ಸರ್ಕಾರಿ ಅಧಿಕಾರಿಗಳು ಕಚೇರಿಗೆ ಬರುವ ಸಾರ್ವಜನಿಕರ ಕೆಲಸವನ್ನು ಲಂಚ ಪಡೆಯದೆ ಮಾಡಿಕೊಡಬೇಕು. ಒಂದು ವೇಳೆ ಅಧಿಕಾರಿಗಳು, ಸಿಬ್ಬಂದಿಗಳು ವಿನಾಕಾರಣ ತೊಂದರೆ ನೀಡುವುದು ಸೇರಿದಂತೆ ಲಂಚಕ್ಕೆ ಬೇಡಿಕೆ ಇಟ್ಟರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ವಾಲಿಬಾಷಾ ತಿಳಿಸಿದರು.
ತಿಪಟೂರು : ಸರ್ಕಾರಿ ಅಧಿಕಾರಿಗಳು ಕಚೇರಿಗೆ ಬರುವ ಸಾರ್ವಜನಿಕರ ಕೆಲಸವನ್ನು ಲಂಚ ಪಡೆಯದೆ ಮಾಡಿಕೊಡಬೇಕು. ಒಂದು ವೇಳೆ ಅಧಿಕಾರಿಗಳು, ಸಿಬ್ಬಂದಿಗಳು ವಿನಾಕಾರಣ ತೊಂದರೆ ನೀಡುವುದು ಸೇರಿದಂತೆ ಲಂಚಕ್ಕೆ ಬೇಡಿಕೆ ಇಟ್ಟರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ವಾಲಿಬಾಷಾ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡದೆ ಸುಖಾಸುಮ್ಮನೆ ಅಲೆದಾಡಿಸಿದರೆ ನೀವು ಲೋಕಾಯುಕ್ತ ಇಲಾಖೆಗೆ ದೂರು ನೀಡಬೇಕು. ಲೋಕಾಯುಕ್ತರ ಭೇಟಿ ಕಾರ್ಯಕ್ರಮದ ಬಗ್ಗೆ ಪ್ರಚಾರದ ಕೊರತೆಯಿಂದ ಸಾರ್ವಜನಿಕರಿಗೆ ಮಾಹಿತಿಯೇ ತಿಳಿಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳು ಎರಡು-ಮೂರು ದಿನಗಳ ಮೊದಲೇ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಂತೆ ತಾ.ಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ ವಿವೇಕಾನಂದ ನಗರ ಬಡಾವಣೆಯ ನಿವಾಸಿಗಳು, ನಮ್ಮ ಬಡಾವಣೆಯಲ್ಲಿ ಕಳೆದ ಹಲವಾರು ದಿನಗಳಿಂದ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿನಿತ್ಯ ಕುಡಿದು ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕೂಡಲೆ ಕ್ರಮಕೈಗೊಳ್ಳಬೇಕೆಂದು ನಿವಾಸಿ ರಾಜಣ್ಣ ದೂರು ನೀಡಿದರು.
ತಾಲೂಕಿನ ಅಂಗನವಾಡಿ ಕಟ್ಟಡಗಳ ಬಗ್ಗೆ ಮತ್ತು ತಾಲೂಕಿನಲ್ಲಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಮಕ್ಕಳಿಗೆ ಸರಿಯಾದ ಆಹಾರ ವಿತರಣೆ ಆಗುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಪ್ಪನವರಿಗೆ ಲೋಕಾಯುಕ್ತರು ಸೂಚಿಸಿದರು.
ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟಕ್ಕೆ ಅಕ್ಕಿಯ ಕೊರತೆ ಇರುವ ಬಗ್ಗೆ ತಿಳಿದು ಬಂದಿದ್ದು ಬಿಸಿಯೂಟ ನಿಲ್ಲಿಸದೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ವಚ್ಚವಾಗಿರುವ ಅಕ್ಕಿಯನ್ನು ಊಟಕ್ಕೆ ಬಳಕೆ ಮಾಡುವಂತೆ ತಿಳಿಸಿ ಪ್ರತಿ ಶಾಲೆಗೆ ತೆರಳಿ ಆಹಾರವನ್ನು ಪರಿಶೀಲನೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿಗೆ ಸೂಚಿಸಿದರು.
ಅರಣ್ಯ ಇಲಾಖೆಯು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿ ಕೃಷ್ಣಗೌಡರಿಗೆ ಲೋಕಾಯುಕ್ತರು ಸೂಚನೆ ನೀಡಿದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರಕುತ್ತಿಲ್ಲ ಹಾಗೂ ಔಷಧಿ ಕೊರತೆ ಬಗ್ಗೆ ದೂರುಗಳು ಸಾಕಷ್ಟಿದ್ದು ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ತಾಲೂಕು ಆರೋಗ್ಯ ಅಧಿಕಾರಿ ರವಿಕುಮಾರ್‌ಗೆ ಲೋಕಾಯುಕ್ತರು ಸೂಚಿಸಿದರು.
ನಗರ ಪ್ರದೇಶದಲ್ಲಿ ಮೂಲಭೂತ ಸೌಕರ್ಯದ ಕೊರತೆ ಹೆಚ್ಚಾಗಿದ್ದು ನಗರಸಭೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಉಮಾಕಾಂತ್‌ಗೆ ಲೋಕಾಯುಕ್ತರು ಸೂಚಿಸಿದರು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಬಂದಿರುವ ಅನುದಾನಗಳು ನಿರ್ವಹಣೆ ಸರಿಯಾಗಿ ಆಗಬೇಕು. ರೈತರಿಗೆ ವಿತರಿಸಲು ಬಂದಿರುವ ಕೃಷಿ ಉಪಕರಣಗಳನ್ನು ಹಾಳಾಗಲು ಬಿಡದೆ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು. ರಸಗೊಬ್ಬರಗಳು ಕಾಲಕಾಲಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕಂದು ಕೃಷಿ ಅಧಿಕಾರಿ ಚನ್ನಕೇಶವಮೂರ್ತಿಗೆ ಸೂಚಿಸಿದರು.
ತಾಲೂಕಿನ ಪ್ರತಿ ಗ್ರಾಮ ಲೆಕ್ಕಿಗರ ಕಚೇರಿಗೆ ತೆರಳಿ ಕಾರ್ಯವೈಖರಿ ಕಡತ ಪರಿಶಿಲನೆ ಹಾಗೂ ಪ್ರತಿವಾರ ಸಭೆ ನಡೆಸಬೇಕೆಂದು ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್‌ಗೆ ಲೋಕಾಯುಕ್ತರು ಸೂಚನೆ ನೀಡಿದರು.
ತಿಪಟೂರಿನ ಸರ್ವೆ ಇಲಾಖೆಯ ಅಧಿಕಾರಿಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಅಳತೆಯ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ತಮ್ಮ ದಾಖಲೆಗಳ ಸಮಸ್ಯೆಗಳ ಬಗ್ಗೆ ಕಛೇರಿಗೆ ಬರುವ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಈ ಬಗ್ಗೆ ಸಾಕಷ್ಟುದೂರುಗಳು ಬರುತ್ತಿವೆ. ಕೂಡಲೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಜನಪರ ಕೆಲಸ ಮಾಡದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಸರ್ವೆ ಇಲಾಖೆಯ ಅಧಿಕಾರಿಗೆ ಲೋಕಾಯುಕ್ತರು ಎಚ್ಚರಿಸಿದರು.
ಸಭೆಯಲ್ಲಿ ಲೋಕಾಯುಕ್ತ ರಾಮಿರೆಡ್ಡಿ, ಸಿಬ್ಬಂದಿಗಳಾದ ನಳಿನಾಕ್ಷಿ, ರಾಘವೇಂದ್ರ ಸೇರಿದಂತೆ ತಹಸೀಲ್ದಾರ್ ಪವನ್‌ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.