‘ದಲಿತರ ಹಣದಿಂದಲೇ ಎಂಎಲ್‌ಎ ಟಿಕೆಟ್‌ಗೆ ಠೇವಣಿ'

By Kannadaprabha News  |  First Published Mar 11, 2023, 4:52 AM IST

ತುಮಕೂರು ನಗರ ಬಿಜೆಪಿ ಎಂಎಲ್‌ಎ ಟಿಕೆಟ್‌ಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ವಿನೂತನ ಪ್ರಯತ್ನ ಆರಂಭಿಸಿದ್ದು, ಇದೇ ಮಾ. 12ರಂದು ಜೋಳಿಗೆ ಹಾಗೂ ತಮಟೆಯೊಂದಿಗೆ ಜನತೆಯ ಬಳಿ ಹೋಗಲು ಸಜ್ಜಾಗಿದ್ದಾರೆ.


  ತುಮಕೂರು :  ತುಮಕೂರು ನಗರ ಬಿಜೆಪಿ ಎಂಎಲ್‌ಎ ಟಿಕೆಟ್‌ಗಾಗಿ ಮಾಜಿ ಸಚಿವ ಸೊಗಡು ಶಿವಣ್ಣ ವಿನೂತನ ಪ್ರಯತ್ನ ಆರಂಭಿಸಿದ್ದು, ಇದೇ ಮಾ. 12ರಂದು ಜೋಳಿಗೆ ಹಾಗೂ ತಮಟೆಯೊಂದಿಗೆ ಜನತೆಯ ಬಳಿ ಹೋಗಲು ಸಜ್ಜಾಗಿದ್ದಾರೆ.

ಈಗಾಗಲೇ ತುಮಕೂರು ನಗರ ಬಿಜೆಪಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು,ಟಿಕೆಟ್‌ ಪ್ರಬಲ ಆಕಾಂಕ್ಷಿ ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಹುಮ್ಮಸ್ಸು, ಉತ್ಸಾಹದೊಂದಿಗೆ ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮಟೆ ಬಡಿಯುತ್ತಾ, ಎರಡು ಜೋಳಿಗೆ ಹಿಡಿದು ಮತದಾರರ ಮುಂದೆ ಹೋಗುವೆ. ಒಂದು ಜೋಳಿಗೆಗೆ ಓಟು, ಮತ್ತೊಂದು ಜೋಳಿಗೆಗೆ ನೋಟು ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

Tap to resize

Latest Videos

1977ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡಿದ್ದಾರೆಂದು ಜೋಳಿಗೆ ಹಿಡಿದು ಜೈಲಿಗೆ ಹೋಗಿದ್ದೆ. ಮತದಾರರು ನೀಡಿರುವ ಜೋಳಿಗೆಗಳು ಇವು. ಇದೇ ಮಾ. 12ರಂದು ಭಾನುವಾರ ದಲಿತರ ಎನ್‌.ಆರ್‌. ಕಾಲೋನಿಯ ಕಾಳಮ್ಮ, ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೋಳಿಗೆ ಹಿಡಿದು ಪ್ರಚಾರ ಆರಂಭಿಸುವುದಾಗಿಯೂ, ಚುನಾವಣೆಯಲ್ಲಿ ಸ್ಪರ್ಧಿಸುವ ಠೇವಣಿಗಾಗಿ ದಲಿತರ ಕಾಲೋನಿಯಿಂದ ಸಂಗ್ರಹಿಸುವ ಹಣವನ್ನು ಇಡುವುದಾಗಿ ತಿಳಿಸಿದರು.

ಬುದ್ಧನ ಶಾಂತಿ, ಬಸವಣ್ಣನ ಕಾಯಕ ಮಂತ್ರ:

1994ರಲ್ಲಿ ವಿಧಾನಸಭಾ ಸದಸ್ಯನಾದ ನಾನು ಹಿಂದೂ ನಾವೆಲ್ಲಾ ಒಂದು, ಭ್ರಷ್ಟಾಚಾರ ಮಾಡಬಾರದು, ಸ್ವಜನಪಕ್ಷಪಾತ ನಿಷಿದ್ಧ ಎಂಬ 3 ತತ್ವಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಂಕಲ್ಪ ಮಾಡಿದೆ. ಶಾಸಕನಾಗಿ 4 ಬಾರಿ ಆಯ್ಕೆಯಾದ ನಂತರ, ಸಂವಿಧಾನದ ನಿಯಮದಂತೆ ಬುದ್ಧನ ಶಾಂತಿ ಮಂತ್ರ, ಬಸವಣ್ಣನ ಕಾಯಕತತ್ವ ಅಳವಡಿಸಿಕೊಂಡು ಕಾರ್ಯತತ್ವರನಾದೆ. 20 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದೇನೆ. ತುಮಕೂರು ನಗರದ ಶಾಂತಿ, ಆಡಳಿತ ಸುವ್ಯವಸ್ಥೆ, ಅಭಿವೃದ್ಧಿ ಕನಸು ಹೊಂದಿರುವ ನಗರದ ಹಿರಿಯರು, ನಾಗರಿಕರು, ಪಕ್ಷದ, ವೈಯಕ್ತಿಕ ಅಭಿಮಾನಿಗಳು, ಮಿತ್ರ ಸಮೂಹ, ಕ್ರೀಡಾಪಟುಗಳು, ಯುವ ಸಮೂಹ, ಬಡಜನತೆಯ ಆಶಯದಂತೆ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇನೆ. ಸರ್ಕಾರದ ಕೆಲಸ-ಕಾರ್ಯಗಳು ಸಕಾಲಕ್ಕೆ ದೊರೆಯದಿರುವುದು, ನೊಂದ ಹೃದಯಗಳ ಆಸೆ, ಜನತೆಯ ಪ್ರೀತಿ, ಯುವ ಮುಂದಾಳುಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಇತ್ಯಾದಿ ಕಾರಣಗಳಿಂದ ತಾವು 2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇನೆ ಎಂದು ಸೊಗಡು ಇದೇ ಸಂದರ್ಭದಲ್ಲಿ ತಿಳಿಸಿದರು.

ಎನ್‌.ಆರ್‌. ಕಾಲೋನಿಯ ದಲಿತ ಮುಖಂಡ ನರಸಿಂಹಯ್ಯ ಮಾತನಾಡಿ, ಸೊಗಡು ಶಿವಣ್ಣನವರು ಶಾಸಕರಾಗಿದ್ದ ನಮ್ಮ ಹಿತೈಷಿಗಳಾಗಿದ್ದರು. ಸ್ವಂತ ಅಣ್ಣ-ತಮ್ಮಂದಿರಂತೆ ಯೋಗಕ್ಷೇಮ ವಿಚಾರಿಸಿ, ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದರು. ದಲಿತರ ಕಾಲೋನಿಗಳಿಗೆ ವಿಶೇಷ ಆದ್ಯತೆ ನೀಡಿದ್ದರು ಎಂದು ಸ್ಮರಿಸಿ, ಹೀಗಾಗಿ ಈ ಬಾರಿ ಶಿವಣ್ಣನವರು ನಮ್ಮ ದಲಿತ ಕಾಲೋನಿಯಿಂದಲೇ ಪೂಜೆಯ ಮೂಲಕ ಪ್ರಚಾರ ಆರಂಭಿಸುವಂತೆ ಮನವಿ ಮಾಡಿದ್ದೇವೆ. ಜೊತೆಗೆ ಅವರ ಚುನಾವಣಾ ಠೇವಣಿ ಹಣವನ್ನು ನಮ್ಮ ದಲಿತರ ಕಾಲೋನಿಯಿಂದ ಸಂಗ್ರಹಿಸಿ ಕೊಡಲಾಗುವುದು ಎಂದು ತಿಳಿಸಿದ್ದು, ಸೊಗಡು ಶಿವಣ್ಣನವರು ಒಪ್ಪಿದ್ದಾರೆ. ಇದೇ 12 ರಂದು ಪ್ರಚಾರ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯಸಿಂಹರಾವ್‌, ವಕೀಲರಾದ ಕೆ.ಪಿ. ಮಮತಾ, ಶಾಂತರಾಜು, ಧನಿಯಾಕುಮಾರ್‌ ರಂಗನಾಯ್ಕ, ಶಬ್ಬೀರ್‌ ಅಹಮದ್‌, ಗೋವಿಂದರಾಜು, ಗೋಕುಲ್‌ ಮಂಜುನಾಥ್‌ ಇತರರಿದ್ದರು.

ಕೋಟ್‌...

ಪ್ರತಿ ದಿನ ತುಮಕೂರು ನಗರದ ಒಂದೊಂದು ವಾರ್ಡ್‌ನಲ್ಲಿ ಪಾದಯಾತ್ರೆ ಮಾಡುತ್ತಾ ಪ್ರಚಾರ ನಡೆಸುತ್ತೇನೆ. ನಾನು ಮಾಡಿರುವ ಕಾಯಕವನ್ನು ಹೇಳಿಕೊಂಡು ಪ್ರಚಾರ ನಡೆಸುತ್ತೇನೆ. ಕಳೆದ 2018ರಲ್ಲಿ ಹಿರಿಯರ ಮಾತಿಗೆ ಬೆಲೆ ಕೊಟ್ಟು ತುಮಕೂರು ನಗರ ವಿಧಾನಸಭಾ ಟಿಕೆಚ್‌ ಬಿಟ್ಟು ಕೊಟ್ಟಿದ್ದೆ. ಆದರೆ ಈ ಬಾರಿ ಬಿಜೆಪಿಯಿಂದ ತುಮಕೂರು ನಗರ ಅಭ್ಯರ್ಥಿ ನಾನೇ. ನನಗೆ ಟಿಕೆಟ್‌ ಕೊಡಲೇಬೇಕು.

ಸೊಗಡು ಶಿವಣ್ಣ ಮಾಜಿ ಸಚಿವ

ಫೋಟೋ ಫೈಲ್‌ - 10 ಟಿಯುಎಂ 10

ತುಮಕೂರಿನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಜೋಳಿಗೆ ಧರಿಸಿ, ತಮಟೆ ಬಾರಿಸಿ ಸುದ್ದಿಗೋಷ್ಠಿ ನಡೆಸಿದರು. ಜಯಸಿಂಹರಾವ್‌, ವಕೀಲರಾದ ಕೆ.ಪಿ.ಮಮತಾ ಇತರರಿದ್ದರು.

click me!