ಮಂಡ್ಯದಲ್ಲಿ ಬಟ್ಟೆ ವ್ಯಾಪಾರ ನಷ್ಟ: ಸಾಲಕ್ಕೆ ಹೆದರಿ ಅಪ್ಪ-ಅಮ್ಮ, ನವವಿವಾಹಿತ ಮಗ ಮೂವರೂ ಸಾವು!

Published : Jun 09, 2026, 02:42 PM IST
mandya cloth merchant family death

ಸಾರಾಂಶ

ಸಾಲದ ಒತ್ತಡ ಮತ್ತು ವ್ಯಾಪಾರದಲ್ಲಿನ ನಷ್ಟದಿಂದಾಗಿ ಮಂಡ್ಯದ ಬಟ್ಟೆ ವ್ಯಾಪಾರಿಯೊಬ್ಬರು ತಮ್ಮ ಪತ್ನಿ ಹಾಗೂ ಮಗನನ್ನು ಕೊಂದುತಾವೂ ಸಾವಿಗೆ ಶರಣಾಗಿದ್ದಾರೆ. ಸರ್ಕಾರದ 'ಶಕ್ತಿ ಯೋಜನೆ'ಯಿಂದ ವ್ಯಾಪಾರ ಕುಸಿತ, ಫೈನಾನ್ಸ್‌ನವರ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಮೃತರ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಂಡ್ಯ (ಜೂ.09): ಸಕ್ಕರೆ ನಾಡು ಮಂಡ್ಯದಲ್ಲಿ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸುವಂತಹ ಅತ್ಯಂತ ದಾರುಣ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಲದ ಒತ್ತಡ ಹಾಗೂ ವ್ಯಾಪಾರದಲ್ಲಿ ಉಂಟಾದ ತೀವ್ರ ನಷ್ಟದಿಂದ ಬೇಸತ್ತ ಬಟ್ಟೆ ವ್ಯಾಪಾರಿಯೊಬ್ಬರು, ತಮ್ಮ ಪತ್ನಿ ಮತ್ತು ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ತಾವೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಮಂಡ್ಯದ ನೆಹರು ನಗರದಲ್ಲಿ ಈ ದುರಂತ ಸಂಭವಿಸಿದ್ದು, ಪ್ರಭಾಕರ್ (65), ಅವರ ಪತ್ನಿ ಜ್ಯೋತಿ (55) ಹಾಗೂ ಮಗ ಸಂತೋಷ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮಧ್ಯರಾತ್ರಿ ನಡೆದ ಕ್ರೂರ ಕೃತ್ಯ:

ಪೊಲೀಸ್ ಮೂಲಗಳು ಮತ್ತು ಸ್ಥಳದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ನಿನ್ನೆ ಮಧ್ಯರಾತ್ರಿ ಸುಮಾರು 3:30ರ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ. ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರಭಾಕರ್, ಮೊದಲು ಪತ್ನಿ ಜ್ಯೋತಿಯನ್ನು ಪಂಚೆ ಅಥವಾ ವೇಲ್‌ನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ. ಈ ವೇಳೆ ತಾಯಿಯ ರಕ್ಷಣೆಗೆ ಬಂದ ಅಥವಾ ತಡೆಯಲು ಯತ್ನಿಸಿದ ಮಗ ಸಂತೋಷ್‌ನನ್ನೂ ಸಹ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಪತ್ನಿ ಮತ್ತು ಮಗ ಇಬ್ಬರೂ ಪ್ರಾಣಬಿಟ್ಟ ಬಳಿಕ, ಪ್ರಭಾಕರ್ ಅವರು ನೆಹರು ನಗರದಲ್ಲಿದ್ದ ತಮ್ಮ ಸ್ವಂತ ಬಟ್ಟೆ ಅಂಗಡಿಗೆ ತೆರಳಿ ಅಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಕೊಲೆಯಾದರೂ ಸೊಸೆಗೆ ತಿಳಿಯಲಿಲ್ಲ

ಈ ಇಡೀ ಘಟನೆಯ ಅತ್ಯಂತ ಕರುಣಾಜನಕ ಸಂಗತಿಯೆಂದರೆ, ಮಗ ಸಂತೋಷ್‌ಗೆ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಘಟನೆ ನಡೆದಾಗ ಬೆಳಗಿನ ಜಾವ 3:30 ಆಗಿದ್ದರಿಂದ ನವವಿವಾಹಿತ ಸೊಸೆ ಗಾಢ ನಿದ್ರೆಯಲ್ಲಿದ್ದರು. ಮನೆಯ ಮತ್ತೊಂದು ಕೋಣೆಯಲ್ಲಿ ಮಾವನೇ ಗಂಡ ಹಾಗೂ ಅತ್ತೆಯನ್ನು ಕೊಲೆ ಮಾಡುತ್ತಿದ್ದರೂ ಆಕೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮುಂಜಾನೆ ಎದ್ದು ತಿಂಡಿ ಸಿದ್ಧಪಡಿಸಿ, ಅತ್ತೆಯನ್ನು ಎಬ್ಬಿಸಲು ಕೋಣೆಗೆ ಹೋದಾಗ ಜ್ಯೋತಿ ಮತ್ತು ಸಂತೋಷ್ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಈ ವಿಷಯ ಹೊರಬಿದ್ದಿದ್ದು, ಯುವತಿಯ ಆಕ್ರಂದನ ಮುಗಿಲು ಮುಟ್ಟಿದೆ.

ಸರ್ಕಾರದ 'ಶಕ್ತಿ ಯೋಜನೆ' ಕಾರಣವೆಂದ ಡೆತ್‌ನೋಟ್!

ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಹಾಗೂ ಮಂಡ್ಯ ಎಸ್ಪಿ ಶೋಭರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಭಾಕರ್ ಬರೆದಿದ್ದಾರೆ ಎನ್ನಲಾದ ಆಘಾತಕಾರಿ 'ಡೆತ್‌ನೋಟ್' ಒಂದು ಪತ್ತೆಯಾಗಿದೆ. ಈ ಡೆತ್‌ನೋಟ್‌ನಲ್ಲಿ ಪ್ರಭಾಕರ್ ತಮ್ಮ ಸಾವಿಗೆ ಮತ್ತು ಕುಟುಂಬದ ಅಂತ್ಯಕ್ಕೆ ಆರ್ಥಿಕ ಸಂಕಷ್ಟವೇ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಡೆತ್‌ನೋಟ್‌ನ ಪ್ರಮುಖಾಂಶಗಳು:

  • ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದ 'ಶಕ್ತಿ ಯೋಜನೆ'ಯಿಂದಾಗಿ ಜನರು ಬೇರೆ ನಗರಗಳಿಗೆ ತೆರಳುತ್ತಿರುವುದರಿಂದ ಸ್ಥಳೀಯ ಬಟ್ಟೆ ವ್ಯಾಪಾರ ಸಂಪೂರ್ಣ ಕುಸಿದಿದೆ.
  • ವ್ಯಾಪಾರ ಇಲ್ಲದ ಕಾರಣ ಖಾಸಗಿ ಫೈನಾನ್ಸ್‌ಗಳಲ್ಲಿ ಮಾಡಿದ್ದ ಸಾಲಕ್ಕೆ ಸರಿಯಾಗಿ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ.
  • ಸಾಲ ಮರುಪಾವತಿ ಮಾಡದಿದ್ದರೆ ಖಾಸಗಿ ಫೈನಾನ್ಸ್ ಕಂಪನಿಗಳ ಏಜೆಂಟರು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುವ ಭಯವಿತ್ತು. ಮಾನ, ಮರ್ಯಾದೆಗೆ ಹೆದರಿ ಈ ನಿರ್ಧಾರ ಕೈಗೊಂಡಿರುವುದಾಗಿ ಬರೆಯಲಾಗಿದೆ.

ಪೊಲೀಸ್ ತನಿಖೆ ಚುರುಕು:

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಂಡ್ಯ ಎಸ್ಪಿ ಶೋಭರಾಣಿ ಅವರು, 'ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿರುವುದು ನಿಜ. ಅದರಲ್ಲಿ ಸಾಲದ ಕಿರುಕುಳ ಮತ್ತು ವ್ಯಾಪಾರ ನಷ್ಟದ ಬಗ್ಗೆ ಬರೆಯಲಾಗಿದೆ. ಸದ್ಯಕ್ಕೆ ಮೂರೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಸಗಿ ಫೈನಾನ್ಸ್‌ಗಳ ಕಿರುಕುಳದ ಬಗ್ಗೆಯೂ ತನಿಖೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ. ಒಂದೆಡೆ ಮಗನ ಮದುವೆಯ ಸಡಗರ ಮುಗಿಯುವ ಮುನ್ನವೇ ಇಡೀ ಕುಟುಂಬ ಹೀಗೆ ದುರಂತ ಅಂತ್ಯ ಕಂಡಿರುವುದು ಮಂಡ್ಯ ಜನತೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ.

PREV
Read more Articles on
click me!

Recommended Stories

ಮಲೆ ಮಹದೇಶ್ವರ ಬೆಟ್ಟದ ಬಳಿ KSRTC ಬಸ್ ಪಲ್ಟಿ, ಅಸಲಿ ಕಾರಣ ಬಿಚ್ಚಿಟ್ಟ ಎಸ್‌ಪಿ; 44 ಪ್ರಯಾಣಿಕರ ಪೈಕಿ ಇಬ್ಬರ ಸಾವು!
ಕರ್ನಾಟಕ ಪೊಲೀಸ್ ಇಲಾಖೆಗೇ ಕಪ್ಪುಚುಕ್ಕೆ: ಅಪ್ರಾಪ್ತರ ಮೇಲೆ ವಿಕೃತಿ ಮೆರೆದ ಅಮೃತಹಳ್ಳಿ ಪಿಎಸ್‌ಐ ಪ್ರವೀಣ್ ಬಂಧನ!