ಹುಕ್ಕೇರಿ ತಾಲೂಕು ಪಂಚಾಯತಿ ಆವರಣದ ಬಳಿ ಇರುವ ಕಾರ್ಮಿಕ ಇಲಾಖೆಯ ತಾತ್ಕಾಲಿಕ ಕಚೇರಿಯಲ್ಲಿ ಈ ಕಿಟ್‌ಗಳನ್ನು ಕೂಡಿಟ್ಟುರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಚೇರಿಯ ಕತ್ತಲೆ ಕೊಠಡಿಯೊಂದರಲ್ಲಿ ಸುಮಾರು 100ಕ್ಕೂ ಹೆಚ್ಚು ಕಿಟ್‌ಗಳನ್ನು ಗೌಪ್ಯವಾಗಿ ಇಡಲಾಗಿದೆ.
ರವಿ ಕಾಂಬಳೆ
ಹುಕ್ಕೇರಿ(ಅ.06): ದುಡಿಯುವ ವರ್ಗದ ಬಡ ಮಕ್ಕಳ ವಿದ್ಯಾರ್ಜನೆಗೆ ಉತ್ತೇಜನ ನೀಡುವ ಸದುದ್ದೇಶದಿಂದ ಸರ್ಕಾರ ಹಂಚಿಕೆ ಮಾಡಿರುವ ಶೈಕ್ಷಣಿಕ ಸಾಮಗ್ರಿ ಹೊಂದಿದ ಕಿಟ್‌ಗಳನ್ನು ಹುಕ್ಕೇರಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಚ್ಚಿಟ್ಟುಕೊಂಡ ಸಂಗತಿ ಬೆಳಕಿಗೆ ಬಂದಿದೆ.
ಇಲ್ಲಿನ ತಾಲೂಕು ಪಂಚಾಯತಿ ಆವರಣದ ಬಳಿ ಇರುವ ಕಾರ್ಮಿಕ ಇಲಾಖೆಯ ತಾತ್ಕಾಲಿಕ ಕಚೇರಿಯಲ್ಲಿ ಈ ಕಿಟ್‌ಗಳನ್ನು ಕೂಡಿಟ್ಟುರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಚೇರಿಯ ಕತ್ತಲೆ ಕೊಠಡಿಯೊಂದರಲ್ಲಿ ಸುಮಾರು 100ಕ್ಕೂ ಹೆಚ್ಚು ಕಿಟ್‌ಗಳನ್ನು ಗೌಪ್ಯವಾಗಿ ಇಡಲಾಗಿದೆ.
ಮನೆ ಬಾಗಿಲಿಗೆ ಡಾಕ್ಟರ್: ಗೃಹ ಆರೋಗ್ಯ ಯೋಜನೆ 8 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ, ಸಚಿವ ಗುಂಡೂರಾವ್
ಶೈಕ್ಷಣಿಕ ಸಾಮಗ್ರಿ ಈ ಕಿಟ್ ಪಡೆಯಲು ಅರ್ಹ ಕಾರ್ಮಿಕ ಫಲಾನುಭವಿಗಳು ಕಚೇರಿ ಅಲೆದು ಸುಸ್ತಾಗಿದ್ದಾರೆ. 3 ತಿಂಗಳು ಹಿಂದೆಯೇ ಬಂದಿದ್ದರೂ ಇದುವರೆಗೆ ಕಿಟ್‌ಗಳನ್ನು ವಿತರಣೆ ಮಾಡದಿರುವುದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಕೂಡಿಟ್ಟ ಕಿಟ್‌ಗಳಲ್ಲಿ ಕೆಲ ಕಿಟ್‌ಗಳು ಇಲಿ-ಹೆಗ್ಗಣಗಳ ಹಾವಳಿಗೆ ಹಾನಿಯಾಗಿವೆ.
ಸದಾ ಈ ಕೊಠಡಿಯ ಬಾಗಿಲು ಹಾಕಲಾಗಿದ್ದು ಯಾರ ಕಣ್ಣಿಗೂ ಕಾಣದಂತೆ ಈ ಕಿಟ್‌ಗಳ ಮೇಲೆ ಹೊದಿಕೆ ಹಾಕಿ ಮುಚ್ಚಲಾಗಿದೆ. ಇದನ್ನು ಪ್ರಶ್ನಿಸಬೇಕಿದ್ದ ತಾಲೂಕು ಆಡಳಿತ ಮತ್ತು ಕಾರ್ಮಿಕ ಸಂಘಟನೆಗಳು ಮೌನಕ್ಕೆ ಜಾರಿರುವುದು ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿವೆ. ಇನ್ನು ಬಚ್ಚಿಟ್ಟ ಈ ಕಿಟ್‌ಗಳ ಪೈಕಿ ಕೆಲ ಕಿಟ್‌ಗಳನ್ನು ತಮಗೆ ಬೇಕಾದ, ಕಾರ್ಮಿಕರೂ ಅಲ್ಲದವರಿಗೆ ಕೊಡುತ್ತಿದ್ದರೆ, ಇನ್ನು ಕೆಲ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾಮಾನ್ಯವಾಗಿ ಕೇಳಿ ಬಂದಿವೆ.
2023-24ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹುಕ್ಕೇರಿ ತಾಲೂಕಿಗೆ ಈ ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಈ ಕಿಟ್‌ಗಳ ವಿತರಣೆಯಲ್ಲಿ ಕಾರ್ಮಿಕರ ಇಲಾಖೆಯಲ್ಲಿ ನೋಂದಾಯಿತ ಹಳೆಯ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಲಾಗಿದೆ.
ಕಾರ್ಮಿಕರ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗುವ ದಿಸೆಯಲ್ಲಿ 9 ರಿಂದ 12 ತರಗತಿ ಮತ್ತು 6 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎರಡು ಹಂತದಲ್ಲಿ ಶೈಕ್ಷಣಿಕ ಸಾಮಗ್ರಿಗಳುಳ್ಳ ಕಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು ನೋಂದಾಯಿತ 16000 ವಿವಿಧ ಕೆಲಸ ಮಾಡುವ ಕಾರ್ಮಿಕರಿದ್ದು ಈ ಪೈಕಿ ಕೇವಲ 380ಕ್ಕೂ ಹೆಚ್ಚು ಮಕ್ಕಳಿಗೆ ಕಿಟ್‌ಗಳ ಬಂದಿರುವುದರಿಂದ ಇದೊಂದು ರೀತಿಯಲ್ಲಿ ರಾವಣ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹಾಗಾಗಿ ಕಿಟ್ ಪಡೆಯಲು ಕಾರ್ಮಿಕರಲ್ಲೇ ಪೈಪೋಟಿ ನಡೆದಿದೆ.
ರೈತರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಸಿದ್ಧ: ಸಚಿವ ಸತೀಶ ಜಾರಕಿಹೊಳಿ
ಅನಧಿಕೃತ ವ್ಯಕ್ತಿಯ ದರ್ಬಾರ್ :
ಇನ್ನು ಕಾರ್ಮಿಕ ಇಲಾಖೆಯಲ್ಲಿ ಅನಧಿಕೃತ ವ್ಯಕ್ತಿಯೊಬ್ಬರ ದರ್ಬಾರ್ ಜೋರಾಗಿದೆ. ಇಲಾಖೆಯ ಅಧಿಕಾರಿಯ ಸಹಾಯ ಹಸ್ತದಿಂದ ಎಲಿಮುನ್ನೋಳಿಯ ಸಯ್ಯದ ತಹಸೀಲ್ದಾರ್ ಎನ್ನುವ ವ್ಯಕ್ತಿ ಕಚೇರಿಯ ಎಲ್ಲ ಕೆಲಸಗಳಲ್ಲಿ ಮೂಗು ತೂರಿಸುವ ಪ್ರಸಂಗವಿದೆ ಎಂಬುವುದು ಕಾರ್ಮಿಕರ ಗಂಭೀರ ಆರೋಪವಾಗಿದೆ. ಈ ಅನಧಿಕೃತ ವ್ಯಕ್ತಿಗೆ ಇಲಾಖೆಯ ಅಧಿಕಾರಿಣಿಯ ಕೃಪಾಕಟಾಕ್ಷವಿದೆ ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ.
ಪಾರದರ್ಶಕವಾಗಿ ಕಿಟ್ ವಿತರಿಸುತ್ತಿದ್ದು ಈಗಾಗಲೇ ಹುಕ್ಕೇರಿ ಕ್ಷೇತ್ರದ ಶೈಕ್ಷಣಿಕ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯ ಪೂರ್ಣಗೊಂಡಿದೆ. ಯಮಕನಮರಡಿ ಕ್ಷೇತ್ರದಲ್ಲಿ ವಿತರಿಸುವ ಕಾರ್ಯ ಬಾಕಿ ಇದ್ದು ಕೂಡಲೇ ಈ ಕಾರ್ಯ ನಡೆಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕಿ ಜಾನ್ಹವಿ ತಳವಾರ ತಿಳಿಸಿದ್ದಾರೆ.