
ಬೆಂಗಳೂರು: ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಶವ ಹೂತಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇಂದು ಸಹ ಕೆಲವೆಡೆ ಶೋಧ ಕಾರ್ಯ ನಡೆಸಲಾಗಿದ್ದರೂ ಅನಾಮಿಕ ಹೇಳಿದಂತೆ ಯಾವುದೇ ಅಸ್ಥಿಪಂಜರ ಸಿಕ್ಲಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಮಹಿಳಾ ಆಯೋಗ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ಕೆಲವು ಮಾಹಿತಿಗಳನ್ನು ಕೇಳಿದೆ. ಈ ಹಿಂದೆ ಮಹಿಳಾ ಆಯೋಗ ಪತ್ರ ಬರೆದಿತ್ತು. ನೂರಾರು ಶವ ಹೂತಿರುವ ಆರೋಪಗಳ ಸಾಮಾಜಿಕ ಜಾಲತಾಣದಲ್ಲಿ ಬಲವಾಗಿ ಕೇಳಿ ಬಂದ ಹಿನ್ನೆಲೆ ಈ ಸಂಬಂಧ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೂ ಮಹಿಳಾ ಆಯೋಗ ಪತ್ರ ಬರೆದಿತ್ತು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಈ ಸಂಬಂಧ ಪತ್ರವೊಂದನ್ನು ಬರೆದಿದ್ದಾರೆ.
ಧರ್ಮಸ್ಥಳ ಭಾಗದಲ್ಲಿ ನಾಪತ್ತೆಯಾಗಿರುವ ಹಾಗೂ ಅಸಹಜ ಸಾವುಗಳಿಗೆ ತುತ್ತಾಗಿರುವ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳು ಹಾಗೂ ಮಹಿಳೆಯರ ವಿವರ ಕೇಳಿ ಪತ್ರ ಬರೆಯಲಾಗಿದೆ. 1990 ರಿಂದ ಇಲ್ಲಿಯವರೆಗಿನ ಮಾಹಿತಿಯನ್ನು ರಾಜ್ಯ ಮಹಿಳಾ ಆಯೋಗ ಕೇಳಿದೆ. ಈ ಹಿಂದೆಯೂ ಈ ಬಗ್ಗೆ ವಿವರ ಕೇಳಿ ಪತ್ರ ಬರೆದಾಗ ಪೊಲೀಸ್ ಇಲಾಖೆ, 2005ರಿಂದ ಮಾತ್ರ ಮಾಹಿತಿ ನೀಡಿತ್ತು. ಈ ನಿಟ್ಟಿನಲ್ಲಿ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಕಮಿಷನರ್ ಗೆ ಪತ್ರ ಬರೆದಿರುವ ಮಹಿಳಾ ಆಯೋಗ 1990 ರಿಂದ 2005 ರ ವರೆಗಿನ ವಿವರಗಳನ್ನು ಒದಗಿಸುವಂತೆ ಸೂಚಿಸಿದೆ.
ಧರ್ಮಸ್ಥಳ ಪ್ರಕರಣದ ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆಗೆ ಸಂಸದ ಬಸವರಾಜ್ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು, ವಿಧಾನಸಭೆ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಏನು ಹೇಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಪ್ರಕರಣದಲ್ಲಿ ಏನೇನು ಆಗಿದೆ? ತನಿಖೆಯಲ್ಲಿ ತಿಳಿದು ಬಂದಿರುವ ಮಾಹಿತಿ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಸತ್ಯ ಜನರಿಗೆ ತಿಳಿಯಲಿ ಅನ್ನೋದೇ ನಮ್ಮ ಉದ್ದೇಶವಾಗಿದ್ದು, ಒಂದು ಧಾರ್ಮಿಕ ಕ್ಷೇತ್ರವನ್ನು ಇಷ್ಟು ಅವಹೇಳನಕಾರಿಯಾಗಿ ಅಪಪ್ರಚಾರ ಮಾಡಿರೋದು ಇತಿಹಾಸದಲ್ಲೇ ಇಲ್ಲ. ಸರ್ಕಾರವೇ ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟಿದೆ. ಈ ವಿಷಯ ಸರ್ಕಾರಕ್ಕೆ ಹುಡುಗಾಟ ಆಗಿದ್ದು, ನಾಳೆ ಇನ್ನೊಬ್ಬರು ಇನ್ನೊಂದು ಹೇಳ್ತಾರೆ. ಜವಾಬ್ದಾರಿಯುತ ಸರ್ಕಾರ ಕಾನೂನು ಪ್ರಕಾರ ನಡೆದುಕೊಂಡಿಲ್ಲ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಗಂಭೀರ ಆರೋಪವನ್ನು ಮಾಡಿದರು.
ಅನಾಮಿಕ ಮನುಷ್ಯ ಮುಸುಕುದಾರಿ ಯಾರು ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಧಾರ್ಮಿಕ ಕ್ಷೇತ್ರದ ಅಪಪ್ರಚಾರಕ್ಕೆ ಸರ್ಕಾರವೇ ಕುಮ್ಮಕ್ಕು ಕೊಟ್ಟಿದೆ ಅಂತ ಪುರಾವೆ ಆಗುತ್ತದೆ. ನಾನು ಮಂಪರು ಪರೀಕ್ಷೆಗೆ ಸಿದ್ದನಿದ್ದೇನೆ ಅಂತ ಮುಸುಕುದಾರಿ ಮೊದಲೇ ಹೇಳಿದ್ದಾರೆ. ಅವನೇ ರೆಡಿ ಇದ್ದಾಗ ಮಂಪರು ಪರೀಕ್ಷೆ ಮಾಡೋಕೆ ಏನು ಎಂದು ರಾಜ್ಯ ಸರ್ಕಾರವನ್ನು ಬಸವರಾಜ್ ಬೊಮ್ಮಾಯಿ ಪ್ರಶ್ನೆ ಮಾಡಿದರು.
ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿಂದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಮುಸ್ಲಿಂ ಮಹಿಳೆಯರು ಸೇರಿದಂತೆ ಸಾವಿರಾರು ಜನರು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರೋರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.