
ಧಾರವಾಡ (ಜೂ.22): ಅಣ್ಣವ್ರೇ ನಾವು ಗಿರವಿ ಇಟ್ಟಿದ್ದ ಬಂಗಾರಾನ ಹಣ ಕಟ್ಟಿಸಿಕೊಂಡು ವಾಪಸ್ ಕೊಡ್ರಿ ಎಂದು ಕೇಳಿದ ರೈತರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾದ ಜ್ಯೂವೆಲ್ಲರಿ ಶಾಪ್ ಮಾಲೀಕ ಮೌನೇಶ್ ಪತ್ತಾರ್. ಇಬ್ಬರ ಮೇಲೆ ಗುಂಡು ಹಾರಿಸಿದ್ದು, ಶಾಲೆ ಮುಗಿಸಿ ಮನೆಗೆ ಹೊರಟಿದ್ದ ಪುಟ್ಟ ಶಾಲಾ ಬಾಲಕಿಯ ಕಾಲಿಗೂ ಗುಂಡು ತಾಗಿದೆ. ಇದರಿಂದ ಬಂಗಾರ ಕೇಳಲು ಬಂದ ಇಬ್ಬರು ಹಾಗೂ ಬಾಲಕಿ ಸೇರಿ ಮೂವರಿಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ಧಾರವಾಡ ತಾಲೂಕಿನ ಗರಗ ಗ್ರಾಮದ ಮೋಹನ್ ಜ್ಯುವೇಲರಿ ಶಾಪ್‌ನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಅಂಗಡಿಯ ಮಾಲೀಕ ಮೌನೇಶ್ ಪತ್ತಾರ ಎಂಬಾತನೇ ಗುಂಡಿನ ದಾಳಿ ನಡೆಸಿದ ಆರೋಪಿ. ಜಿರಗಿವಾಡ ಗ್ರಾಮದ ನಿವಾಸಿಗಳಾದ ಸಿದ್ದಪ್ಪ ಮತ್ತು ನಿಂಗಪ್ಪ ಎಂಬುವವರು ತಾವು ಗಿರವಿ ಇಟ್ಟಿದ್ದ ಬಂಗಾರವನ್ನು ಬಿಡಿಸಿಕೊಳ್ಳಲು ಅಂಗಡಿಗೆ ಬಂದಿದ್ದರು. ಈ ವೇಳೆ ಬಂಗಾರ ವಾಪಸ್ ನೀಡುವ ವಿಚಾರದಲ್ಲಿ ಮಾಲೀಕ ಮತ್ತು ಗ್ರಾಹಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆಕ್ರೋಶಗೊಂಡ ಮೌನೇಶ್ ಪತ್ತಾರ, ತನ್ನ ಬಳಿಯಿದ್ದ ಬಂದೂಕಿನಿಂದ ಸಿದ್ದಪ್ಪ ಮತ್ತು ನಿಂಗಪ್ಪ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡುಗಳು ಅವರ ಹೊಟ್ಟೆ, ತೊಡೆ ಮತ್ತು ಕಾಲಿನ ಭಾಗಕ್ಕೆ ತಗುಲಿವೆ. ದುರಂತವೆಂದರೆ, ಇದೇ ಸಮಯದಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಶ್ರದ್ಧಾ ಬೈಯಪ್ಪನವರ ಎಂಬ ಶಾಲಾ ಬಾಲಕಿಯ ಕಾಲಿನ ಭಾಗಕ್ಕೂ ಗುಂಡು ತಗುಲಿದೆ. ಅಮಾಯಕ ಬಾಲಕಿಯೂ ಕಿರಾತಕನ ಪೈರಿಂಗ್‌ಗೆ ಬಲಿಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ದಾಳಿ ನಡೆಸಿದ ತಕ್ಷಣ ಮಾಲೀಕ ಮೌನೇಶ್ ಪತ್ತಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಸಿದ್ದಪ್ಪ, ನಿಂಗಪ್ಪ ಮತ್ತು ಬಾಲಕಿಯನ್ನು ತಕ್ಷಣವೇ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಸ್ಥಿತಿಯೂ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಮತ್ತು ಗರಗ ಪಿಎಸ್‌ಐ ಪ್ರವೀಣ ಗಂಗೋಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿ ಮೌನೇಶ್ ಪತ್ತಾರನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಬಂಗಾರ ಗಿರವಿ ಇಡುವ ವಿಚಾರದಲ್ಲಿ ನಡೆದ ಸಣ್ಣ ಗಲಾಟೆ ಕೊಲೆಯಲ್ಲಿ ಅಂತ್ಯವಾಗುವ ಹಂತಕ್ಕೆ ತಲುಪಿರುವುದು ಜನರಲ್ಲಿ ಆತಂಕ ಮೂಡಿಸಿದೆ.