
ಧಾರವಾಡ: ಅದು ಇಬ್ಬರು ಮಕ್ಕಳು, ಮುದ್ದಾದ ಪತ್ನಿ ಹಾಗೂ ಹಿರಿಯ ತಂದೆ ಇದ್ದ ಸುಖ ಸಂಸಾರ ಅದ್ಯಾವ ಕಾರ್ಮೋಡ ಆ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಪ್ರಪಂಚದ ಜ್ಞಾನವೇ ಗೊತ್ತಿಲ್ಲದ ಮುಗ್ದ ಮನಸ್ಸಿನ ಮಕ್ಕಳೊಂದಿಗೆ ತಂದೆ ಆತ್ಮ*ಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಬಾಳಿ ಬದುಕಬೇಕಿದ್ದ ಮಕ್ಕಳು ಶಾಲಾ ಸಮವಸ್ತ್ರದಲ್ಲೇ ಇಹಲೋಕ ತ್ಯಜಿಸಿದ್ದನ್ನು ಕಂಡು ಇಡೀ ಚಿಕ್ಕಮಲ್ಲಿಗವಾಡ ಗ್ರಾಮವೇ ಮಮ್ಮಲ ಮರುಗಿದೆ ಎಂತಹ ತಂದೆ, ತಾಯಿಯಾದರೂ ಮಕ್ಕಳನ್ನು ಬದುಕಿಸಿ ತಾವು ಪ್ರಾಣ ಕೊಟ್ಟ ಉದಾಹರಣೆ ನಮ್ಮ ಕಣ್ಣಮುಂದೆ ಇವೆ ಆದರೆ, ಈ ತಂದೆ ತನ್ನ ಮಕ್ಕಳ ಭವಿಷ್ಯವನ್ನೇ ಕೊಂದು ತಾನೂ ಮೃತಪಟ್ಟಿದ್ದಾನೆ.
ಹೌದು! ಇದು ಧಾರವಾಡ ತಾಲೂಕಿನ ಚಿಕ್ಕ ಮಲ್ಲಿಗವಾಡ ಗ್ರಾಮ. ಈ ಗ್ರಾಮದ ನಾರಾಯಣ ಶಿಂಧೆ ಎಂಬಾತ ತನ್ನ ತಂದೆ ವಿಠ್ಠಲ ಶಿಂಧೆ ಮಕ್ಕಳಾದ ಶಿವಕುಮಾರ ಶಿಂಧೆ ಹಾಗೂ ಶ್ರೀನಿಧಿ ಶಿಂಧೆಯವರೊಂದಿಗೆ ಅದೇ ಗ್ರಾಮದ ಹೊರವಲಯದಲ್ಲಿರುವ ಯಲ್ಲಮನ ಬಾವಿಗೆ ಧುಮುಕಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ತಂದೆ ವಿಠ್ಠಲರಾವ್(85), ಪುತ್ರ ನಾರಾಯಣ ಶಿಂಧೆ(42) ಮೊಮ್ಮಕ್ಕಳಾದ ಶಿವರಾಜ (12), ಶ್ರೀನಿಧಿ(10) ಎಂದು ಗುರುತಿಸಲಾಗಿದೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮ*ಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು. ಮತ್ತೊಂದೆಡೆ ಸಾಲಭಾದೆ ಎಂದೂ ಹೇಳಲಾಗುತ್ತಿದೆ. ತನಿಖೆಯಿಂದ ಮಾತ್ರವೇ ನಿಖರ ಕಾರಣ ಹೊರಬೀಳಲಿದೆ.
ಶಾಲಾ ಸಮವಸ್ತ್ರದಲ್ಲೇ ತನ್ನ ಮಕ್ಕಳನ್ನು ಕರೆದುಕೊಂಡು ಬಾವಿಗೆ ಹೋದ ತಂದೆ ಕಿಂಚಿತ್ತೂ ಕರುಣೆ ಇಲ್ಲದಂತೆ ತನ್ನದೇ ಮಕ್ಕಳನ್ನು ಭಾವಿಗೆ ನೂಕಿದ್ದಾನೆ. ಆನಂತರ ತನ್ನ ತಂದೆಯೊಂದಿಗೆ ತಾನೂ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈತನ ಮಗ ಶಶಿಕುಮಾರ 6 ನೇ ತರಗತಿಯಲ್ಲಿ ಓದುತ್ತಿದ್ದರೆ ಮಗಳು ಶ್ರೀನಿಧಿ 5 ನೇ ತರಗತಿಯಲ್ಲಿ ಓದುತ್ತಿದ್ದಳು. ನಾರಾಯಣ ಇಂದು ಬೆಳಿಗ್ಗೆ ತನ್ನ ತಂದೆ ವಿಠ್ಠಲ ಹಾಗೂ ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ, ಗ್ರಾಮದ ಹೊರವಲಯದಲ್ಲಿರುವ ಯಲ್ಲಮ್ಮನ ಬಾವಿಗೆ ತೆರಳಿ ಅದರ ಹತ್ತಿರವೇ ಬೈಕ್ ನಿಲ್ಲಿಸಿ ತನ್ನ ಮಕ್ಕಳು ಹಾಗೂ ತಂದೆಯನ್ನು ಬಾವಿ ಬಳಿ ಕರೆದುಕೊಂಡು ಹೋಗಿ ತನ್ನ ಹಠ ಸಾಧಿಸಿದ್ದಾನೆ ಮೇಲ್ನೋಟಕ್ಕೆ ಇದು ಸಾಲದಿಂದ ಬೇಸತ್ತು ಮಾಡಿಕೊಂಡ ಆತ್ಮ*ಹತ್ಯೆ ಎಂದು ನಾರಾಯಣನ ಪತ್ನಿ ಹೇಳಿಕೆ ನೀಡಿದ್ದಾಳೆ.
ತನ್ನ ತಂದೆ ತಾಯಿ ಸಾಲ ಎಷ್ಟೇ ಇರಲಿ. ಆ ಚಿಕ್ಕ ಮಕ್ಕಳು ವೃದ್ಧ ತಂದೆಯ ಪಾತ್ರ ಇದರಲ್ಲಿ ಏನಿತ್ತು? ಜಗತ್ತನ್ನೇ ಅರಿಯದ ಮುದ್ದು ಮಕ್ಕಳನ್ನು ಕೊಂದು ತಾನೂ ಆತ್ಮ*ಹತ್ಯೆ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ಯಾಕೆ ಎಂಬುದೇ ಪ್ರಶ್ನೆಯಾಗಿದೆ. ಏನೂ ಅರಿಯದ ಆ ಮುದ್ದು ಮಕ್ಕಳು ತನ್ನ ತಂದೆ ಬೈಕ್ ಮೇಲೆ ತಮ್ಮನ್ನು ಎಲ್ಲೋ ಕರೆದುಕೊಂಡು ಹೋಗುತ್ತಿದ್ದಾನೆಂದು ಖುಷಿಯಿಂದಲೇ ಬೈಕ್ ಹತ್ತಿದ್ದವು ಆದರೆ ತಮ್ಮ ತಂದೆ ತಮ್ಮನ್ನು ಜವರಾಯನೂರಿಗೆ ಕರೆದುಕೊಂಡು ಹೋಗುತ್ತಿದ್ದಾನೆಂಬ ಅರಿವು ಸಹ ಆ ಮಕ್ಕಳಿಗೆ ಇರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ಎಸ್‌ಪಿ ಗುಂಜನ್ ಆರ್ಯ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಸಾಲಬಾಧೆಯಿಂದಲೇ ತನ್ನ ಪತಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ನಾರಾಯಣನ ಪತ್ನಿ ಹೇಳಿದ್ದು, ಈ ಬಗ್ಗೆಯೂ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಸದ್ಯಕ್ಕಂತೂ ತನ್ನ ಪತ್ನಿಯೊಬ್ಬಳನ್ನೇ ಬಿಟ್ಟು ನಾರಾಯಣ ತನ್ನ ಮಕ್ಕಳ ಸಮೇತ ಬಾರದ ಲೋಕಕ್ಕೆ ತೆರಳಿದ್ದು, ಆ ಮಕ್ಕಳ ಮೃತದೇಹ ಕಂಡು ಅವರ ಕುಟುಂಬಸ್ಥರು, ಊರವರು ಗೋಳಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ