
ಹಗರಿಬೊಮ್ಮನಹಳ್ಳಿ: ಜಾತ್ರೆಗಳಲ್ಲಿ ಹತ್ತು ಹಲವು ಸಂಕಷ್ಟಗಳ ನಿವಾರಣೆಗೆ ಭಕ್ತರು ಹರಕೆ ಹೊರುವುದು ಸರ್ವೆ ಸಾಮಾನ್ಯ. ಆದರೆ, ದಿನೇದಿನೇ ಏರುತ್ತಿರುವ ಚಿನ್ನದ ಬೆಲೆ ಬಡವರ ಕೈಗೆ ಎಟುಕುವಂತಾಗಲಿ ಎಂಬ ಆಶಯದೊಂದಿಗೆ ಭಕ್ತನೊಬ್ಬ ಜೋಡು ಬಾಳೆ ಹಣ್ಣುಗಳ ಮೇಲೆ ‘ಚಿನ್ನದ ದರ ಇಳಿಯಲಿ: ಮುನಿದ ಚಿನ್ನ ಒಲಿಯಲಿ’ ಎಂದು ಬರೆದು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ನಡೆದ ದುರ್ಗಮ್ಮದೇವಿ ರಥೋತ್ಸವದಲ್ಲಿ ಕೆ.ನಾಗರಾಜ್ ಎನ್ನುವ ಭಕ್ತ ಈ ರೀತಿ ಹರಕೆ ಹೊತ್ತಿದ್ದಾರೆ.
ಮದುವೆ ಕಾಲದ ಈ ಸಂದರ್ಭದಲ್ಲಿ ಚಿನ್ನ ಕೊಳ್ಳುವುದೇ ದುಸ್ತರವಾಗಿರುವಾಗ ಬೆಲೆ ಇಳಿಯಲಿ ಎಂಬ ಆಶಯದೊಂದಿಗೆ ಹರಕೆ ಹೊತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.