ಬಾಗಿಲಲ್ಲಿ ಯಾರೋ ತಂದಿಟ್ಟ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ

Published : Sep 16, 2026, 08:32 AM IST
Dharwad Ganesha

ಸಾರಾಂಶ

ಮುಸ್ಲಿಂ ಕುಟುಂಬವೊಂದರ ಮನೆ ಬಾಗಿಲಲ್ಲಿ ಅಪರಿಚಿತರು ಗಣೇಶನ ಮೂರ್ತಿಯನ್ನು ಇಟ್ಟು ಹೋಗಿದ್ದರು. ಈ ಮೂರ್ತಿಯನ್ನು ಕುತುಬುದ್ದೀನ್‌ ಬೆಳಗಲಿ ಅವರ ಕುಟುಂಬವು ಹಿಂದೂ ಸಂಪ್ರದಾಯದಂತೆ ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದಿದೆ.

ಧಾರವಾಡ: ಮುಸ್ಲಿಂ ವ್ಯಕ್ತಿಯೊಬ್ಬ ತಮ್ಮ ಮನೆಯ ಬಾಗಿಲು ಬಳಿ ಅಪರಿಚಿತರು ಇಟ್ಟುಹೋಗಿದ್ದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಮೆರೆದ ಅಪರೂಪದ ಪ್ರಸಂಗ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿದೆ.

ಗಣೇಶ ಚತುರ್ಥಿಯ ದಿನವಾದ ಸೋಮವಾರ ಬೆಳ್ಳಂಬೆಳಗ್ಗೆ ಯರಗುಪ್ಪಿ ಗ್ರಾಮದ ಕುತುಬುದ್ದೀನ್‌ ಬೆಳಗಲಿ ಅವರ ಮನೆಯ ಬಾಗಿಲಿನ ಹೊರಗೆ ಯಾರೋ ಗಣೇಶನ ವಿಗ್ರಹ ಇಟ್ಟು ಹೋಗಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಗಣೇಶನ ವಿಗ್ರಹ ಕಣ್ಣಿಗೆ ಬಿದ್ದಿದೆ. ಬಳಿಕ ಕುತುಬುದ್ದೀನ್‌ ಊರಲ್ಲಿರುವ ಹಿಂದೂ ಸಮುದಾಯದ ಹಿರಿಯರಿಗೆ ಕೇಳಿದ್ದಾರೆ. ಕೆಲವರು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಬಹುದು ಎಂದು ಸಲಹೆ ನೀಡಿದರೆ, ನಿಮಗೆ ಸಾಧ್ಯವಾಗದಿದ್ದರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮಂಟಪದಲ್ಲಿಯೂ ಇಡಬಹುದು ಎಂದು ತಿಳಿಸಿದ್ದಾರೆ.

ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜೆ

ಮನೆಯವರೆಗೂ ಬಂದಿರುವ ಗಣೇಶನನ್ನು ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜೆ ಮಾಡಲು ಕುತುಬುದ್ದೀನ್‌ ನಿರ್ಧರಿಸಿದ್ದಾರೆ. ಊರಿನ ವೀರಭದ್ರಯ್ಯ ಶಾಸ್ತ್ರೀಗಳ ನೇತೃತ್ವದಲ್ಲಿ ಮನೆಯಲ್ಲೇ ಪ್ರತಿಷ್ಠಾಪಿಸಿ ಪೂಜೆ ಮಾಡಿ ನೈವೇದ್ಯ ಮಾಡಿದ್ದಾರೆ. ಹಿಂದೂಗಳ ಮನೆಯಲ್ಲಿ ಮಾಡಿದಂತೆ ಸಿಹಿ ಖಾದ್ಯ ಮಾಡಿ ನೈವೇದ್ಯ ಮಾಡುತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಿತು.

ಹಿಂದೂ ಮತ್ತು ಮುಸ್ಲಿಂ ಸಮಾಜ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಮನೆ ಬಾಗಿಲಿಗೆ ಬಂದ ಗಣೇಶನನ್ನು ಪ್ರತಿಷ್ಠಾಪಿಸಿದ್ದೇನೆ. ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ, ನೈವೇದ್ಯ ಮಾಡಿದ್ದೇನೆ. ಈ ವರ್ಷ 3ನೆಯ ದಿನ ವಿಸರ್ಜನೆ ಮಾಡಲಾಗುವುದು ಎಂದು ಕುತುಬುದ್ದೀನ್‌ ಬೆಳಗಲಿ ತಿಳಿಸಿದರು. ಊರಿನ ಜನರು ಇವರ ಮನೆಗೆ ಆಗಮಿಸಿ ಗಣೇಶನನ್ನು ವೀಕ್ಷಿಸಿ, ಪ್ರಸಾದ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಏರ್‌ಪೋರ್ಟ್‌ ಸಮೀಪದ 8 ಕೋಟಿ ಮೌಲ್ಯದ 1.80 ಎಕ್ರೆ ಭೂಮಿಯನ್ನು ದಾನ ಮಾಡಿದ ಇನಾಯತ್ ಅಲಿ ಕುಟುಂಬ

PREV
Read more Articles on
click me!

Recommended Stories

ಏರ್‌ಪೋರ್ಟ್‌ ಸಮೀಪದ 8 ಕೋಟಿ ಮೌಲ್ಯದ 1.80 ಎಕ್ರೆ ಭೂಮಿಯನ್ನು ದಾನ ಮಾಡಿದ ಅಲಿ ಕುಟುಂಬ
ವಂದೇಮಾತರಂ 2 ಚರಣ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್‌ ಅರ್ಜಿ!