ಹಣವಂತರಿಗೆ ಗಾಳ ಹಾಕ್ತಿದ್ದ ಕಿರುತೆರೆ ನಟಿ ಅರೆಸ್ಟ್; ಆಭರಣ ಬಿಡಿಸೋ ನೆಪದಲ್ಲಿ ಲಕ್ಷ ಲಕ್ಷ ವಂಚಿಸುತ್ತಿದ್ದ ‘ಕಿಲಾಡಿ’ ವನಿತಾ

Published : Jun 22, 2026, 04:35 PM IST
Vanita Serial Actress

ಸಾರಾಂಶ

ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಣವಂತರನ್ನು ವಂಚಿಸುತ್ತಿದ್ದ ವನಿತಾ ಎಂಬಾಕೆಯನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತನ್ನ ಆಭರಣ ಅಡವಿಟ್ಟಿದ್ದು, ಬಿಡಿಸಿಕೊಳ್ಳಲು ಹಣ ಬೇಕೆಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಈಕೆ ಪರಾರಿಯಾಗುತ್ತಿದ್ದಳು. 

ಬೆಂಗಳೂರು (ಜೂ.22): ತಾನೊಬ್ಬಳು ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು, ಸಾಮಾಜಿಕ ಜಾಲತಾಣಗಳ ಮೂಲಕ ಹಣವಂತರನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟಿಯ ಮಾತುಗಳನ್ನು ನಂಬಿ ಮೋಸಹೋದ ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ.

ಹಣ ಪೀಕಲು ‘ಆಭರಣ’ದ ರಹಸ್ಯ ನಾಟಕ!

ಬಂಧಿತ ನಟಿ ವನಿತಾಳ ವಂಚನೆಯ ಜಾಲ ಅತ್ಯಂತ ಚಾಣಾಕ್ಷತನದಿಂದ ಕೂಡಿರುತ್ತಿತ್ತು. ಮೊದಲಿಗೆ ತಾನು ಸೀರಿಯಲ್ ನಟಿ ಎಂದು ಶ್ರೀಮಂತರಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಈಕೆ, ಬಳಿಕ ನಿರಂತರವಾಗಿ ಮಾತನಾಡಿ ನಯವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು. ಸಂಪೂರ್ಣ ನಂಬಿಕೆ ಬಂದ ಮೇಲೆ ತನ್ನ ಕಷ್ಟದ ಕಥೆಗಳನ್ನು ಹೇಳಲು ಆರಂಭಿಸುತ್ತಿದ್ದಳು. 'ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣದ ಅಗತ್ಯವಿದೆ. ಕೇವಲ ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ಕೊಡುತ್ತೇನೆ' ಎಂದು ನಂಬಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು.

ಕ್ಯಾಮೆರಾ ಇಲ್ಲದ ಜಾಗದಲ್ಲೇ ಡೀಲಿಂಗ್, ಆಮೇಲೆ ನೋ ರೆಸ್ಪಾನ್ಸ್!

ಈ ಕಿಲಾಡಿ ನಟಿಯ ಅಸಲಿ ಆಟ ಶುರುವಾಗುತ್ತಿದ್ದುದೇ ಹಣ ಪಡೆಯುವಾಗ! ಸಿಸಿಟಿವಿ (CCTV) ಕ್ಯಾಮೆರಾಗಳು ಇಲ್ಲದ ಡಿಜಿಟಲ್ ಪುರಾವೆ ಸಿಗದಂತಹ ರಹಸ್ಯ ಜಾಗಗಳನ್ನು ಹುಡುಕಿ, ಅಲ್ಲಿಗೆ ದೂರುದಾರರನ್ನು ಕರೆಸಿಕೊಂಡು ಕೈಯಾರೆ ನಗದು ಹಣವನ್ನು ಪಡೆದು ಎಸ್ಕೇಪ್ ಆಗುತ್ತಿದ್ದಳು. ಒಮ್ಮೆ ಹಣ ಕೈ ಸೇರಿದ ಮೇಲೆ ನಟಿಯ ಅಸಲಿ ಮುಖ ಬಯಲಾಗುತ್ತಿತ್ತು. ಹಣ ನೀಡಿದವರು ವಾಪಸ್ ಕೇಳಲು ಕರೆ ಮಾಡಿದರೆ ಯಾವುದೇ ರೆಸ್ಪಾನ್ಸ್ ನೀಡುತ್ತಿರಲಿಲ್ಲ, ಮೆಸೇಜ್ ಮಾಡಿದರೆ ರಿಪ್ಲೈ ಕೂಡ ಮಾಡುತ್ತಿರಲಿಲ್ಲ.

ಮೂರು ಠಾಣೆಗಳಲ್ಲಿ ದೂರು; ಕೊನೆಗೂ ಪೊಲೀಸ್ ಅತಿಥಿ!

ಇದೇ ರೀತಿ ಈ ನಟಿಯನ್ನು ನಂಬಿ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಯುವಕನೊಬ್ಬ ಬರೋಬ್ಬರಿ 1 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿದ್ದಾನೆ. ತನಗೆ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಆತ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಟಿ ವನಿತಾ ವಿರುದ್ಧ ದೂರು ದಾಖಲಿಸಿದ್ದಾನೆ.

ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈಕೆಯ ವಿರುದ್ಧ ಕೇವಲ ಒಂದು ದೂರು ಮಾತ್ರವಲ್ಲ, ನಗರದ ಗೋವಿಂದರಾಜನಗರ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲಿಯೂ ಇದೇ ಮಾದರಿಯ ವಂಚನೆಯ ದೂರುಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕಿರುತೆರೆ ನಟಿ ವನಿತಾಳನ್ನು ಬಂಧಿಸಿದ್ದು, ಈಕೆ ಇನ್ನೂ ಎಷ್ಟು ಜನರಿಗೆ ಸೋಷಿಯಲ್ ಮೀಡಿಯಾ ಮೂಲಕ ಗಾಳ ಹಾಕಿ ವಂಚಿಸಿದ್ದಾಳೆ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು ‘ETCS’ ಸಿಗ್ನಲಿಂಗ್‌ಗೆ ಸಜ್ಜಾದ ಕೆ-ರೈಡ್‌
ಬಿಜೆಪಿ ಧರ್ಮಸ್ಥಳ ಸಭೆಗೆ ಹಿರಿಯರ ವಿರೋಧ, ಕುದುರೆ ವ್ಯಾಪಾರ ಮಾಡಿದವರು ಬಂದು ಪ್ರಮಾಣ ಮಾಡ್ಲಿ ಎಂದ ಆರ್ ಅಶೋಕ್