Bengaluru: ಬೆಸ್ಕಾಂ ಬಿಲ್‌ ಆಧರಿಸಿ ಆಸ್ತಿ ತೆರಿಗೆ ಕಳ್ಳರ ಪತ್ತೆ

By Govindaraj SFirst Published Jun 18, 2022, 9:30 AM IST
Highlights

ಆಸ್ತಿ ತೆರಿಗೆ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಕಂದಾಯ ವಿಭಾಗದಿಂದ ಬಿಬಿಎಂಪಿಯ ಎರಡು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಬೆಸ್ಕಾಂ ಅಂಕಿ ಅಂಶ ಆಧಾರಿಸಿ ಪರಿಶೀಲನೆ ಮಾಡಲಾಗಿದ್ದು, ಒಟ್ಟು 46 ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡಿ ಸುಮಾರು 1.50 ಕೋಟಿ ಆಸ್ತಿ ತೆರಿಗೆ ವಂಚಿಸಿರುವುದು ದೃಢಪಟ್ಟಿದೆ.

ಬೆಂಗಳೂರು (ಜೂ.18): ಆಸ್ತಿ ತೆರಿಗೆ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಕಂದಾಯ ವಿಭಾಗದಿಂದ ಬಿಬಿಎಂಪಿಯ ಎರಡು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಬೆಸ್ಕಾಂ ಅಂಕಿ ಅಂಶ ಆಧಾರಿಸಿ ಪರಿಶೀಲನೆ ಮಾಡಲಾಗಿದ್ದು, ಒಟ್ಟು 46 ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡಿ ಸುಮಾರು 1.50 ಕೋಟಿ ಆಸ್ತಿ ತೆರಿಗೆ ವಂಚಿಸಿರುವುದು ದೃಢಪಟ್ಟಿದೆ. ಆಸ್ತಿ ಮಾಲಿಕರಿಗೆ ನೋಟಿಸ್‌ ಜಾರಿಗೊಳಿಸಿ ದಂಡ ಸಮೇತ ತೆರಿಗೆ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ.ಆರ್‌.ಎಲ್‌.ದೀಪಕ್‌ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಜಕ್ಕಸಂದ್ರ ವಾರ್ಡ್‌ನಲ್ಲಿ ಬೆಸ್ಕಾಂ ಇಲಾಖೆಯ ಅಂಕಿ ಅಂಶ ಆಧಾರಿಸಿ ಆಸ್ತಿಗಳನ್ನು ಪರಿಶೀಲನೆ ನಡೆಸಲಾಗಿದೆ. 

ಈ ವೇಳೆ ಎಚ್‌ಎಸ್‌ಆರ್‌ ವಾರ್ಡ್‌ನಲ್ಲಿ 31 ಆಸ್ತಿ ಮಾಲಿಕರು ಸುಳ್ಳು ಮಾಹಿತಿ ನೀಡಿ .1.2 ಕೋಟಿ ಹಾಗೂ ಜಕ್ಕಸಂದ್ರ ವಾರ್ಡ್‌ನಲ್ಲಿ 15 ಆಸ್ತಿ ಮಾಲಿಕರು .27 ಲಕ್ಷ ತೆರಿಗೆ ವಂಚನೆ ಮಾಡಿರುವುದು ದೃಢಪಟ್ಟಿದೆ. ಆಸ್ತಿ ಮಾಲಿಕರಿಗೆ ನೋಟಿಸ್‌ ನೀಡುವಂತೆ ಸೂಚನೆ ನೀಡಲಾಗಿದೆ. ನೋಟಿಸ್‌ಗೆ ಉತ್ತರ ಪಡೆದು ದಂಡ ಸಮೇತ ಆಸ್ತಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ವಿವರಿಸಿದರು. ಇನ್ನು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ 1 ಕಿ.ಮೀ ವ್ಯಾಪ್ತಿಯ 100 ಕಟ್ಟಡಗಳನ್ನು ಡ್ರೋನ್‌ ಸರ್ವೇಯಲ್ಲಿ 32 ಆಸ್ತಿ ಮಾಲಿಕರು ತಪ್ಪು ಮಾಹಿತಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Latest Videos

ಎಲೆಕ್ಟ್ರಿಕ್ ವಾಹನ ಉತ್ತೇಜನಕ್ಕೆ ಮುಂದಾದ ಬೆಸ್ಕಾಂ, ಬ್ರಿಟನ್ ಜೊತೆ 31,000 ಕೋಟಿ ರೂ ಹೂಡಿಕೆ ಒಪ್ಪಂದ!

ಅಧಿಕಾರಿಗಳಿಗೆ ಮಾಸಿಕ ಗುರಿ: ಪಾಲಿಕೆ ಬಜೆಟ್‌ನಲ್ಲಿ ಘೋಷಿಸಿರುವ ಆಸ್ತಿ ತೆರಿಗೆ ಸಂಗ್ರಹ ಗುರಿ ಸಾಧಿಸುವ ಉದ್ದೇಶದಿಂದ ಕಂದಾಯ ಅಧಿಕಾರಿಗಳಿಗೆ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳಿಗೆ ಮಾಸಿಕ ಗುರಿ ನೀಡಲಾಗುತ್ತಿದೆ. ಗುರಿ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರೋತ್ಸಾಹಿಸುವುದು ಮತ್ತು ಉತ್ತೇಜನಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸಾಧನೆ ಹಾಗೂ ಕಳಪೆ ಪ್ರದರ್ಶನ ತೋರುವ ಅಧಿಕಾರಿಗಳ ಪಟ್ಟಿಸಹ ಸಿದ್ಧಪಡಿಸಲಾಗುವುದು ಎಂದು ದೀಪಕ್‌ ಮಾಹಿತಿ ನೀಡಿದರು.

8 ಮಾಲ್‌ಗಳಿಂದ 46 ಕೋಟಿ ಬಾಕಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 44 ಮಾಲ್‌ಗಳಿದ್ದು, ಈ ಪೈಕಿ 9 ಮಾಲ್‌ಗಳಿಂದ .69 ಕೋಟಿ ಆಸ್ತಿ ತೆರಿಗೆ ವಸೂಲಿ ಆಗಬೇಕಿತ್ತು. ಒಂದು ಮಾಲ್‌ ನಿಂದ ವಸೂಲಿ ಮಾಡಲಾಗಿದೆ. ಉಳಿದ ಎಂಟು ಮಾಲ್‌ಗಳಿಂದ .46 ಕೋಟಿ ವಸೂಲಿ ಮಾಡಬೇಕಿದೆ. ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ಮಾಲ್‌ಗಳು ಕೋರ್ಚ್‌ ಮೊರೆ ಹೋಗಿವೆ. ಪ್ರಕರಣ ಮುಕ್ತಾಯಗೊಳಿಸಿ ವಸೂಲಿ ಮಾಡಲಾಗುವುದು ಎಂದು ವಿಶೇಷ ಆಯುಕ್ತ ದೀಪಕ್‌ ತಿಳಿಸಿದರು.

ರಾಕ್‌ಲೈನ್‌ ಮಾಲ್‌ ಹೆಚ್ಚು ತೆರಿಗೆ ಬಾಕಿ: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ರಾಯಲ್‌ಮೀನಾಕ್ಷಿ ಮಾಲ್‌ 4.96 ಕೋಟಿ, ದಾಸರಹಳ್ಳಿ ವಲಯ ವ್ಯಾಪ್ತಿಯ ಮೇ. ರಾಕ್‌ಲೈನ್‌ ಮಾಲ್‌ 6.64 ಕೋಟಿ, ಮಹದೇವಪುರ ವಲಯ ವ್ಯಾಪ್ತಿಯ ವರ್ಜಿನಿಯಾ ಮಾಲ್‌ 60.92 ಲಕ್ಷ, ಸೋಲ್‌ಸ್ಪೇಸ್‌ ಅರೇನಾ ಮಾಲ್‌ (ಟೋಟಲ್‌ ಮಾಲ್‌) 54.66 ಲಕ್ಷ, ವಿಆರ್‌ ಮಾಲ್‌ 3.66 ಕೋಟಿ, ದಕ್ಷಿಣ ವಲಯ ವ್ಯಾಪ್ತಿಯ ಜಿಟಿ ವಲ್ಡ್‌ರ್‍ ಮಾಲ್‌ .3.15 ಕೋಟಿ, ಪಶ್ಚಿಮ ವಲಯ ವ್ಯಾಪ್ತಿಯ ಮಂತ್ರಿ ಮಾಲ್‌ 27.11 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ.

ಗ್ರಾಹಕರೇ ಎಚ್ಚರ: ಬೆಸ್ಕಾಂ ಹೆಸರಲ್ಲಿ ನಡೀತಿದೆ ಆನ್‌ಲೈನ್‌ ವಂಚನೆ..!

2099 ಕೋಟಿ ಆಸ್ತಿ ತೆರಿಗೆ ಸಂಗ್ರಹ: ಬಿಬಿಎಂಪಿಯ 2022-23ನೇ ಸಾಲಿನಲ್ಲಿ ಈವರೆಗೆ 2099 ಕೋಟಿ ಆಸ್ತಿ ತೆರಿಗೆ ವಸೂಲಿ ಆಗಿದೆ. ಇದರಲ್ಲಿ 172 ಕೋಟಿ ಹಳೇ ಬಾಕಿ ವಸೂಲಿ ಆಗಿದೆ. ಕಳೆದ ವರ್ಷ ಜೂನ್‌ 17ಕ್ಕೆ 1395 ಕೋಟಿ ಸಂಗ್ರಹವಾಗಿತ್ತು ಎಂದು ದೀಪಕ್‌ ಮಾಹಿತಿ ನೀಡಿದರು.

click me!