
ಖಾಜು ಸಿಂಗೆಗೋಳ
ಇಂಡಿ(ಮಾ.15): ಬರದ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿಯೂ ಬರ ತಾಂಡವಾಡುತ್ತಿದೆ. ಇದರಿಂದ ರೈತರ ಬೆಳೆಗಳಿಗೆ ನೀರಿಲ್ಲದೇ ಬೆಳೆ ಹಾಳಾಗುತ್ತಿವೆ. ಇದರ ಬೆನ್ನಲ್ಲೇ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ಇಂಡಿ ತಾಲೂಕಿನ ಕೆರೆ, ಬಾವಿಗಳಲ್ಲಿ ನೀರು ಮಾಯವಾಗಿದ್ದು, ಇದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಜಿಪಂ ವ್ಯಾಪ್ತಿಯಲ್ಲಿ ಒಟ್ಟು 32 ಕೆರೆಗಳಿದ್ದು, ಭೀಕರ ಬರಗಾಲದ ಪರಿಣಾಮ ಅವರು ಬರಿದಾಗಿವೆ. ಮುಂಗಾರು, ಹಿಂಗಾರು ಸಮರ್ಪಕವಾಗಿ ಸುರಿಯದ ಕಾರಣ ನೀರಿಲ್ಲದೇ ಬಣಗುಡುತ್ತಿವೆ. ಕೆಲವು ಕಡೆ ಕೆರೆಯ ಒಡಲು ಬತ್ತಿ ಬಾಯ್ದೆರೆದಿದೆ.
ತಳ ಕಂಡ ಅಂತರ್ಜಲಮಟ್ಟ:
ತಾಲೂಕಿನಲ್ಲಿ ಅಂತರ್ಜಲಮಟ್ಟ ಸಂಪೂರ್ಣ ಕುಸಿದಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 24 ಕೆರೆಗಳಲ್ಲಿ ಕೇವಲ 5 ಕೆರೆಗಳಲ್ಲಿ ಮಾತ್ರ ಕನಿಷ್ಠ ಮಟ್ಟದಲ್ಲಿ ನೀರಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 8 ಕೆರೆಗಳು ಸಂಪೂರ್ಣ ಒಣಗಿವೆ. ತಾಲೂಕಿನ 828 ಹ್ಯಾಂಡ್‌ಪಂಪ್‌ಗಳಲ್ಲಿ 600 ಹ್ಯಾಂಡ್‌ಪಂಪ್‌ಗಳು ನೀರಿಲ್ಲದೇ ಸ್ಥಗಿತಗೊಂಡಿವೆ. ಇನ್ನುಳಿದ ಹ್ಯಾಂಡ್‌ಪಂಪ್‌ಗಳಲ್ಲಿ ಕನಿಷ್ಠ ಮಟ್ಟದಲ್ಲಿ ನೀರಿದೆ. 105 ತೆರೆದ ಬಾವಿಗಳಲ್ಲಿ 70 ಬಾವಿಗಳಲ್ಲಿ ನೀರಿಲ್ಲದೇ ಒಣಗಿವೆ. ಮೋಟಾರ್ ಅಳವಡಿಸಿದ 539 ಬೋರ್‌ವೆಲ್‌ಗಳಲ್ಲಿ 340 ಬೋರ್‌ವೆಲ್‌ಗಳು ಅಂತರ್ಜಲಮಟ್ಟ ಕಡಿಮೆಯಾಗಿ ಸ್ಥಗಿತಗೊಂಡಿವೆ.
ಬೆಂಗಳೂರಿನಲ್ಲಿ ಬಿಜೆಪಿಗರು ಹೇಳುವಷ್ಟು ನೀರಿನ ಹಾಹಾಕಾರ ಇಲ್ಲ: ಡಿ.ಕೆ.ಶಿವಕುಮಾರ್
ಒಣಗಿದ ಕೆರೆಗಳು:
ಭೀಕರ ಬರದ ಛಾಯೆಗೆ ತಾಲೂಕು ತತ್ತರಿಸಿದೆ. ಸಣ್ಣನೀರಾವರಿ ಇಲಾಖೆ ಹಾಗೂ ಜಿಪಂ ವ್ಯಾಪ್ತಿಯ ಒಟ್ಟು 32 ಕೆರೆಗಳಲ್ಲಿ ಕೊಟ್ನಾಳ ಕೆರೆಯಲ್ಲಿ ಶೇ.25ರಷ್ಟು, ಹೊರ್ತಿ ಕೆರೆಯಲ್ಲಿ ಶೇ.5 ರಷ್ಟು, ಹಂಜಗಿ ಕೆರೆಯಲ್ಲಿ ಶೇ.40 ರಷ್ಟು, ತಡವಲಗಾ ಕೆರೆಯಲ್ಲಿ ಶೇ.10 ರಷ್ಟು ಹಾಗೂ ರಾಜನಾಳ ಕೆರೆಯಲ್ಲಿ ಶೇ.10ರಷ್ಟು ಮಾತ್ರ ನೀರು ಇದೆ. ಉಳಿದ ಕೆರೆಗಳು ಒಣಗಿವೆ ಎಂದು ಸಂಬಂಧಿಸಿದ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.
ಕೆರೆ ತುಂಬಿದರೆ ನೀರಾವರಿಗೆ ಅನುಕೂಲ:
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 24 ಕೆರೆಗಳು ಸಂಪೂರ್ಣ ತುಂಬಿದರೆ, 24 ಸಾವಿರ ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಇಂಡೈರೆಕ್ಟ್ ನೀರಾವರಿಗೆ ಅನುಕೂಲವಾಗುತ್ತದೆ. ಹೀಗಾಗಿ ಅವಿಭಜಿತ ಇಂಡಿ, ಚಡಚಣ ತಾಲೂಕಿನ ಎಲ್ಲ ಕೆರೆಗಳು ತುಂಬಿದರೆ ಅಂತರ್ಜಲಮಟ್ಟ ಹೆಚ್ಚಾಗಿ ಸ್ಥಗಿತಗೊಂಡಿದ್ದ ಎಲ್ಲ ಹ್ಯಾಂಡ್‌ಪಂಪ್, ತೆರೆದ ಬಾವಿ, ಬೋರ್‌ವೆಲ್‌ಗಳು ಮತ್ತೇ ರೀಚಾರ್ಜ್ ಆಗಿ ನೀರಿನ ಅನುಕೂಲವಾಗಲಿದೆ.
ಶೀಘ್ರ ಕೆರೆ ತುಂಬುವ ಯೋಜನೆ ಜಾರಿಯಾಗಲಿ:
ತಾಲೂಕಿನ 24 ಸಣ್ಣ ನೀರಾವರಿ ಹಾಗೂ 8 ಜಿಪಂ ವ್ಯಾಪ್ತಿಯ ಕೆರೆಗಳನ್ನು ಜುಲೈ ತಿಂಗಳಿನಿಂದ ಫೆಬ್ರುವರಿ ತಿಂಗಳವರೆಗೆ ತುಂಬಿದರೆ ಭೀಕರ ಬರಗಾಲವಿದ್ದರೂ ಅಂತರ್ಜಲಮಟ್ಟ ಕಡಿಮೆಯಾಗದೆ. ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೊರುವುದಿಲ್ಲ. ಇಂಡಿ-ಚಡಚಣ ತಾಲೂಕುಗಳು ಸೇರಿ ಒಟ್ಟು 32 ಕೆರೆಗಳನ್ನು ತುಂಬಿಸುವ ಯೋಜನೆ ಶೀಘ್ರವಾಗಿ ಆರಂಭಿಸಬೇಕು ಎಂಬುವುದು ಈ ಭಾಗದ ರೈತರ ಆಗ್ರಹವಾಗಿದೆ.
ನಿಸರ್ಗ ಕೈಕೊಟ್ಟಿದ್ದರಿಂದ ಮಳೆಯ ಅಭಾವದಿಂದ ತಾಲೂಕಿನಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ತಡವಲಗಾ, ಅಥರ್ಗಾ, ಹಂಜಗಿ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನದಲ್ಲಿ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಜಲಧಾರೆ ಯೋಜನೆ ಪ್ರಗತಿಯಲ್ಲಿದ್ದು, ಜಲಧಾರೆ ಯೋಜನೆ ಆರಂಭವಾದರೆ ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.
ಬರದ ಬರೆ: ರಾಜ್ಯಾದ್ಯಂತ ಕೆರೆಗಳು ಖಾಲಿ, ಖಾಲಿ, ಕುಡಿಯುವ ನೀರಿಗೆ ಹಾಹಾಕಾರ..!
ಕುಡಿಯುವ ನೀರಿನ ಸಲುವಾಗಿ ಕಾಲುವೆ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಟ್ಯಾಂಕ್ ಇರುವ ಕಡೆಗಳಲ್ಲಿ ಹಾಗೂ ಬಳಗಾನೂರ, ಸಂಗೊಗಿ, ಲೋಣಿ ಕೆಡಿ ಕೆರೆಗಳನ್ನು ತುಂಬಿಸಲಾಗುತ್ತದೆ. ಕೇವಲ ಕುಡಿಯುವ ನೀರಿಗಾಗಿ ಮಾತ್ರ ಕಾಲುವೆ ಮೂಲಕ ನೀರು ಬಿಡಲಾಗುತ್ತದೆ. ರೈತರು ಸಹಕರಿಸಬೇಕು ಎಂದು ರಾಂಪೂರ ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಹೇಳಿದ್ದಾರೆ.
ಇಂಡಿ ಹಾಗೂ ಚಡಚಣ ತಾಲೂಕಿನಲ್ಲಿ ಮಳೆಯ ಅಭಾವದಿಂದ ಅಂತರ್ಜಲಮಟ್ಟ ಕುಸಿದಿದೆ. ಕೊಳವೆಬಾವಿ, ತೆರೆದ ಬಾವಿಗಳು ಹಾಗೂ ಗ್ರಾಮದಲ್ಲಿರುವ ಹ್ಯಾಂಡ್‌ಪಂಪ್‌ಗಳಲ್ಲಿನ ನೀರಿನ ಮಟ್ಟ ಶೇ.75ರಷ್ಟು ಕುಸಿದಿದೆ. ಇಂಡಿ ತಾಲೂಕಿನ ಹ್ಯಾಂಡ್‌ಪಂಪ್, ತೆರೆದ ಬಾವಿಗಳು ಹಾಗೂ ವಿದ್ಯುತ್ ಮೋಟಾರ್ ಅಳವಡಿಸಿದ ಬೋರ್‌ವೆಲ್‌ಗಳು ಸೇರಿ ಒಟ್ಟು 1472 ಜಲಮೂಲಗಳಿದ್ದು, ಅದರಲ್ಲಿ ಶೇ.75 ರಷ್ಟು ನೀರಿನ ಮೂಲಗಳು ಬತ್ತಿ ಹೋಗಿವೆ. ಇನ್ನೂಳಿದ ಕೆಲ ಜಲಮೂಲದಲ್ಲಿ ಶೇ.10 ರಷ್ಟು ಪ್ರಮಾಣದಲ್ಲಿ ನೀರಿದೆ ಎಂದು ಇಂಡಿ ತಾಪಂ ಇಒ(ಪ್ರಭಾರ) ಸಂಜಯ ಖಡಗೇಕರ ತಿಳಿಸಿದ್ದಾರೆ.