BRTS ಅವ್ಯವಸ್ಥೆ: ಧಾರವಾಡದಲ್ಲಿ ಮೊಳಗಿದ ಎಚ್ಚರಿಕೆ ಗಂಟೆ, ಜಾಣ ಕುರುಡರಂತೆ ವರ್ತನೆ!

Published : Aug 06, 2026, 06:20 AM IST
BRTS

ಸಾರಾಂಶ

ಧಾರವಾಡದ ವಿದ್ಯಾಗಿರಿ ಬಳಿ ಬಿಆರ್‌ಟಿಎಸ್‌ನಿಂದ ಉಂಟಾಗುತ್ತಿರುವ ನಿರಂತರ ಅಪಘಾತ ಮತ್ತು ಅವ್ಯವಸ್ಥೆಯನ್ನು ಖಂಡಿಸಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಜಂಕ್ಷನ್‌ ಅಭಿವೃದ್ಧಿ ಹಾಗೂ ರೋಡ್ ಬ್ರೇಕರ್‌ ಅಳವಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಧಾರವಾಡ: ಬಿಆರ್‌ಟಿಎಸ್‌ನಿಂದ (BRTS Bus) ಆಗುತ್ತಿರುವ ತೊಂದರೆಗೆ ಪರಿಹಾರ ಕೋರಿ ವಿದ್ಯಾಗಿರಿ ಬಳಿ ಕೆಲ ಹೊತ್ತು ರಸ್ತೆ ತಡೆದು ನವಲೂರು, ವಿದ್ಯಾಗಿರಿ ಹಾಗೂ ಸತ್ತೂರು ಭಾಗದ ಸಾರ್ವಜನಿಕರು ಪ್ರತಿಭಟಿಸಿದರು.

ಸುಗಮ ಹಾಗೂ ವೇಗದ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗ ಆಗುತ್ತಿರುವ ಸಮಸ್ಯೆಗಳಿಗೆ ಉತ್ತರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಏನು ಅವ್ಯವಸ್ಥೆ?

ಬಿಆರ್‌ಟಿಎಸ್‌ನಿಂದಾಗಿ ಅವಳಿ ನಗರದ ಮಧ್ಯೆ ನಿತ್ಯ ಅಪಘಾತಗಳಾಗುತ್ತಿದ್ದು ಜನರು ಭಯಭೀತರಾಗಿದ್ದಾರೆ. ಖಾಸಗಿ ವಾಹನಗಳಲ್ಲಿ ಸಂಚರಿಸುವ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದರೂ ಬಿಆರ್‌ಟಿಎಸ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅವಘಡ ನಡೆದಾಗಲೂ ಸ್ಥಳಕ್ಕೆ ಬರುತ್ತಿಲ್ಲ. ದೂರವಾಣಿ ಮೂಲಕ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಮುಸ್ತಾಕ, ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿ ಶ್ರೀಶೈಲ, ಸತ್ತೂರ ಬಳಿ ಇರುವ ಜಂಕ್ಷನ್‌ನ್ನು ಶೀಘ್ರವೇ ಅಭಿವೃದ್ಧಿಗೊಳಿಸಲಾಗುವುದು, ಬಸ್‌ಗಳ ವೇಗ ಕಡಿಮೆಗೊಳಿಸಲು ರೋಡ್ ಬ್ರೇಕರ್‌ ಅಳವಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಪುಂಡಲೀಕ ತಳವಾರ, ಗುರುಪ್ರಸಾದ ಕರಡೆಣ್ಣವರ, ಫಕ್ಕೀರಗೌಡ ಪಾಟೀಲ, ನವೀನ ದೇಶಮುಖ, ವರುಣ ಸಂಕನಗೌಡರ, ಸೇರಿದಂತೆ ಸತ್ತೂರು, ಉದಯನಗರ, ವನಸಿರಿ ನಗರ ನಿವಾಸಿಗಳಿದ್ದರು.

ಎಲ್ಲರೂ ಜಾಣ ಕುರುಡರು

ಬಿಆರ್‌ಟಿಎಸ್ ಕಾರಿಡಾರಿನಲ್ಲಿ ಅನೇಕ ಅಪಘಾತ, ಟ್ರಾಫಿಕ್‌ ಜಾಮ್‌ ಸೇರಿ ಅನೇಕ ಸಮಸ್ಯೆಗಳಾದರೂ ಎಂದಿಗೂ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಆಗಮಿಸಿ ಸಾರ್ವಜನಿಕರ ಅಳಲು ಕೇಳಿಲ್ಲ. ಯೋಜನೆಯಿಂದ ಜನರಿಗೆ ಇಷ್ಟೆಲ್ಲಾ ಅವಾಂತರಗಳು ಆಗುತ್ತಿದ್ದರೂ ಸಂಸದರು, ಶಾಸಕರು, ಸಚಿವರು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದೇಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದರು.

PREV
Read more Articles on
click me!

Recommended Stories

ಅಪ್ಪಾ ದುಡ್ಡು ಬೇಡ, ಬಡವರ ಸೇವೆ ಮಾಡು: ತಂದೆ ವಿಜಯಾನಂದ ಕಾಶಪ್ಪನವರಿಗೆ ಮಗಳ ಮಾತು
Special voters list revision: ಮಂಡ್ಯ ಜಿಲ್ಲೆಯಲ್ಲಿ ಮತಪಟ್ಟಿಯಿಂದ 1.69 ಲಕ್ಷ ಮಂದಿ ಔಟ್