ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಜನ: ಅಕ್ರಮ ಮಾಂಸ ಮಾರಾಟದ ಅಡ್ಡೆಗಳ ಮೇಲೆ ದಾಳಿ

By Kannadaprabha NewsFirst Published Apr 22, 2020, 8:47 AM IST
Highlights

ಲಕ್ಷ್ಮೇಶ್ವರದಲ್ಲಿ ದನಗಳ ಮಾಂಸ ಮಾರಾಟ ಮಾಡದಂತೆ ತಾಲೂಕು ಆಡಳಿತದ ಸೂಚನೆ| ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಉಪತಹಸೀಲ್ದಾರ ಎಂ.ಜಿ. ದಾಸಪ್ಪನವರ ನೇತೃತ್ವದಲ್ಲಿ ದಾಳಿ| ದಾಳಿ ವೇಳೆ ಅಪಾರ ಪ್ರಮಾಣ ಮಾಂಸ ಮತ್ತು ಪರಿಕರಗಳು ವಶ|

ಲಕ್ಷ್ಮೇಶ್ವರ(ಏ.22): ಪಟ್ಟಣದ ಆಸಾರ ಓಣಿಯ ಉರ್ದು ಶಾಲೆ ಹತ್ತಿರ ಅಕ್ರಮವಾಗಿ ದನದ ಮಾಂಸ ಮಾರಾಟ ಮಾರುತ್ತಿದ್ದ ತಗಡಿನ ಶೆಡ್ಡಿನ ಅಡ್ಡೆಗಳ ಮೇಲೆ ಮಂಗಳವಾರ ಉಪತಹಸೀಲ್ದಾರ ನೇತೃತ್ವದಲ್ಲಿ ಪುರಸಭೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಲಕ್ಷ್ಮೇಶ್ವರದಲ್ಲಿ ದನಗಳ ಮಾಂಸ ಮಾರಾಟ ಮಾಡದಂತೆ ತಾಲೂಕು ಆಡಳಿತದ ಸೂಚನೆಯಂತೆ ಪುರಸಭೆಯವರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದರೂ ಕ್ಯಾರೆ ಎನ್ನದೇ ಮಾಂಸ ಮಾರಾಟ ಮಾಡುತ್ತಿರುವ ಅಡ್ಡೆ ಮೇಲೆ ಉಪತಹಸೀಲ್ದಾರ ಎಂ.ಜಿ. ದಾಸಪ್ಪನವರ ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣ ಮಾಂಸ ಮತ್ತು ಪರಿಕರಗಳನ್ನು ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. ಕೆಲವು ನಿಮಿಷ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ಸೂಕ್ಷ್ಮವಾಗಿ ಗಮನಿಸಿದ ನಾಯಿಗಳ ಹಿಂಡು ಇಲ್ಲಿಂದ ಮಾಂಸ ತಿನ್ನಲು ಮುಗಿಬಿದ್ದವು.

ಲಾಕ್‌ಡೌನ್‌ ಆದೇಶ ಉಲ್ಲಂಘಣೆ: ಅಗತ್ಯ ವಸ್ತುಗಳ ಖರೀದಿಗೆ ಅರ್ಧ ಕಿಮೀಗೂ ಅಧಿಕ ಸಾಲು..!

ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆಯೇ ಮಾಂಸ ಮಾರಾಟ ಮಾಡುತ್ತಿದ್ದವರು ಅಲ್ಲಿಂದ ಕಾಲ್ಕಿತ್ತರು. ಗದಗ ರಸ್ತೆಯಲ್ಲಿ ಪುರಸಭೆಯಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮಾಂಸ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರೂ ಅದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಕಳೆದ ಅನೇಕ ವರ್ಷಗಳಿಂದ ಉರ್ದು ಶಾಲೆಯ ಪಕ್ಕದಲ್ಲಿಯೇ ದನದ ಮಾಂಸ ಕತ್ತರಿಸುವುದು, ಮಾರಾಟ ಮಾಡುವ ಮೂಲಕ ತಾಲೂಕಾಡಳಿತ ಆದೇಶ ಧಿಕ್ಕರಿಸಿದ್ದಾರೆ.

ಅಲ್ಲದೇ ಪಟ್ಟಣದ ಪುರಸಭೆಯ ಕೂಗಳತೆಯ ದೂರದಲ್ಲಿಯೇ ಜನವಸತಿ ಪ್ರದೇಶದಲ್ಲಿ ಚಿಕನ್‌/ಮಟನ್‌ ಮಾರ್ಕೆಟ್‌ ಇದ್ದು, ಇದಕ್ಕೆ ಹೊಂದಿಕೊಂಡಂತೆ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ, ಶಾಲೆ, ಅಂಗನವಾಡಿಗಳಿವೆ. ಇಲ್ಲಿನ ಮಾರ್ಕೆಟ್‌ ಸ್ಥಳಾಂತರ ಮಾಡಬೇಕು ಎಂದು ಇಡೀ ಪಟ್ಟಣದ ಜನತೆಯ ಒಕ್ಕೊರಲಿನ ಮನವಿ ಮೇರೆಗೆ ಜಿಲ್ಲಾಡಳಿತದ ಸೂಚನೆ ಇದ್ದರೂ ಪುರಸಭೆ ಮಾತ್ರ ಮೀನಮೇಷ ಮಾಡುತ್ತಿದೆ. ಪಟ್ಟಣದ ಹೊರ ವಲಯದಲ್ಲಿ ಇವರಿಗೆ ಸ್ಥಳಾವಕಾಶ ಕಲ್ಪಿಸಿ ಮಾರ್ಕೆಟ್‌ ಸ್ಥಳಾಂತರ ಮಾಡಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ.

ಪಟ್ಟಣದಲ್ಲಿ ಅನಧಿಕೃತ ಮತ್ತು ಅಕ್ರಮವಾಗಿ ಮಾಂಸ ಮಾರಾಟ ಮಾಡುವವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗುವುದು. ಪಟ್ಟಣದಲ್ಲಿ ನಡೆಯುತ್ತಿರುವ ಮಾಂಸ ಮಾರಾಟ ವ್ಯವಸ್ಥೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ಪಟ್ಟಣದ ಕೇಂದ್ರ ಭಾಗದಲ್ಲಿ ಮಾಂಸ ಮಾರಾಟದ ಮಾರ್ಕೆಟ್‌ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಆರ್‌.ಎಂ. ಪಾಟೀಲ ಹೇಳಿದ್ದಾರೆ. 
 

click me!