಿವ ಆರಗ ಜ್ಞಾನೇಂದ್ರ

ಭಾನುವಾರ ಬೆಳಗ್ಗೆ ಸಿಬ್ಬಂದಿ ಶೌಚಗೃಹ ಸ್ವಚ್ಛಗೊಳಿಸಲು ತೆರಳಿದಾಗ ನವಜಾತ ಶಿಶು ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ರಕ್ಷಣೆ ಮಾಡಿ, ಅನುಮಾನದಿಂದ ವಾರ್ಡಿನಲ್ಲಿ ಇರುವವರನ್ನು ವಿಚಾರಿಸಿದಾಗ ಯಾರೂ ಒಪ್ಪಿಕೊಳ್ಳದ ಕಾರಣ ಆಸ್ಪತ್ರೆ ಸಿಬ್ಬಂದಿ ಠಾಣೆಗೆ ತಿಳಿಸಿದ್ದಾರೆ. ಪೊಲೀಸರು ತನಿಖೆ ವೇಳೆ ವಿದ್ಯಾರ್ಥಿನಿಯ ಕುರಿತು ಅನುಮಾನ ಬಂದು, ಆಪ್ತ ಸಮಾಲೋಚನೆಗೆ ಒಳಪಡಿಸಲಾಯಿತು. ಕೊನೆಗೆ ಪ್ರಸೂತಿ ತಜ್ಞರನ್ನು ಕರೆಸಿ ಪರೀಕ್ಷೆ ನಡೆಸಿದಾಗ ಆಕೆಗೆ ಹೆರಿಗೆಯಾಗಿರುವುದು ಖಚಿತವಾಗಿದೆ. ತಕ್ಷಣವೇ ಆಕೆಯನ್ನು ಬಾಣಂತಿಯರ ವಾರ್ಡ್‌ಗೆ ಮತ್ತು ಮಗುವನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.

ವಿಚಾರಣೆ ವೇಳೆ ಡಿಪ್ಲೊಮಾ ಓದುತ್ತಿರುವ ಈಕೆ ಶಿಕಾರಿಪುರದ ಯುವಕನನ್ನು ಪ್ರೀತಿಸಿದ್ದು, ಅಲ್ಲಿನ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಮನೆಯವರಿಗೆ ಮದುವೆ ಮತ್ತು ಗರ್ಭದ ವಿಷಯ ಹೇಳಿರಲಿಲ್ಲ. ಸುಸ್ತು, ಹೊಟ್ಟೆನೋವು ಕಾಣಿಸಿದಾಗ ಆಸ್ಪತ್ರೆಗೆ ಒಬ್ಬಳೇ ಬಂದು ದಾಖಲಾಗಿದ್ದಾಳೆ ಎಂದು ತಿಳಿದುಬಂದಿದೆ. ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

click me!