ದರ್ಶನ್ ಜಾಮೀನು ರದ್ದು ಕೇಳಿ ರೇಣುಕಾಸ್ವಾಮಿ ಕುಟುಂಬ ಭಾವುಕ, ತೀರ್ಪು ಸಮಯದಲ್ಲಿ ಲಿಂಗಪೂಜೆಯಲ್ಲಿದ್ದ ತಂದೆ

Published : Aug 14, 2025, 01:34 PM IST
Renukaswamy parents

ಸಾರಾಂಶ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಈ ತೀರ್ಪಿನಿಂದ ರೇಣುಕಾಸ್ವಾಮಿ ಕುಟುಂಬ ಭಾವುಕರಾಗಿದ್ದು, ನ್ಯಾಯ ದೊರಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಮತ್ತು ಡಿ ಗ್ಯಾಂಗ್ ವಿರುದ್ಧದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ, ರೇಣುಕಾಸ್ವಾಮಿಯ ಕುಟುಂಬ ಭಾವುಕರಾಗಿ ಪ್ರತಿಕ್ರಿಯಿಸಿದೆ. ಕೋರ್ಟ್ ತೀರ್ಪು ವೇಳೆ ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಲಿಂಗಪೂಜೆಯಲ್ಲಿದ್ದರು. ಮನೆ ಬಾಗಿಲು, ತುಳಸಿಗೆ ಬೆಳಗಿ ನಮಸ್ಕರಿಸಿದರು. ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಪೂಜಾಫಲ ಫಲಿಸಿತೇ?

ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಪ್ರತಿಕ್ರಿಯೆ

ತೀರ್ಪು ಹೊರಬಂದ ಸಮಯದಲ್ಲಿ ನಾನು ಎಂದಿನಂತೆ ಬೆಳಿಗ್ಗೆ 11 ಗಂಟೆಗೆ ಪೂಜೆಯಲ್ಲಿ ತೊಡಗಿಕೊಂಡಿದ್ದೆ. ಪತ್ನಿ ರತ್ನಪ್ರಭಾ ಈ ಸುದ್ದಿ ತಿಳಿಸಿದರು. ದರ್ಶನ್ ಜಾಮೀನು ರದ್ದು ವಿಚಾರವು ನನಗೆ ಮತ್ತಷ್ಟು ಭರವಸೆ ನೀಡಿದೆ. ಕಾನೂನು ಮತ್ತು ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನನ್ನ ಮಗನ ಹತ್ಯೆಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ಬಲವಾಗಿದೆ ಎಂದು ಕಾಶೀನಾಥಯ್ಯ ಭಾವುಕರಾದರು.

ತಾಯಿ ರತ್ನಪ್ರಭಾ ಪ್ರತಿಕ್ರಿಯೆ

ನಟ ದರ್ಶನ್ ಅವರ ಜಾಮೀನು ರದ್ದುಪಡಿಸಿರುವುದು ಸ್ವಾಗತಾರ್ಹ. ನಮ್ಮ ಮಗನ ಸಾವಿಗೆ ನ್ಯಾಯ ಸಿಕ್ಕಂತಾಗಿದೆ. ಕೋರ್ಟ್ ಹಾಗೂ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಇಂದು ಮನೆದೇವರಿಗೆ ಅಭಿಷೇಕ ಮಾಡಲು ಹೊರಟಿದ್ದೆವು, ತೀರ್ಪು ಇರುವ ಬಗ್ಗೆ ತಿಳಿದಿರಲಿಲ್ಲ. ಆದರೆ ಇಂದು ಬಂದ ತೀರ್ಪಿನಿಂದ ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದು ರತ್ನಪ್ರಭಾ ಹೇಳಿದರು.

ಪತ್ನಿ ಸಹನಾ ಪ್ರತಿಕ್ರಿಯೆ

"ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಕಾನೂನಿನಲ್ಲಿ ಎಲ್ಲರೂ ಸಮಾನರು. ಏನು ಶಿಕ್ಷೆ ನೀಡುತ್ತಾರೆ ಗೊತ್ತಿಲ್ಲ, ಅದು ದೇವರ ಕೈಯಲ್ಲಿದೆ" ಎಂದು ಸಹನಾ ತಿಳಿಸಿದರು.

ಸಂಬಂಧಿ ಷಡಕ್ಷರಿ ಪ್ರತಿಕ್ರಿಯೆ

"ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಾವು ಕೃತಜ್ಞರಾಗಿದ್ದೇವೆ. ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗದಿದ್ದರೆ ಈ ಸ್ಥಿತಿ ಗೊತ್ತಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆಗೆ ಸೂಚಿಸಿದ್ದು, ವಿಶೇಷ ಟ್ರಯಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕು ಎಂದು ನಾವು ಆಗ್ರಹಿಸಿದ್ದೆವು. ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕಡೆ ತಪ್ಪಿಸಿಕೊಂಡರೆ ಇನ್ನೊಂದು ಕಡೆ ಶಿಕ್ಷೆ ಅನಿವಾರ್ಯ. ಕಾನೂನಿನ ಮೇಲೆ ಯಾವತ್ತೂ ನಮಗೆ ಗೌರವವಿದೆ, ಇಂದಿನ ತೀರ್ಪಿನಿಂದ ಅದು ಇನ್ನಷ್ಟು ಹೆಚ್ಚಾಗಿದೆ. ರೇಣುಕಾಸ್ವಾಮಿ ಪತ್ನಿ ಸಹನಾ ಚಿಕ್ಕವಯಸ್ಸಿನವರು, ಮಗುವಿದ್ದಾರೆ. ಅವರಿಗೆ ಸರ್ಕಾರಿ ನೌಕರಿ ನೀಡುವಂತೆ ಮನವಿ ಮಾಡಿದ್ದೇವೆ. ಸರ್ಕಾರ ಸೂಕ್ತ ನೆರವು ನೀಡಲಿ" ಎಂದು ಷಡಕ್ಷರಿ ಹೇಳಿದರು. ದರ್ಶನ್ ಅವರ ವಿದೇಶ ಪ್ರವಾಸ ಅಥವಾ ಕೊಲೆ ಆರೋಪಿ ಜೊತೆ ಫೋಟೋ ವಿಚಾರದ ಬಗ್ಗೆ ಅವರಿಗೆ ಮಾಹಿತಿ ಇಲ್ಲ ಎಂದು, "ಕಾನೂನು ಪ್ರಕಾರ ಶಿಕ್ಷೆ ಆಗಲಿ" ಎಂದರು.

 

PREV
Read more Articles on
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ