ವಿರೋಧ ಪಕ್ಷಗಳು ಯಾರು ಏನೇ ಹೇಳಲಿ, ರಾಜ್ಯ ಮತ್ತು ಗ್ರಾಮಾಂತರದಲ್ಲಿ ಬಿಜೆಪಿ ಪರ ಅಲೆಯಿದ್ದು, ಇದೇ ಉತ್ಸಾಹವನ್ನು ಕೊನೆಯವರೆಗೆ ಕಾರ್ಯಕರ್ತರು ಕಾಯ್ದುಕೊಂಡರೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಸುರೇಶಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ತುಮಕೂರು: ವಿರೋಧ ಪಕ್ಷಗಳು ಯಾರು ಏನೇ ಹೇಳಲಿ, ರಾಜ್ಯ ಮತ್ತು ಗ್ರಾಮಾಂತರದಲ್ಲಿ ಬಿಜೆಪಿ ಪರ ಅಲೆಯಿದ್ದು, ಇದೇ ಉತ್ಸಾಹವನ್ನು ಕೊನೆಯವರೆಗೆ ಕಾರ್ಯಕರ್ತರು ಕಾಯ್ದುಕೊಂಡರೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಸುರೇಶಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಅವರು ತುಮಕೂರು ಗ್ರಾಮಾಂತರ ದ ಊರ್ಡಿಗೆರೆ ಹೋಬಳಿಯಲ್ಲಿ ಪಕ್ಷದ ಗೂಳೂರು, ಊರ್ಡಿಗೆರೆ ಮತ್ತು ಬೆಳಗುಂಬ ಹೋಬಳಿಗಳ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸುರೇಶಗೌಡರು ತಮ್ಮ ಕೆಲಸ, ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ವಿರಾಜಮಾನರಾಗಿದ್ದು, ವಿರೋಧಪಕ್ಷಗಳು ಬಿಜೆಪಿ ಪರ ಅಲೆಯಿಂದ ಹತಾಶರಾಗಿ ಏನೋನೋ ಹೇಳುತಿದ್ದಾರೆ. ಅವುಗಳಿಗೆ ಕಿವಿಗೊಡದೆ ಗ್ರಾಮಾಂತರ ಕ್ಷೇತ್ರದಲ್ಲಿ ಜನತೆ ಸುರೇಶಗೌಡರ ಗೆಲುವಿಗೆ ಶ್ರಮಿಸಬೇಕೆಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, 2014ರಿಂದ 2018ರವರೆಗೆ ಗ್ರಾಮಾಂತರ ಕ್ಷೇತ್ರದ ಶಾಸಕರಾಗಿದ್ದ ಬಿ.ಸುರೇಶಗೌಡರ ಕಾರ್ಯವೈಖರಿಯನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಯಾರೊಂದಿಗೆ ಬೇಕಾದರೆ ಜಗಳವಾಡಲು ಅವರು ಸಿದ್ಧ. ಹಾಗೆಯೇ ಯಾರನ್ನು ಮನವೊಲಿಸಲುಸಿದ್ದರು. ಹಾಗಾಗಿಯೇ 2008ರಿಂದ 2018ರವರೆಗೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು, ಮತದಾರರ ಮನದಲ್ಲಿ ಇರುವಂತೆ ಮಾಡಿವೆ. ಇಂತಹವರು ಮತ್ತೊಮ್ಮೆ ಶಾಸಕರಾಗುವ ನಿಟ್ಟಿನಲ್ಲಿ ಮತದಾರರು ಮುಂದಾಗುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ರಸ್ತೆ, ಶಾಲೆ, ಮನೆಗಳಿಗೆ, ದೇವಾಲಯಗಳಿಗೆ ಆದ್ಯತೆ ನೀಡಿದ್ದು, ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ರೈತರಿಗೆ ನೆರವಾಗುವುದೇ ನಿಜವಾದ ಅಭಿವೃದ್ಧಿ, ಶಾಲಾ, ಕಾಲೇಜು, ರಸ್ತೆಗಳು ,ವಿದ್ಯುತ್ ಸಂಪರ್ಕ, ಆಸ್ಪತ್ರೆಗಳು ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ನನ್ನ ಕಾಲದಲ್ಲಿ ಅಭಿವೃದ್ಧಿಗೆ ಮುಂದಾಗಿದ್ದ ಬಯಲು ಆಂಜನೇಯಸ್ವಾಮಿ ಇಂದಿಗೂ ನೆನೆಗುದಿಗೆ ಬಿದ್ದಿದೆ. ಭವಿಷ್ಯದಲ್ಲಿ ನಾನೇ ಶಾಸಕನಾಗಿ ಅಭಿವೃದ್ಧಿಪಡಿಸಲಿ ಎಂಬುದು ಭಗವಂತನ ಇಚ್ಚೆಯಾಗಿರಬೇಕು. ನಿಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಇದೇ ರೀತಿ ಇದ್ದರೆ, ನಾನು ಶಾಸಕನಾಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.
ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಂಕರಣ್ಣ, ರಘುನಾಥ್, ನರಸಿಂಹಮೂರ್ತಿ, ವೈ.ಟಿ.ನಾಗರಾಜು, ರಾಜುಗೌಡ, ಓಂ ನಮೋ ನಾರಾಯಣ, ಸುಮಿತ್ರಾ ದೇವಿ, ಕೋಡಿಹಳ್ಳಿ ಆಂದಾನಪ್ಪ, ಶಾಂತಕುಮಾರ್, ಗಂಗಾಂಜನೇಯ್ಯ, ರಾಮಚಂದ್ರಯ್ಯ, ಸಿದ್ದೇಗೌಡ, ರವೀಶ್, ರವಿ, ರಮೇಶ್,ಶಿವಕುಮಾರ್, ಕೆಂಪಸಿದ್ದಯ್ಯ ಸೇರಿದಂತೆ ಎಲ್ಲಾ ಜಿ.ಪಂ, ತಾ.ಪಂ ಮಾಜಿ ಸದಸ್ಯರು, ಎಲ್ಲಾ ಮಂಡಲಗಳ ಅಧ್ಯಕ್ಷರು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅವಧಿಯಲ್ಲಿ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಇನ್ನು ಜೆಡಿಎಸ್ ಪಕ್ಷಕ್ಕೆ 25 ಸೀಟು ಬಂದರೆ ಸಾಕು. ನಮ್ಮ ಆಟ ಆಡೋಣ ಎಂಬ ಲೆಕ್ಕಾಚಾರದಲ್ಲಿದೆ. ಈ ಎರಡು ಪಕ್ಷಗಳನ್ನು ಜನರು ತಿರಸ್ಕರಿಸಿ, ವಿಶ್ವವೇ ಭಾರತದ ಕಡೆ ನೋಡುವಂತೆ ಅಳ್ವಿಕೆ ನಡೆಸುತ್ತಿರುವ ನರೇಂದ್ರಮೋದಿ ಅವರ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮತ ನೀಡಿ, ಅಧಿಕಾರದಲ್ಲಿ ಮುಂದುವರೆಯುವಂತೆ ಮಾಡಬೇಕು.
ಆರಗ ಜ್ಞಾನೇಂದ್ರ ಸಚಿವ