ದೇಹದ ತೂಕವನ್ನು ಇಳಿಸಬೇಕು ಅಂತ ನಿರ್ಧರಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಸೈಕಲಿಂಗ್‌ನಲ್ಲಿ ಹೊಸ ಸಾಧನೆ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ : ಬೊಜ್ಜು ಕರಗಿಸಬೇಕು ಅಂತ ಸೈಕಲ್ ಏರಿದವರು ಇಂದು ಇಡೀ ಭಾರತವೇ ಹೆಮ್ಮೆ ಪಡುವ ಹಾಗೆ ಸಾಧನೆ ಮಾಡಿದ್ದಾರೆ. ವೃತ್ತಿಯಲ್ಲಿ ಓರ್ವ ಪೊಲೀಸ್ ಅಧಿಕಾರಿಯಾದ್ರು ಸಹ ಯಾವ ಕ್ರೀಡಾಪಟುವಿಗೂ ಇವರು ಕಮ್ಮಿಯಿಲ್ಲ. ಅಗಲಿದ ನಟ ಪುನೀತ್ ರನ್ನ ನೆನೆದುಕೊಂಡು ಮಾಡಿದ ಒಂದು ಜಾಥಾ ಇದೀಗ ಅವರಿಗೆ ಸಮರ್ಪಣೆಯಾಗಿದೆ. ದೇಹದ ತೂಕವನ್ನು ಇಳಿಸಬೇಕು ಅಂತ ನಿರ್ಧರಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಸೈಕಲಿಂಗ್‌ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಮೊದ ಮೊದಲು ಸಣ್ಣ ಪ್ರಮಾಣದಲ್ಲಿ ಸೈಕಲಿಂಗ್ ಜಾಥಾ ಮಾಡುತ್ತಿದ್ದ ಇವರು ಇದೀಗ ಭಾರತದ ತುತ್ತ ತುದಿಯಿಂದ ಕೊನೆಯವರೆಗೂ ಸೈಕಲ್ ಏರಿ ಜಾಗೃತಿ ಮೂಡಿಸಿದ್ದಾರೆ..
ಹೌದು ಹುಬ್ಬಳ್ಳಿಯ ಹೆಸ್ಕಾಂನ ಇನ್ಸ್ಪೆಕ್ಟರ್ ಆಗಿರೋ ಮುರುಗೇಶ್ ಚನ್ನಣ್ಣವರ ಇಂತದ್ದೊಂದು ಸಾಧನೆ ಮಾಡಿರೋ ಪೊಲೀಸ್ ಅಧಿಕಾರಿ. 'ಸೇ ನೋ ಡ್ರಗ್ಸ್' ಎಂದು ಯುವಕರಿಗೆ ಜಾಗೃತಿಯ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸೈಕಲ್ ಏರಿ ಕೇವಲ 22 ದಿನಗಳಲ್ಲಿ ಜಾಥಾವನ್ನು ಅಂತ್ಯಗೊಳಿಸಿದ್ದಾರೆ. ಕೆ2ಕೆ ಎನ್ನುವ ಜಾಥಾ ಇದಾಗಿದ್ದು, ಯುವ ಜನರಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2021 ರ ಡಿಸೆಂಬರ್ ತಿಂಗಳಲ್ಲಿ ಈ ಜಾಥಾ ಆರಂಭಿಸಿದ್ದರು. ಇವರ ಈ ಸೈಕಲ್ ಜಾಥಾ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 9 ರಾಜ್ಯಗಳ ಮುಖಾಂತರ ಸಾಗಿ ಸುಮಾರು 3649 ಕಿ.ಮೀ ಕ್ರಮಿಸಿದೆ. 42 ರಿಂದ 49 ವಯಸ್ಸಿನೊಳಗಿನ ವಿಭಾಗದಲ್ಲಿ ಮುರುಗೇಶ್ ಚನ್ನಣ್ಣವರಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಲೋಹ ಪುರುಷ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ.
Dharwad: ಹಣ ಪಡೆದು ಮುಂಬಡ್ತಿ ನೀಡಿದ ಸಿಸಿಎಫ್ ವಿರುದ್ಧ ತಿರುಗಿಬಿದ್ದ ಅರಣ್ಯ ರಕ್ಷಕರು
ಹಾಗಂತ ಇದು ಯಾರು ಬೇಕಾದರೂ ಮಾಡುವ ಜಾಥಾವಂತೂ ಅಲ್ಲವೇ ಅಲ್ಲ. ಕೆಲವು ಶೀತ ಪ್ರದೇಶಗಳಲ್ಲಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಏನೇ ಆದರೂ ಜಾಗೃತಿಯ ಸಲುವಾಗಿ ಸೈಕಲ್ ಏರಿದ್ದ ಮುರುಗೇಶ್ ಚನ್ನಣ್ಣವರ ಕೇವಲ 22 ದಿನದಲ್ಲಿ ತಮ್ಮ ಜಾಥಾ ಅಂತ್ಯಗೊಳಿಸಿ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ್ದಾರೆ. ಇವರ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಮೊದಲಿನಿಂದಲೂ ಸೈಕಲ್ ಮೇಲೆ ಹೆಚ್ಚು ಒಲವು ಹೊಂದಿದ್ದ ಮುರುಗೇಶ್ ಈಗಾಗಲೇ ಹಲವು ರಾಷ್ಟ್ರೀಯ ಸೈಕಲ್ ಜಾಥಾಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನ ಪಡೆದಿದ್ದಾರೆ.
ಇನ್ನು ಇವರ ಈ ಸೈಕಲ್ ಕ್ರೇಜ್ ಗೆ ಮನಸೋತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಹ ಧಾರವಾಡಕ್ಕೆ ಬಂದಾಗಲೆಲ್ಲ ಇವರ ಮನೆಗೆ ಬಂದು ಸೈಕಲ್ ಜಾಥಾ ಬಗ್ಗೆ ಮತ್ತು ಇಬ್ಬರು ಸಹ ಬರ್ಲಿನ್ ನಲ್ಲಿ ನಡೆಯುವ ಮ್ಯಾರಥಾನ್ ನಲ್ಲಿ ಭಾಗವಹಿಸುವ ಇಂಗಿತವನ್ನ ವ್ಯಕ್ತಪಡಿಸಿದ್ದರಂತೆ. ಆದರೆ ಪುನೀತ್ ಅಕಾಲಿಕ ಮರಣದಿಂದ ಅದು ಕೇವಲ ಕನಸಾಗಿಯೇ ಉಳಿದಿದೆ. ಹೀಗಾಗಿಯೇ ಮುರುಗೇಶ್ ಈ ಬುಕ್ ಆಫ್ ರೆಕಾರ್ಡ್ ಸಾಧನೆಯನ್ನು ಪುನೀತ್ ಗೆ ಸಮರ್ಪಿಸಿದ್ದು, ಮುಂದೊಂದು ದಿನ ಬರ್ಲಿನ್ ಮ್ಯಾರಥಾನ್ ನಲ್ಲಿ ಭಾಗವಹಿಸಿ ಅವರ ಆಸೆಯನ್ನ ನಾನು ಪೂರ್ತಿಯಾಗಿಸುತ್ತೇನೆ ಅಂತ ಆಸೆ ವ್ಯಕ್ತಪಡಿಸಿದ್ದಾರೆ.
ಧಾರವಾಡ: ನಮ್ಮ ಪುಸ್ತಕ ಮ್ಯಾಲ ನೀರ ಸೋರಾಕತೈತ್ರಿ, ವಿದ್ಯಾರ್ಥಿಗಳಿಗೆ ಸಂಕಷ್ಟ..!
ಇನ್ನು ಇವರ ಈ ಸಾಧನೆಗೆ ಹಲವರು ಕೈ ಜೋಡಿಸಿದ್ದಾರೆ. ಮನೆಯವರು, ಮತ್ತು ಇಲಾಖೆಯ ಅಧಿಕಾರಿಗಳ ಪ್ರೋತ್ಸಾಹ ಹಾಗೂ ಸಹಾಯವೇ ಇದಕ್ಕೆಲ್ಲಾ ಕಾರಣ ಎಂದು ಮುರುಗೇಶ್ ಚನ್ನಣ್ಣವರ ಹೇಳುತ್ತಾರೆ. ಒಟ್ಟಾರೆ ಅಪ್ಪು ಜೊತೆಗೆ ಬರ್ಲಿನ್ ಹೋಗುವ ಆಸೆ ಹೊತ್ತುಕೊಂಡಿದ್ದ ಮುರುಗೇಶ್ ಅವರಿಗೆ ಅಪ್ಪು ಅಕಾಲಿಕ ನಿಧನ ನೋವು ತಂದಿದ್ದರೂ ಇವರು ಬರ್ಲಿನ್ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಮೂಲಕ ಪುನೀತ್ ಕನಸು ನನಸಾಗಿಸಲಿ ಎಂಬುದು ಅನೇಕರ ಹಾರೈಕೆ.