* ಇಬ್ಬರು ಪರಸ್ಪರ 9 ಡಿಗ್ರಿ ತಲೆ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ
* ಐಐಎಸ್‌ಸ್ಸಿ ಅಧ್ಯಯನ
* ಎಂಜಲಿನ ಹನಿ ಹರಡುವ ವ್ಯಾಪ್ತಿ ಆಧರಿಸಿ ಶೋಧನೆ
ಬೆಂಗಳೂರು(ಜೂ.18): ಇಬ್ಬರು ವ್ಯಕ್ತಿಗಳು ಮಾಸ್ಕ್ ಇಲ್ಲದೆ ಮಾತುಕತೆಯಲ್ಲಿ ತೊಡಗಿದ್ದಾಗ ಒಬ್ಬ ವ್ಯಕ್ತಿ ಮಾತ್ರ ಮಾತನಾಡುತ್ತಿದ್ದು, ಮತ್ತೊಬ್ಬ ವ್ಯಕ್ತಿ ಮೌನವಾಗಿದ್ದರೆ ಮೌನವಾಗಿರುವ ವ್ಯಕ್ತಿಗೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇಬ್ಬರೂ ವ್ಯಕ್ತಿಗಳು ಮಾತನಾಡುತ್ತಿದ್ದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂಬ ಹೊಸ ವಿಷಯವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.
ನಾಲ್ಕು ಅಡಿ ಅಂತರದಲ್ಲಿ ನಿಂತು ವ್ಯಕ್ತಿಗಳು ಪರಸ್ಪರ ಮಾತನಾಡುತ್ತಿದ್ದಾಗ ಎಂಜಲಿನ ಸಣ್ಣ ಹನಿ (ಡ್ರಾಪ್‌ಲೆಟ್) ಹರಡುವ ರೀತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಇಬ್ಬರು ವ್ಯಕ್ತಿಗಳು ಮಾತನಾಡುವಾಗ ಪರಸ್ಪರ ಕಣ್ಣಿನ ಸಂಪರ್ಕ ಇಟ್ಟುಕೊಂಡೆ ತಲೆಯನ್ನು ಪರಸ್ಪರ ವಿರುದ್ಧ ದಿಕ್ಕಿಗೆ 9 ಡಿಗ್ರಿ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ.
undefined
ಕರ್ನಾಟಕದಲ್ಲಿ 634 ಹೊಸ ಕೇಸ್ ಪತ್ತೆ, 2 ಸಾವು
ಕೊರೋನಾ ಸೋಂಕು ಗಾಳಿಯ ಮೂಲಕ ಹರಡುತ್ತದೆ ಎಂಬ ಕಾರಣಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡುವಾಗ ಬಾಯಿಂದ ಚಿಮ್ಮುವ ಡ್ರಾಪ್‌ಲೆಟ್ಸ್‌ನಿಂದ ಯಾವ ರೀತಿ ಸೋಂಕು ಹರಡುತ್ತದೆ ಎಂಬ ಬಗ್ಗೆ ಐಐಎಸ್‌ಸಿ ಬಾಹ್ಯಾಕಾಶ ಎಂಜಿನಿಯರಿಂಗ್ ವಿಭಾಗವು ಸ್ಟಾಕ್‌ಹೋಮ್‌ನ ನಾರ್ಡಿಕ್ ಇನ್‌ಸ್ಟಿಟ್ಯೂಟ್ ಫಾರ್ ಥಿಯೋರಿಟಿಕಲ್ ಫಿಸಿಕ್ಸ್ ಮತ್ತು ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಥಿಯೋರಿಟಿಕಲ್ ಸೈನ್ಸಸ್‌ನ ವಿಜ್ಞಾನಿಗಳ ಸಹಯೋಗದಲ್ಲಿ ಸಂಶೋಧನೆ ನಡೆಸಿದೆ. ಇದು ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಅಧ್ಯಯನ ನಡೆಸಿದ್ದು ಹೇಗೆ?
ಕಂಪ್ಯೂಟರ್ ಸಿಮ್ಯುಲೇಷನ್ ಬಳಸಿ ಇಬ್ಬರು ಮಾಸ್ಕ್ ಧರಿಸದ ವ್ಯಕ್ತಿಗಳು ನಾಲ್ಕರಿಂದ ಆರು ಆಡಿ ಅಂತರದಲ್ಲಿ ನಿಂತು ಒಂದು ನಿಮಿಷ ಮಾತನಾಡಿದರೆ ಆಗ ಡ್ರಾಪ್‌ಲೆಟ್ಸ್ ಚಿಮ್ಮುವಿಕೆ ಹಾಗೂ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಕೆಮ್ಮು ಮತ್ತು ಸೀನುವಿಕೆಯ ಜೊತೆಗೆ ಮಾತನಾಡುವುದರಿಂದಲೂ ಸೋಂಕು ಹಬ್ಬುತ್ತದೆ ಎಂಬುದು ಈ ಸಂಶೋಧನೆಯಿಂದ ಖಚಿತವಾಗಿದೆ.
ಎತ್ತರವೂ ಪರಿಣಾಮ ಬೀರುತ್ತದೆ
ಇಬ್ಬರು ಮಾತನಾಡುವಾಗ ಅವರ ಎತ್ತರವೂ ಸೋಂಕು ಹರಡುವಿಕೆಯನ್ನು ನಿರ್ಧರಿಸುತ್ತದೆ. ಇಬ್ಬರು ಸಮಾನ ಎತ್ತರದ ವ್ಯಕ್ತಿಗಳು ಮತ್ತು ಒಂದು ಅಡಿಗಿಂತ ಹೆಚ್ಚು ಎತ್ತರದ ವ್ಯತ್ಯಾಸ ಇರುವ ವ್ಯಕ್ತಿಗಳು ಪರಸ್ಪರ ಮುಖಾಮುಖಿ ಸಂವಹನ ನಡೆಸಿದಾಗ ಅವರಲ್ಲಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಅದೇ ಇಬ್ಬರ ಎತ್ತರದ ವ್ಯತ್ಯಾಸವು ಅರ್ಧ ಅಡಿ ಮಾತ್ರ ಇದ್ದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೊರೋನಾ ಮತ್ತಷ್ಟು ಏರಿಕೆ: ಒಂದೇ ದಿನ 12,847 ಕೇಸ್..!
ಸಮಾನ ಅಂತರದ ವ್ಯಕ್ತಿಗಳು ಮುಖಾಮುಖಿ ಮಾತನಾಡಿದಾಗ ಇಬ್ಬರೂ ವ್ಯಕ್ತಿಗಳ ಬಾಯಿಯಿಂದ ಚುಮ್ಮುವ ಡ್ರಾಪ್‌ಲೆಟ್ಸ್ ಪರಸ್ಪರ ಸಂಘರ್ಷಿಸಿ ಬೀಳುತ್ತವೆ. ಹೀಗಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಜತೆಗೆ ಎತ್ತರದ ವ್ಯತ್ಯಾಸ 1 ಅಡಿಗಿಂತ ಹೆಚ್ಚಿದ್ದರೂ ಡ್ರಾಪ್‌ಲೆಟ್ಸ್‌ನಿಂದ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಅದೇ ಅರ್ಧ ಅಡಿ ಮಾತ್ರ ಎತ್ತರದ ವ್ಯತ್ಯಾಸ ಇದ್ದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವಿವರಿಸಲಾಗಿದೆ.
ಧ್ವನಿಯ ಮಟ್ಟ, ಗಾಳಿಯ ಚಲನವಲನ ಅಧ್ಯಯನ
ಇನ್ನು ಸಂಶೋಧನೆ ಬಗ್ಗೆ ಮಾತನಾಡಿರುವ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಸೌರಭ್ ದಿವಾನ್, ಮುಂದಿನ ದಿನಗಳಲ್ಲಿ ಕೊರೋನಾ ವೈರಾಣು ಹರಡಲು ಧ್ವನಿಯ ಮಟ್ಟಮತ್ತು ಆ ಪ್ರದೇಶದಲ್ಲಿನ ಗಾಳಿಯ ಚಲನ ವಲನದ ಪ್ರಭಾವವನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದ್ದೇವೆ. ನಮ್ಮ ಸಂಶೋಧನೆಯ ಮಾಹಿತಿಯನ್ನು ನೀತಿ ನಿರೂಪಕರು ಮತ್ತು ಸಾಂಕ್ರಾಮಿಕ ರೋಗತಜ್ಞರ ಜೊತೆ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.