ಧಾರವಾಡ ಕವಿವಿ ಆವರಣ: ಮಂಗಗಳ ದಾಳಿಗೆ ಹೆದರಿ ಕಟ್ಟಡದ ಮೇಲಿಂದ ಹಾರಿದ ಸಂಶೋಧನಾ ವಿದ್ಯಾರ್ಥಿನಿ!

Published : Feb 05, 2026, 05:42 PM IST
Dharwad University

ಸಾರಾಂಶ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಮಂಗಗಳ ಹಾವಳಿ ನಿಯಂತ್ರಿಸಲು ಆಡಳಿತ ಮಂಡಳಿ ವಿಫಲವಾಗಿದೆ.

ಧಾರವಾಡ (ಫೆ.05): ವಿದ್ಯಾನಗರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ (Karnatak University Dharwad - KUD) ಆವರಣದಲ್ಲಿ ಮಂಗಗಳ ಹಾವಳಿ ಮಿತಿಮೀರಿದ್ದು, ಈ ಉಪಟಳಕ್ಕೆ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಕಟ್ಟಡದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಸರಸ್ವತಿ ವಸತಿ ನಿಲಯದಲ್ಲಿ ಈ ಅವಘಡ ಸಂಭವಿಸಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:

ಇವೆಂಜಲಿನಾ ಎಂಬ ಸಂಶೋಧನಾ (Research Scholar) ವಿದ್ಯಾರ್ಥಿನಿಯೇ ಗಾಯಗೊಂಡವರು. ಇವರು ಕವಿವಿ ಆವರಣದಲ್ಲಿರುವ ಸರಸ್ವತಿ ವಸತಿ ನಿಲಯದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಓದಲು ಪ್ರತ್ಯೇಕವಾದ 'ಸ್ಟಡಿ ರೂಮ್' (Study Room) ವ್ಯವಸ್ಥೆ ಇಲ್ಲದ ಕಾರಣ, ಇವೆಂಜಲಿನಾ ಅವರು ಅಭ್ಯಾಸ ಮಾಡಲು ಹಾಸ್ಟೆಲ್ ಕಟ್ಟಡದ ಮೇಲ್ಛಾವಣಿಗೆ (Terrace) ತೆರಳಿದ್ದರು.

ಏಕಾಗ್ರತೆಯಿಂದ ಓದುತ್ತಿದ್ದ ವೇಳೆ ಏಕಾಏಕಿ ಕೋತಿಗಳ ಹಿಂಡು ಕಟ್ಟಡದ ಮೇಲೆ ದಾಳಿ ಮಾಡಿದೆ. ಮಂಗಗಳು ತಮ್ಮತ್ತ ನುಗ್ಗಿ ಬರುತ್ತಿರುವುದನ್ನು ಕಂಡು ದಂಗಾದ ಇವೆಂಜಲಿನಾ, ಪ್ರಾಣಭಯದಿಂದ ತಪ್ಪಿಸಿಕೊಳ್ಳಲು ಓಡಿದ್ದಾರೆ. ಈ ವೇಳೆ ಗಾಬರಿಯಲ್ಲಿ ಕಾಲು ಜಾರಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ವಿದ್ಯಾರ್ಥಿನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸಹಪಾಠಿಗಳು ಮತ್ತು ಸಿಬ್ಬಂದಿ ಸೇರಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ವಸತಿ ನಿಲಯದಲ್ಲಿ ಮೂಲಸೌಕರ್ಯ ಕೊರತೆ:

ಈ ಘಟನೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. 'ನಮ್ಮ ಹಾಸ್ಟೆಲ್‌ನಲ್ಲಿ ಓದಲು ಸರಿಯಾದ ವ್ಯವಸ್ಥೆಯಿಲ್ಲ. ಸ್ಟಡಿ ರೂಮ್ ಇಲ್ಲದಿದ್ದರೂ ಕಟ್ಟಡದ ಮೇಲೆ ಹೋಗಿ ಓದುವುದು ಅನಿವಾರ್ಯವಾಗಿದೆ. ಮೂಲಸೌಕರ್ಯ ಒದಗಿಸಿದ್ದರೆ ಇವೆಂಜಲಿನಾ ಇಂದು ಆಸ್ಪತ್ರೆ ಸೇರುವ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

ಕುಲಪತಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ:

ಕವಿವಿ ಆವರಣದಲ್ಲಿ ಮಂಗಗಳ ಕಾಟ ಇದೇ ಮೊದಲೇನಲ್ಲ. ಹಾಸ್ಟೆಲ್ ಕೊಠಡಿಗಳಿಗೆ ನುಗ್ಗಿ ದವಸ ಧಾನ್ಯಗಳನ್ನು ನಾಶ ಮಾಡುವುದು, ಬಟ್ಟೆಗಳನ್ನು ಹರಿದು ಹಾಕುವುದು ಮತ್ತು ವಿದ್ಯಾರ್ಥಿನಿಯರ ಮೇಲೆ ಎರಗಲು ಬರುವುದು ಸಾಮಾನ್ಯ ಸಂಗತಿಯಾಗಿದೆ. ಈ ಕುರಿತು ಹಲವು ಬಾರಿ ಕುಲಪತಿಗಳಿಗೆ ಮತ್ತು ವಸತಿ ನಿಲಯದ ಮೇಲ್ವಿಚಾರಕರಿಗೆ ಮನವಿ ಮಾಡಲಾಗಿತ್ತು. ಮಂಗಗಳ ಹಾವಳಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಆದರೆ, ಅಧಿಕಾರಿಗಳು ಕೇವಲ ಭರವಸೆ ನೀಡಿ ಕೈತೊಳೆದುಕೊಂಡಿದ್ದರೇ ವಿನಃ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಆಡಳಿತ ವರ್ಗದ ಈ ನಿರ್ಲಕ್ಷ್ಯ ಧೋರಣೆಯೇ ಇಂದು ಒಬ್ಬ ವಿದ್ಯಾರ್ಥಿನಿಯ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಘಟನೆಗೆ ಸಂಬಂಧಿಸಿದಂತೆ ಧಾರವಾಡ ಪೊಲೀಸರು ಮಾಹಿತಿ ಪಡೆದಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನಾದರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಕೋತಿಗಳ ಹಾವಳಿಗೆ ಕಡಿವಾಣ ಹಾಕುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಗಂಗಾವತಿ ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ: ಯುವತಿ ತಾಯಿ ಕೊಟ್ರು ಬಿಗ್ ಟ್ವಿಸ್ಟ್!
ಭತ್ತದ ಗದ್ದೆಯಲ್ಲಿ ಹಳದಿ ಚಿನ್ನ ಬೆಳೆಯುತ್ತಿರುವ ತುಂಗಭದ್ರೆ ಒಡಲಿನ ರೈತರು; ಕಡಿಮೆ ನೀರು, ಅಧಿಕ ಲಾಭ