
ಸೌಜನ್ಯಾ ಅವರ ಮೇಲೆ ನಡೆದಿರುವ ಬರ್ಬರ ಕೃತ್ಯಕ್ಕೆ ಸಂಬಂಧಿಸಿದಂತೆ ನಡೆದ ಘಟನೆಯಿಂದ ಹಿಡಿದು ಇದೀಗ ಅನಾಮಿಕ ಮುಸುಕುಧಾರಿ ವ್ಯಕ್ತಿ ಧರ್ಮಸ್ಥಳದಾದ್ಯಂತ ಗುಂಡಿ ತೋಡಿಸುತ್ತಿರುವವರೆಗೆ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಯಾಗಿದೆ. ಈ ಮುಸುಕುಧಾರಿ ಯಾರು, ಆತನ ಉದ್ದೇಶವೇನು ಎನ್ನುವ ಬಗ್ಗೆ ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಇದಾಗಲೇ ಆತ ಹೇಳಿರುವ 13 ಪಾಯಿಂಟ್ಗಳಲ್ಲಿ ತನಿಖಾಧಿಕಾರಿಗಳು ಭಾರಿ ಗುಂಡಿ ತೋಡಿದ್ದು, ಆತ ಹೇಳಿರುವಂತೆ ಯಾವುದೂ ಸದ್ಯದವರೆಗೆ ಸಾಬೀತಾಗಿಲ್ಲ. ಇದರಿಂದ ಸರ್ಕಾರದ ಮಟ್ಟಿದಲ್ಲಿಯೇ ಅಸಮಾಧಾನ ಉಂಟಾಗುತ್ತಿದೆ. ಅದೇ ಇನ್ನೊಂದೆಡೆ, ಸುಜಾತಾ ಭಟ್ ಎಂಬಾಕೆ ತಮ್ಮ ಮಗಳು ಅನನ್ಯಾ ಭಟ್ ಇದೇ ರೀತಿ ಮೃತಪಟ್ಟಿರುವುದಾಗಿ ಹೇಳಿಕೆ ನೀಡಿದ್ದು, ಆಕೆ ಹೇಳುತ್ತಿರುವುದೆಲ್ಲವೂ ಸತ್ಯಕ್ಕೆ ದೂರ ಎಂದು ಇದಾಗಲೇ ಬಹುತೇಕ ಸಾಬೀತು ಆಗಿದೆ. ಅನನ್ಯಾ ಭಟ್ ಎಂಬಾಕೆ ಅಸ್ತಿತ್ವದಲ್ಲಿಯೇ ಇಲ್ಲ, ಸುಜಾತಾ ಭಟ್ಗೆ ಮಗಳೇ ಇಲ್ಲ ಎನ್ನುವಂಥ ಹೇಳಿಕೆಗಳೂ ಬರುತ್ತಿದ್ದು, ಈ ಘಟನೆಯ ಮೂಲ ಉದ್ದೇಶವೇ ಬುಡಮೇಲಾಗುವಂತೆ ಆಗಿದೆ.
ಇದೀಗ, ಮುಸುಕುಧಾರಿ ವ್ಯಕ್ತಿಯ ವಿಶೇಷ ಸಂದರ್ಶನ ನಡೆದಿದ್ದು, ಇಂಡಿಯಾ ಟುಡೆ ಮತ್ತು ನ್ಯೂಸ್ ಮಿನಿಟ್ ಚಾನೆಲ್ಗೆ ಆತ ಈ ಬಗ್ಗೆ ಮಾಹಿತಿ ನೀಡಿದ್ದಾನೆ. 13 ಸ್ಥಳಗಳಲ್ಲಿ 13ನೇ ಪಾಯಿಂಟ್ ಒಂದರಲ್ಲಿಯೇ ನಾನು 70-80 ಶವಗಳನ್ನು ಹೂಳಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಉಳಿದ ಶವಗಳೆಲ್ಲವೂ ಬೆಟ್ಟ-ಗುಡ್ಡ ಪ್ರದೇಶದಲ್ಲಿ ಹೂಳಲಾಗಿದೆ. ಧರ್ಮಸ್ಥಳದ ದೇವಾಲಯ ಆಡಳಿತ ಮಂಡಳಿಯಲ್ಲಿ ತಾನು ಕೆಲಸ ಮಾಜಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಶವಗಳನ್ನು ಅರಣ್ಯ ಪ್ರದೇಶಗಳಲ್ಲಿ ದಾಖಲೆಗಳಿಲ್ಲದೆ ಅಥವಾ ಅಧಿಕೃತ ಮೇಲ್ವಿಚಾರಣೆಯಿಲ್ಲದೆ ಹೂಳಲಾಗಿದೆ ಎಂಬುದಾಗಿ ಈತ ಸಂದರ್ಶನದಲ್ಲಿ ಹೇಳಿದ್ದಾನೆ. ಎರಡು ದಶಕಗಳ ಅವಧಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ಶವಗಳನ್ನು ಒಳಗೊಂಡಂತೆ ಹಲವಾರು ಶವಗಳನ್ನು ಹೂಳಲು ತನ್ನ ಮೇಲ್ವಿಚಾರಕರು ತನ್ನನ್ನು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾನೆ.
ಸೌಜನ್ಯ ಶವ ಬಿಟ್ಟಿದ್ಯಾಕೆ?
2012ರಲ್ಲಿ ಧರ್ಮಸ್ಥಳದ ಬಳಿ 17 ವರ್ಷದ ಸೌಜನ್ಯಳ ಕೊಲೆ ಪ್ರಕರಣದ ಬಗ್ಗೆಯೂ ಮುಸುಕುಧಾರಿ ಮಾತನಾಡಿದ್ದಾನೆ. ನೂರಾರು ಶವ ಹೂತಿದ್ದರೂ ಸೌಜನ್ಯ ಶವ ಹೂತಿರಲಿಲ್ಲವೆ, ಅದನ್ನು ಬಿಟ್ಟಿದ್ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಮುಸುಕುಧಾರಿ, 'ಆ ರಾತ್ರಿ ತಾನು ರಜೆಯಲ್ಲಿದ್ದೆ. ಆಕೆ ಕೊಲೆಯಾದ ರಾತ್ರಿ ನಾನು ಎಲ್ಲಿದ್ದೇನೆ ಎಂದು ಕೇಳುವ ಕರೆ ನನಗೆ ಬಂದಿತು. ನಾನು ರಜೆಯ ಮೇಲೆ ನನ್ನ ಊರಿನಲ್ಲಿದ್ದೇನೆ ಎಂದು ಹೇಳಿದೆ. ರಜೆಯಲ್ಲಿದ್ದಕ್ಕಾಗಿ ಅವರು ನನಗೆ ಕರೆ ಮಾಡಿದರು. ಮರುದಿನ, ನಾನು ಕೊಲೆಯಾದ ಹುಡುಗಿಯ ಶವವನ್ನು ನೋಡಿದೆ" ಎಂದು ಹೇಳಿದ್ದಾನೆ. ದೇವಾಲಯಕ್ಕೆ ಕಳಂಕ ತರುವ ಉದ್ದೇಶ ನನಗೆ ಇಲ್ಲ. ಹೀಗೆ ಮಾಡಿದರೆ ನನಗೆ ಪ್ರಯೋಜನ ಏನು ಎಂದು ಪ್ರಶ್ನಿಸಿರುವ ಆತ, ಶವಗಳನ್ನು ಪತ್ತೆಹಚ್ಚುವುದು ಮತ್ತು ಅಂತಿಮ ವಿಧಿವಿಧಾನಗಳನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನನ್ನ ಉದ್ದೇಶ. ನಾನು ಕಳ್ಳತನ ಮಾಡಿ ಬದುಕಬೇಕಾದರೆ, ನಾನು ದೇವಾಲಯದಲ್ಲಿ ಏಕೆ ಕೆಲಸ ಮಾಡಬೇಕು ಮತ್ತು ಸೇವೆ ಮಾಡಬೇಕು? ನಾನು ಹಿಂದೂ, ಪರಿಶಿಷ್ಟ ಜಾತಿಗೆ ಸೇರಿದವನು" ಎಂದಿದ್ದಾನೆ.
ಶವಗಳನ್ನು ಯಾವಾಗಲೂ ಅರಣ್ಯ ಪ್ರದೇಶಗಳಲ್ಲಿ ಅಥವಾ ಹಳೆಯ ರಸ್ತೆಗಳಲ್ಲಿ ಹೂಳಲಾಗುತ್ತಿತ್ತು ಮತ್ತು ಎಂದಿಗೂ ಸ್ಮಶಾನಗಳಲ್ಲಿ ಅಲ್ಲ. ಅವರು ನಮಗೆ ತೋರಿಸಿದಲ್ಲೆಲ್ಲಾ ನಾವು ಅಲ್ಲಿ ಅಗೆದಿದ್ದೇವೆ ಎಂದು ತನ್ನ ಜೊತೆಗಿದ್ದ ಕೆಲವರ ಹೆಸರುಗಳನ್ನು ರಿವೀಲ್ ಮಾಡಿದ್ದಾನೆ. ಅನೇಕ ಶವಗಳು ಲೈಂಗಿಕ ದೌರ್ಜನ್ಯದ ಸ್ಪಷ್ಟ ಚಿಹ್ನೆಗಳನ್ನು ಹೊಂದಿದ್ದವು. ಎಲ್ಲಾ ವಯಸ್ಸಿನವರೂ ಅದರಲ್ಲಿ ಇದ್ದರು. ಸುಮಾರು 100 ಶವಗಳನ್ನು ನಮ್ಮ ತಂಡ ಹೂತಿದ್ದು, ಅದರ ಪೈಕಿ 90 ಮಹಿಳೆಯರೇ ಆಗಿದ್ದರು ಎಂದಿದ್ದಾರೆ. ಇಲ್ಲಿಯವರೆಗೆ ಒಂದೇ ಸ್ಥಳದಲ್ಲಿ ಮಾನವ ಅವಶೇಷಗಳು ಏಕೆ ಕಂಡುಬಂದಿವೆ ಎಂದು ಕೇಳಿದಾಗ, ಸವೆತ, ಅರಣ್ಯ ಬೆಳವಣಿಗೆ ಮತ್ತು ನಿರ್ಮಾಣ ಕಾರ್ಯಗಳಿಂದಾಗಿ ಕೆಲವು ಸಮಾಧಿ ಸ್ಥಳಗಳು ಕಳೆದುಹೋಗಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಬೇರೆ ಯಾರೂ ತಡೆಯಲಿಲ್ಲ ಯಾಕೆ?
ಹಗಲಿನ ವೇಳೆಯಲ್ಲಿ ಶವಗಳನ್ನು ಹೂಳುವುದನ್ನು ಸ್ಥಳೀಯರು ನೋಡಿದ್ದಾರೆ, ಆದರೆ ಯಾರೂ ಅವರನ್ನು ತಡೆಯಲಿಲ್ಲ ಅಥವಾ ಪ್ರಶ್ನಿಸಲಿಲ್ಲ ಎಂದಿದ್ದಾರೆ. ಶವಗಳಿಂದ ಆಭರಣಗಳನ್ನು ಕದಿಯಲಾಗಿದೆ ಮತ್ತು ದೇವಾಲಯಕ್ಕೆ ಕಳಂಕ ತರಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಮುಸುಕುಧಾರಿ, "ದೇವಾಲಯದ ಹೆಸರಿಗೆ ಕಳಂಕ ತರುವುದರಿಂದ ನನಗೇನು ಸಿಗುತ್ತದೆ ಎಂದು ಕೇಳಿದ್ದಾನೆ. ನಾನು ಮಾಡಿದ ಕೆಲಸದಿಂದ ನನಗೆ ತುಂಬಾ ನೋವಾಗಿತ್ತು, ಕನಸಿನಲ್ಲಿಯೂ ಶವಗಳು ಬರುತ್ತಿದ್ದವು. ತಪ್ಪಿತಸ್ಥ ಭಾವನೆ ಬರುತ್ತಿತ್ತು. ಅದಕ್ಕೆ ಬಂದಿದ್ದೇನೆ ಎಂದಿದ್ದಾನೆ.