
ಮಯೂರ್ ಹೆಗಡೆ
ಬೆಂಗಳೂರು(ಜ.22): ವಿಸ್ತಾರವಾಗುತ್ತಿರುವ ಬೆಂಗಳೂರಿಗೆ ಪೂರಕವಾಗಿ ಹೊರವಲಯದ ದೇವನಹಳ್ಳಿಯಲ್ಲಿ ಸರಿಸುಮಾರು 1,500 ಕೋಟಿ ವೆಚ್ಚದಲ್ಲಿ ಬೃಹತ್ತಾಗಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಟರ್ಮಿನಲ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ನೈಋತ್ಯ ರೈಲ್ವೆ ವಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈಗಾಗಲೇ ಕೆಎಸ್‌ಆರ್ ರೈಲ್ವೇ ನಿಲ್ದಾಣ ಮರು ನಿರ್ಮಾಣಕ್ಕಾಗಿ ₹1200 ಕೋಟಿ ಯೋಜನೆಯ ನೀಲನಕ್ಷೆ ಸಿದ್ದವಾಗಿದೆ. ಇದಕ್ಕೂ ಮುನ್ನ ಬೈಯಪ್ಪನಹಳ್ಳಿಯಲ್ಲಿ ತಲೆ ಎತ್ತಿರುವ ಸರ್‌ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸದ್ಯದ ಬೆಂಗಳೂರಿನ ಅತ್ಯಾಧುನಿಕ ರೈಲ್ವೇ ನಿಲ್ದಾಣ ಎನ್ನಿಸಿಕೊಂಡಿದೆ.
ಟಿಕೆಟ್ ರಿಸರ್ವೇಶನ್ ಮಾಡದ ಪ್ರಯಾಣಿಕರಿಗೆ ಗುಡ್ ನ್ಯೂಸ್, 10 ಹೊಸ ರೈಲು ಸೇವೆ ಆರಂಭ
ಯಶವಂತಪುರ, ಕಂಟೋನ್ಸೆಂಟ್ ರೈಲು ನಿಲ್ದಾಣವೂ ಮರು ನಿರ್ಮಾಣಗೊಳ್ಳುತ್ತಿವೆ. ಇದೀಗ ನಗರದೊಳಗಿನ ರೈಲ್ವೆ ನಿಲ್ದಾಣಗಳ ಮೇಲಿನ ಒತ್ತಡ ನಿವಾರಿಸಲು ಮೂರನೇ ಅತ್ಯಾಧುನಿಕ ರೈಲ್ವೇ ನಿಲ್ದಾಣವನ್ನು ದೇವನಹಳ್ಳಿಯಲ್ಲಿ ನಿರ್ಮಿಸಲು ರೈಲ್ವೇ ಇಲಾಖೆ ಉತ್ತುಕವಾಗಿದೆ. ಯಲಹಂಕ, ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ರೈಲ್ವೇ ನಿಲ್ದಾಣಗಳ ನಡುವೆ ಈ ಹೊಸ ನಿಲ್ದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟು 1000 ಎಕರೆಯನ್ನು ಇದಕ್ಕೆ ಅಗತ್ಯವಿದ್ದು, ಸದ್ಯ 400 ಎಕರೆ ಜಾಗ ಪ್ರಾಥಮಿಕವಾಗಿ ಗುರುತಿಸಿಕೊಳ್ಳಲಾಗಿದೆ.
ದೇವನಹಳ್ಳಿಯ ಬುಳ್ಳಹಳ್ಳಿ, ಗುರುರಾಯನ ಹೊಸೂರು ಹಳ್ಳಿಗಳ ಭಾಗದಲ್ಲಿ ಟರ್ಮಿನಲ್‌ಗೆ ಜಾಗ ನೋಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. 'ಎ' ಗ್ರೇಡ್‌ನಲ್ಲಿರುವ ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ 10 ಪ್ಲಾಟ್ ಫಾರ್ಮ್. 6 ಸ್ಟ್ರಾಬ್‌ಲೈನ್ (ಕಾರ್ಯಾಚರಣೆ ಇಲ್ಲದಾಗ ರೈಲುಗಳ ನಿಲುಗಡೆ), 5 ಪಿಟ್‌ಲೈನ್ (ರೈಲು ತೊಳೆವ, ನಿರ್ವಹಣೆ ಲೈನ್) ಹೊಂದಿದೆ. ಇದಕ್ಕಿಂತ ದೇವನಹಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಿಲ್ದಾಣ ಮಾಡಲಾಗುವುದು.
ಪ್ರಾಥಮಿಕ ಯೋಜನೆಯಂತೆ ಇಲ್ಲಿ 16 ಪ್ಲಾಟ್ ಫಾರ್ಮ್, 20 ಸ್ಟ್ಯಾಬ್ರಿಂಗ್ ಲೈನ್ 10 ಪಿಟ್ ಲೈನ್ ಇರಿಸಲು ಯೋಜಿಸಲಾಗುತ್ತಿದೆ. ದೇವನಹಳ್ಳಿ ರೈಲ್ವೇ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 15 ಕಿಮೀ ಅಂತರದಲ್ಲಿರಲಿದ್ದು, ನಿರ್ಮಾಣದ ಸ್ಥಳ ಪ್ರಶಸ್ತವಾಗಿದೆ.
ಬೆಂಗಳೂರು ಹೈದ್ರಾಬಾದ್ ರಸ್ತೆ (ರಾಷ್ಟ್ರೀಯ ಹೆದ್ದಾರಿ 44) ರ ಬಳಿಯಿದೆ. ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಿಂದ ಸುಮಾರು 7ಕಿಮೀ ಇರಲಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳುತ್ತಾರೆ. ನಿಲ್ದಾಣ ನಿರ್ಮಾಣದ ಸಾಧಕ ಬಾಧಕದ ಕುರಿತು ತಿಳಿದುಕೊಳ್ಳಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗುವುದು. ಭೂಮಿಯ ಲಭ್ಯತೆ, ನಿರ್ಮಾಣ ವೆಚ್ಚ, ಸಾಮಾಜಿಕ ಮತ್ತು ಪರಿಸರ ಪರಿಣಾಮ ಹಾಗೂ ಪ್ರಯಾಣಿಕರಿಗೆ ಆಗುವ ಅನುಕೂಲತೆ ಬಗ್ಗೆ ಸವಿಸ್ತಾರ ವರದಿ ರೂಪಿಸಿಕೊಳ್ಳಲಾಗುವುದು. ಬಳಿಕ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸುವುದು ಸೇರಿ ಇತರೆ ಪ್ರಕ್ರಿಯೆ ನಡೆಯಲಿದೆ ಎಂದು ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ.
ಹೊಸ ರೈಲು ನಿಲ್ದಾಣವು ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಹಾಗೂ ಇಲ್ಲಿ ಉಪನಗರ ರೈಲು ನಿಲ್ದಾಣ, ಮೆಟ್ರೋ ನೀಲಿ ಮಾರ್ಗದ ನಿಲ್ದಾಣಗಳು ಬರುವುದರಿಂದ ಪ್ರಯಾಣಿ ಕರುನಗರಪ್ರವೇಶಿಸಲುಸಾಕಷ್ಟು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ಫರ್ಮ್ ಟ್ರೈನ್ ಟಿಕೆಟ್ ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಹೆಜ್ಜಾಲದಲ್ಲಿ ಹೊಸ ಟರ್ಮಿನಲ್ ಮಾಡಲು ಹೆಚ್ಚು ಪ್ರಯತ್ನಿಸುವುದು ಸೂಕ್ತ. ಇದರಿಂದ ಸಂಪೂರ್ಣವಾಗಿ ಬೆಂಗಳೂರಿಗೆ ಅನುಕೂಲವಾಗಲಿದೆ. ಇತ್ತ ಯಶವಂತಪುರ, ಅತ್ತ ಕಂಟೋನ್ಸೆಂಟ್ ಕಡೆಯಿಂದ ಬರುವ ರೈಲುಗಳ ಪ್ರಯಾಣಿಕರಿಗೆ ಅನುಕೂಲ ಎಂದು ರೈಲ್ವೆ ಸಾರಿಗೆ ತಜ್ಞ ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಭೂಸ್ವಾಧೀನಕ್ಕೆ ರೈತರ ವಿರೋಧ
ದೇವನಹಳ್ಳಿಯಲ್ಲಿ ರೈಲ್ವೆ ನಿಲ್ದಾಣ ಮತ್ತು ಅದಕ್ಕಾಗಿ ಭೂಸ್ವಾಧೀನಕ್ಕಾಗಿ ಸ್ಥಳೀಯ ರೈತರು ವಿರೋಧಿಸಿದ್ದಾರೆ. ಈಗಾಗಲೇ ವಿಮಾನ ನಿಲ್ದಾ ಣಕ್ಕೆ ಭೂಮಿ ಕಳೆದುಕೊಂಡಿದ್ದೇವೆ. ಕೆಐಎಡಿಬಿ ವಿವಿಧ ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಮರ್ಪಕ ಪರಿಹಾರ ಒದಗಿಸಿಲ್ಲ. ಈಗ ರೈಲ್ವೆ ನಿಲ್ದಾಣಕ್ಕಾಗಿ ಭೂಮಿ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.