67 ನೇ ಕರ್ನಾಟಕ ರಾಜ್ಯೋತ್ಸವ, ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ, ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ಆರಂಭ: ಹಾಲಪ್ಪ ಆಚಾರ್
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ನ.01): ಉತ್ತರ ಕರ್ನಾಟಕದ ಜ್ಞಾನಕೇಂದ್ರ ವಿದ್ಯಾಕಾಶಿಯಾಗಿರುವ ಧಾರವಾಡ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯವು ಇಲ್ಲಿದೆ. ಆರೋಗ್ಯ ವಲಯ ಸುಧಾರಣೆಗಾಗಿ ರಾಜ್ಯ ಸರ್ಕಾರವು ಘೋಷಿಸಿರುವ ನಮ್ಮ ಕ್ಲಿನಿಕ್‌ಗಳನ್ನು ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಇಂದು(ಮಂಗಳವಾರ) ಜಿಲ್ಲಾಡಳಿತದಿಂದ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಧಾರವಾಡದಲ್ಲಿ 140 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರತಿಷ್ಠಿತ ಐಐಐಟಿ ಧಾರವಾಡದ ನೂತನ ಕ್ಯಾಂಪಸ್‍ನ್ನು ಘಣವೆತ್ತ ರಾಷ್ಟ್ರಪತಿಗಳು ಇತ್ತೀಚೆಗೆ ಉದ್ಘಾಟಿಸಿದ್ದಾರೆ ಮತ್ತು 650 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಧಾರವಾಡ ಐಐಟಿಯ ನೂತನ ಕಟ್ಟಡ ಮತ್ತು ಕ್ಯಾಂಪಸ್‍ನ್ನು ಮುಂದಿನ ಎರಡು ತಿಂಗಳಲ್ಲಿ ಉದ್ಘಾಟನೆಗೆ ಸಜ್ಜುಗೊಳಿಸಲಾಗುತ್ತಿದೆ ಅಂತ ತಿಳಿಸಿದ್ದಾರೆ.
ಸ್ವಾವಲಂಬಿ ಬದುಕಿಗೆ ಸ್ವ-ಸಹಾಯ ಸಂಘ ನೆರವು: ಸಚಿವ ಮುನೇನಕೊಪ್ಪ
ಧಾರವಾಡದ ಮಮ್ಮಿಗಟ್ಟಿಯಲ್ಲಿ ಸ್ಥಾಪನೆಯಾಗಲಿರುವ ಎಫ್‍ಎಂಸಿಜಿ ಕೈಗಾರಿಕಾ ಘಟಕವು ಇಡೀ ರಾಜ್ಯ ಮತ್ತು ದೇಶದ ಆರ್ಥಿಕತೆ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮುರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಎಫ್‍ಎಂಸಿಜಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಮೊದಲ ಹಂತದಲ್ಲಿಯೇ 16 ಕಂಪನಿಗಳು ಸುಮಾರು 1200 ಕೋಟಿ ಬಂಡವಾಳದ ಒಡಂಬಡಿಕೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇದರಿಂದ ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷಿಯಾಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಸ್ತುತ 2022-23 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿವೆ. ಪ್ರಸಕ್ತ ಹಿಂಗಾರಿನಲ್ಲಿ ಅಕ್ಟೋಬರ್ ಮಾಹೆಯಲ್ಲಿ 100 ಮಿ.ಮಿ ವಾಡಿಕೆ ಮಳೆಗೆ 198 ಮಿ.ಮಿ ಮಳೆಯಾಗಿದೆ. ಶೇ. 97 ರಷ್ಟು ಹೆಚ್ಚಿನ ಮಳೆ ವರದಿಯಾಗಿದೆ. ಸಹಾಯಧನದಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟು 24,322 ಕ್ವಿಂಟಾಲ್‍ನಷ್ಟು ವಿವಿಧ ಬಿತ್ತನೆ ಬೀಜಗಳ ಪೈಕಿ 18,300 ಕ್ವೀಂಟಲ್ ಬೀಜ ವಿತರಣೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 5371 ಮೆ.ಟನ್‍ಗಳಷ್ಟು ವಿವಿಧ ರಸಗೊಬ್ಬರಗಳನ್ನು ರೈತರಿಗೆ ಪೂರೈಸಲಾಗಿದೆ ಅಂತ ಹೇಳಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,35,560 ರೈತರು ಈಗಾಗಲೇ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 351.94 ಕೋಟಿ ರೂ.ಗಳ ಹಣ ರೈತರ ಖಾತೆಗೆ ನೇರ ಜಮೆಯಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿಗಾಗಿ ಅಮೃತ ಗ್ರಾಮ ಪಂಚಾಯತ ಯೋಜನೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 41 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮನೆಮನೆಗೆ ನಳ ಸಂಪರ್ಕ, ಬೀದಿದೀಪಗಳು, ಸೌರದೀಪಗಳು, ಉದ್ಯಾನವನ, ಶಾಲೆ, ಅಂಗನವಾಡಿಗಳ ನಿರ್ಮಾಣ ಮತ್ತಿತರ ಕಾರ್ಯಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಅಂತ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ 1032 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ರೂಪಗೊಂಡಿದ್ದು, ಅನುಷ್ಠಾನ ಹಂತದಲ್ಲಿದೆ 2012ರ ಬೇಸ್ ಲೈನ್ ಸರ್ವೆಯಿಂದ ಹೊರಗುಳಿದ 29,680 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಸದ್ಯ 2022-23ರಲ್ಲಿ ಸಿಟಿಜನ್ ಆಪ್ ಮೂಲಕ ವೈಯುಕ್ತಿಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. 144 ಗ್ರಾಮ ಪಂಚಾಯತಿಗಳಿಗೂ ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಅನುಮೋದನೆ ನೀಡಲಾಗಿದ್ದು, ಕಸದ ವಿಲೇವಾರಿ ವಾಹನ, ಕಸದ ಬುಟ್ಟಿಗಳನ್ನು ಖರೀದಿಸುವ ಪ್ರಕ್ರಿಯ ಜಾರಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 35 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮತ್ತು 13 ವಸತಿ ಶಾಲೆಗಳಲ್ಲಿ ಒಟ್ಟು 7,635 ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಧಾರವಾಡ ಜಿಲ್ಲೆಯ 2,307 ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, 1,859 ಜಾನುವಾರುಗಳು ಚಿಕಿತ್ಸೆಯಿಂದಾಗಿ ಗುಣಮುಖ ಹೊಂದಿವೆ. ಜಿಲ್ಲೆಯಲ್ಲಿ ಇಲ್ಲಿಯವರಗೆ ಚರ್ಮಗಂಟು ರೋಗದ ವಿರುದ್ಧ 1.25 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ಜಿಲ್ಲೆಯಲ್ಲಿ ರೋಗ ನಿಯಂತ್ರಣದಲ್ಲಿದೆ ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ 150 ಕೋಟಿ ರೂ.ವೆಚ್ಚದಲ್ಲಿ ಹುಬ್ಬಳ್ಳಿ ಕಿಮ್ಸ್‍ನಲ್ಲಿ ಬೃಹತ್ ಸುಸಜ್ಜಿತ ಹೊಸ ಆಸ್ಪತ್ರೆ ನಿರ್ಮಿಸಲಾಗಿದೆ. ಮತ್ತು ರೂ.400 ಕೋಟಿ ವೆಚ್ಚದಲ್ಲಿ ಜಯದೇವ ಹೃದಯ ರೋಗ ಆಸ್ಪತ್ರೆ ಘಟಕ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು.
ನಮ್ಮ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ 6 ನಮ್ಮ ಕ್ಲಿನಿಕ್ ಆರಂಭಿಸಲು ಅನುಮತಿ ನೀಡಿದ್ದು, ಸಾರ್ವಜನಿಕ ಸೇವೆಗೆ ಸಿದ್ದಗೊಳ್ಳಿಸಲಾಗುತ್ತಿದೆ. ಧಾರವಾಡದಲ್ಲಿ ಉತ್ತರ ಕರ್ನಾಟಕ ಕೃಷಿ ಹವಾಮಾನ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ ಆಗಿದೆ. ಹುಬ್ಬಳ್ಳಿಯಲ್ಲಿ ಭಾರತೀಯ ಮಾನಕ ಬ್ಯೂರೋ ಕಚೇರಿ ಆರಂಭವಾಗಿದೆ ಧಾರವಾಡದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿ.ಮೀ. ರಸ್ತೆಯನ್ನು 1200 ಕೋಟಿ ವೆಚ್ಚದಲ್ಲಿ ಷಟ್ಪಥ ರಸ್ತೆಯನ್ನಾಗಿ ಮಾಡುವ ಕಾರ್ಯ ಶೀಘ್ರದಲ್ಲಿ ಆರಂಭವಾಗುವುದು ಎಂದು ಸಚಿವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಒಟ್ಟು 64 ಯೋಜನೆಗಳನ್ನು ರೂ. 1,000 ಕೋಟಿ ಅನುದಾನದಲ್ಲಿಅನುಷ್ಟಾನಗೊಳಿಸಲಾಗುತ್ತಿದೆ. ಪ್ರಮುಖವಾಗಿ ಸಂಗೀತ ಕಾರಂಜಿ, ಸ್ಮಾರ್ಟಸ್ಕೂಲ್, ಸ್ಮಾರ್ಟಹೆಲ್ತ್, ಈಜುಗೊಳ, ಘನತಾಜ್ಯ ವಿಲೇವಾರಿಯಲ್ಲಿ ಮಹಾನಗರ ಪಾಲಿಕೆಗೆ ವಾಹನ ಪೂರೈಕೆ, ಮಹಾತ್ಮಾಗಾಂಧಿ ಉದ್ಯಾನವನ, ತೋಳನಕೆರೆ ಉದ್ಯಾನವನ ಅಭಿವೃದ್ಧಿ, ಉಣಕಲ್ ಮಾರುಕಟ್ಟೆ, ಬೆಂಗೇರಿ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆ ಯೋಜನೆಗಳು ಒಳಗೊಂಡಿದ್ದು ಸಾರ್ವಜನಿಕರ ಬಳಕೆಗೆ ಸಿದ್ಧವಾಗಿವೆ.
ಧಾರವಾಡದ ಈಜುಕೋಳದ ಸ್ಥಳದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣವು ಒಟ್ಟು 35 ಕೋಟಿ ವೆಚ್ಚದ ನಿರ್ಮಾಣಗೊಳ್ಳುತ್ತಿದ್ದು, ಈ ಕಾಮಗಾರಿಗೆ ಓಎನ್‍ಜಿಸಿ, ಗೇಲ್ ಮತ್ತು ಎನ್‍ಎಂಡಿಸಿ ಕಂಪನಿಗಳು ಸಿಎಸ್‍ಆರ್ ಯೋಜನೆಯಡಿ ನೆರವು ನೀಡಿವೆ ಮಹಾನಗರದ 82 ವಾರ್ಡಗಳಲ್ಲಿ ನಿರಂತರ ನೀರು ಸರಬರಾಜು ಒದಗಿಸುವ ಮಹತ್ವಕಾಂಕ್ಷಿಯ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆಯ ತ್ಯಾಜ್ಯ ಸಂಸ್ಕರಣ ಘಟಕದಿಂದ ಭೂಸಮೃದ್ಧಿ ಹೆಸರಿನ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಇದೇ ವರ್ಷದಲ್ಲಿ 160 ಟನ್ ಗೊಬ್ಬರವನ್ನು ಮಾರಾಟ ಮಾಡಿ ಆದಾಯವನ್ನು ಸಂಗ್ರಹಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಂಗನವಾಡಿ ಕೇಂದ್ರಗಳ ನಿರ್ವಹಣೆ, ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ಅಪೌಷ್ಠಿಕ ನಿವಾರಣೆಗಾಗಿ ಪೂರಕ ಆಹಾರ ವಿತರಣೆ ಮಾಡಲಾಗುತ್ತಿದೆ. ಮತ್ತು ಆರೋಗ್ಯ ಇಲಾಖೆಯೊಂದಿಗೆ ಮಕ್ಕಳ ಆರೋಗ್ಯ ತಪಾಸಣೆ ಚುಚ್ಚುಮದ್ದು ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಸುಧಾರಣೆಗಾಗಿ ಹಾಗೂ ರಕ್ತಹೀನತೆ ನಿವಾರಿಸುವ ಸಲುವಾಗಿ ಹೆಚ್ಚುವರಿ ಪೌಷ್ಠಿಕಾಂಶ ಉಳ್ಳ ಮಧ್ಯಾಹ್ನದ ಬಿಸಿಊಟ ಯೋಜನೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ ಅವರು ತಿಳಿಸಿದರು ಇದೇ ಸಂದರ್ಭದಲ್ಲಿ ಸಚಿವರು ಜಿಲ್ಲೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃರನ್ನು ನೆನೆಪಿಸಿ, ಅಭಿನಂದನೆಗಳನ್ನು ತಿಳಿಸಿದರು.
ವಿವಿಧ ದಳಗಳಿಂದ ಗೌರವರಕ್ಷೆ:
ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್ ಆರ್.ಪಿ.ಆಯ್ ನಾಗರಾಜ ಪಾಟೀಲ್ ಮತ್ತು ಆರ್.ಎಸ್.ಐ ಮಲ್ಲನಗೌಡ ಹೆಚ್.ಜಿ. ನೇತೃತ್ವದಲ್ಲಿ ಸಚಿವರಿಗೆ ವಿವಿಧ ದಳಗಳಿಂದ ಗೌರವರಕ್ಷೆ ನೀಡಲಾಯಿತು. ಪರೇಡ್‍ದಲ್ಲಿ ಆರ್.ಎಸ್.ಐ ಬಸವರಾಜ ಆಸಂಗಿ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ವಾದಿರಾಜ ದೇಶಪಾಂಡೆ ನೇತೃತ್ವದ ಗೃಹ ರಕ್ಷಕ ದಳ, ಗೋವಿಂದರಡ್ಡಿ ಎ.ಜೆ. ನೇತೃತ್ವದ ಎನ್.ಸಿ.ಸಿ. (ಸಿನೀಯರ್ ಡಿವಿಜನ್), ಎಫ್.ಎಸ್.ಓ ಅಮೃತ ತಾಳೂಕರ ನೇತೃತ್ವದ ಅಗ್ನಿಶಾಮಕ ಇಲಾಖೆ, ಸಬ್ ಇನ್ಸ್‍ಪೆಕ್ಟರ್ ಮಹೇಶ ಪಾಟೀಲ ನೇತೃತ್ವದ ಅಬಕಾರಿ ಇಲಾಖೆ, ಸಂತೋಷಕುಮಾರ ಎಂ.ಜಿ ನೇತೃತ್ವದ ಅರಣ್ಯ ಇಲಾಖೆ, ಐ.ಪಿ ಡಿಸೋಜಾ ನೇತೃತ್ವದ ಜಿಲ್ಲಾ ಸಶಸ್ತ್ರ ಪಪೊಲೀಸ್ ಬ್ಯಾಂಡ್ ದಳಗಳು ಸಚಿವರಿಗೆ ಗೌರವರಕ್ಷೆ ನೀಡಿದವು.
ಡಿಕೆಶಿ- ಸಿದ್ದು ಒಗ್ಗೂಡಿಸುವ ಬೂಸ್ಟರ್ ಡೋಸ್ ಫೇಲ್ ಆಗಿದೆ: ಸಚಿವ ಶ್ರೀರಾಮುಲು
ಸಾಂಸ್ಕೃತಿಕ ಕಾರ್ಯಕ್ರಮ: ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಜೆಎಸ್‍ಎಸ್ ಆಂಗ್ಲ ಮಾಧ್ಯಮ ಶಾಲೆಯ 400 ವಿದ್ಯಾರ್ಥಿಗಳಿಂದ ಕನ್ನಡ ನಾಡುನುಡಿ ಗೀತೆ, ಓಂ ಪ್ರೌಢಶಾಲೆಯ 100 ಮಕ್ಕಳಿಂದ ಗಂಧದಗುಡಿ ಹಾಗೂ ನಾವಾಡುವ ನುಡಿಯೇ ಕನ್ನಡ ನುಡಿ ಮತ್ತು ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 80 ಮಕ್ಕಳಿಂದ ಕರುನಾಡೇ ಕೈಚಾಚಿದೆ ನೋಡೆ, ರಾಜೀವ ಗಾಂಧಿ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ 300 ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವಣಪ್ಪ ಅಷ್ಟಗಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಡಾ.ಗೋಪಾಲ ಬ್ಯಾಕೋಡ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಧಾರವಾಡ ತಹಶೀಲ್ದಾರ ಸಂತೋಷ ಹಿರೇಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಉಮೇಶ ಕೊಂಡಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ.ಸಿ.ಬದ್ರಣ್ಣವರ, ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ವಿ.ಟಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸುಧಾರಣಾ ಇಲಾಖೆಯ ಜಯಲಕ್ಷ್ಮೀ ಹೆಚ್. ಹಾಗೂ ಪೂರ್ಣಿಮಾ ಮುಕ್ಕುಂದಿ ಅವರು ಕಾರ್ಯಕ್ರಮ ನಿರೂಪಿಸಿದರು.