
ಧರ್ಮಸ್ಥಳ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ (Dharmasthala) ಬಂದಿದ್ದ ಸೋದರಿ ಮತ್ತೆ ಹಿಂದಿರುಗಿ (Hemavati Missing) ಮನೆಗೆ ಬಂದಿಲ್ಲ ಎಂದು ನಿತಿನ್ ಎಂಬವರು ಬೆಳ್ತಂಗಡಿ (Belthangady) ಎಸ್ಐಟಿ ಕಚೇರಿಯಲ್ಲಿ (SIT Office) ದೂರು ದಾಖಲಿಸಿದ್ದಾರೆ. ಸೋದರಿ ಹೇಮಾವತಿ ಮಹಿಳೆಯೊಬ್ಬರ ಜೊತೆ 13 ವರ್ಷ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದರಂತೆ. ಮಹಿಳೆ ಹಿಂದಿರುಗಿ ಬಂದರೂ ತಂಗಿ ಬಂದಿಲ್ಲ. ಎಸ್ಐಟಿ ರಚನೆಯಾದ ಬಳಿಕ ವಿಶ್ವಾಸ ಬಂದಿದೆ. ಹಾಗಾಗಿ ದೂರ ನೀಡಲು ಬಂದಿದ್ದೇನೆ ಎಂದು ನಿತಿನ್ ಹೇಳಿದ್ದಾರೆ. ಕಾಣೆಯಾಗಿದ್ದಾರೆ ಎನ್ನಲಾದ ಹೇಮಾವತಿ, ಬಂಟ್ವಾಳ (Bantwal) ತಾಲೂಕಿನ ಕಾವಲ ಮುಡೂರು ಗ್ರಾಮದ ನಿವಾಸಿಯಾಗಿದ್ದಾರೆ. ಹೇಮಾವತಿ ಕಾಣೆಯಾದ ಸಂದರ್ಭದಲ್ಲಿ ಕುಟುಂಬಸ್ಥರು, ಪುಂಜಾಲು ಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿರುವ ನಿತಿನ್, ನನ್ನ ಸಹೋದರಿ 2012ರಲ್ಲಿ ಕಾಣೆಯಾಗಿದ್ದಾರೆ. ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಒಬ್ಬ ಮಹಿಳೆ ಕರೆದುಕೊಂಡು ಹೋಗಿದ್ದರು. ಅವರ ಹೆಸರು ಪೊಲೀಸರಿಗೆ ಹೇಳಿದ್ದೇನೆ ಮಾಧ್ಯಮಕ್ಕೆ ತಿಳಿಸುವುದಿಲ್ಲ. ಕರೆದುಕೊಂಡು ಹೋದ ಮಹಿಳೆ ನನಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಅವರ ಮನೆಗೆ ಹೋಗಿ ಜಗಳ ಮಾಡಿದಾಗಲೂ ಉತ್ತರ ಕೊಟ್ಟಿಲ್ಲ ಎಂದಿದ್ದಾರೆ.
ಪುಂಜಾಲು ಕಟ್ಟೆ ಠಾಣೆಯಲ್ಲಿ ಅವತ್ತು ದೂರು ನೀಡಲಾಗಿತ್ತು. ಕರೆದುಕೊಂಡ ಹೋಗಿದ್ದ ಮಹಿಳೆ ಸರ್ಕಾರಿ ಉದ್ಯೋಗಿಯಾಗಿದ್ದಳು. ಕರೆದುಕೊಂಡು ಹೋದ ಮಹಿಳೆಯ ವಿರುದ್ಧ ಅನೇಕ ಬಾರಿ ಪೊಲೀಸರಿಗೆ ತಿಳಿಸಿದ್ದೆವು. ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಕಾರಣಕ್ಕೆ ತನಿಖೆಯಾಗಿಲ್ಲ ಎಂದು ನಿತಿನ್ ಗಂಭೀರ ಆರೋಪ ಮಾಡುತ್ತಾರೆ.
ಪೊಲೀಸರು ತಂಗಿ ಸಿಕ್ಕಿದರೆ ತಿಳಿಸುತ್ತೇವೆ ಎಂದಿದ್ದರು. ಆದ್ರೆ ಈವರೆಗೂ ತಂಗಿ ಹೇಮಾವತಿ ಮಾತ್ರ ನಮಗೆ ಸಿಕ್ಕಿಲ್ಲ. ಈಗ ಎಸ್‌ಐಟಿ ರಚನೆಯಾಗಿದ್ದು, ಹೇಮಾವತಿಯನ್ನು ಹುಡುಕಿಕೊಡ್ತಾರೆ ಎಂಬ ವಿಶ್ವಾಸ ನಮಗಿದೆ. ಹೋರಾಟ ಮಾಡುವಷ್ಟು ತಾಕತ್ತು ನಮಗೆ ಇರಲಿಲ್ಲ. ಹಾಗಾಗಿ ಈವರೆಗೆ ನಾವು ಪ್ರಯತ್ನ ಮಾಡಿರಲಿಲ್ಲಈಗ ನಮಗೆ ಧೈರ್ಯ ಬಂದಿದೆ. ಧರ್ಮಸ್ಥಳದಲ್ಲಿ ಒಂದೊಂದು ಗುಂಡಿಯಾಗಿ ಅಗೆಯುವಗಲೂ ಆತಂಕ ಆಗುತ್ತೆ ಎಂದು ನಿತಿನ್ ಹೇಳುತ್ತಾರೆ.
ನಮ್ಮ ಸಹೋದರಿಗೆ ಏನಾಗಿದೆ ಅನ್ನೋದು ಗೊತ್ತಾಗಬೇಕು. ನಮ್ಮ ಮನೆಯಲ್ಲಿ ತಾಯಿ ಅನಾರೋಗ್ಯ ಪೀಡಿತೆಯಾಗಿದ್ದಾರೆ. ಈಗ ಮನೆಯಲ್ಲಿ ಮಾತನಾಡಿ ದೂರು ಕೊಡಲು ಬಂದಿದ್ದೇನೆ
ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಲು ಹೇಳಿದ್ದಾರೆ. ನನ್ನ ತಂಗಿ ಕಾಣೆಯಾದಾಗ 17 ವರ್ಷ ವಯಸ್ಸು. ನಾವು ಧರ್ಮಸ್ಥಳ ಕ್ಷೇತ್ರದ ಮೇಲೆ ಯಾವುದೇ ಅಪಪ್ರಚಾರ ಮಾಡುವ ಉದ್ದೇಶ ಹೊಂದಿಲ್ಲ. ನಮಗೆ ನ್ಯಾಯ ಸಿಗಬೇಕು ಅಷ್ಟೇ ಎಂದು ನಿತಿನ್ ಆಗ್ರಹಿಸಿದ್ದಾರೆ.
ಎಲ್ಲರೂ ಕೂಡ ನಮ್ಮಂತೆ ಧೈರ್ಯ ಮಾಡಿ ದೂರು ನೀಡಬೇಕು. ಯಾರ ಮನೆಯ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ ದೂರು ನೀಡಿ ಎಂದು ಮನವಿ ಮಾಡಿಕೊಂಡ ನಿತಿನ್, ನಮ್ಮ ತಾಯಿ ತುಂಬಾ ನೊಂದುಕೊಂಡಿದ್ದಾರೆ. ಮಗಳು ಕಾಣೆಯಾದ ಚಿಂತೆಯಲ್ಲೇ ಇದ್ದಾರೆ. ಕರೆದುಕೊಂಡು ಹೋದ ಮಹಿಳೆಯನ್ನು ಪೊಲೀಸರು ತನಿಖೆ ಮಾಡಲಿ. ನಮ್ಮ ತಂಗಿಗೆ ಏನಾಗಿದೆ ಅನ್ನೋದು ಗೊತ್ತಾಗಬೇಕು ಎಂದು ನಿತಿನ್ ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಸುಜಾತಾ ಭಟ್ ಎಂಬವರು 2003ರಲ್ಲಿ ತಮ್ಮ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ. ಧರ್ಮಸ್ಥಳಕ್ಕೆ ಹೋದ ಮಗಳು ಹಿಂದಿರುಗಿಲ್ಲ ಎಂದು ದೂರು ದಾಖಲಿಸಿದ್ದರು. ಇದೀಗ ಅನನ್ಯಾ ಭಟ್ ಎಂಬ ಯುವತಿ ಇದ್ದಳಾ ಎಂಬುದರ ಬಗ್ಗೆಯೇ ಅನಮಾನ ಮೂಡಿದೆ.