ಸಚಿವ ದಿ.ಉಮೇಶ ಕತ್ತಿ ಕನಸು ನನಸು, ಹುಕ್ಕೇರಿ ಕ್ಷೇತ್ರದ ಅನಾಥ ಪ್ರಜ್ಞೆ ಹೋಗಲಾಡಿಸಲು ಸರ್ಕಾರದ ಹೊಸ ಹೆಜ್ಜೆ.
ರವಿ ಕಾಂಬಳೆ
ಹುಕ್ಕೇರಿ(ಫೆ.21): ಗ್ರಾಮೀಣ ಬಡಜನರಿಗೆ ಸ್ವಂತ ಸೂರು ಕಲ್ಪಿಸಬೇಕೆಂಬ ಬಯಕೆ ಹೊಂದಿದ್ದ ಸಚಿವ ದಿ.ಉಮೇಶ ಕತ್ತಿ ಅವರ ಕನಸು ನನಸಾಗುವ ಕಾಲ ಇದೀಗ ಕೂಡಿ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಹೊಸ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರ ಮನೆ ಭಾಗ್ಯ ಕರುಣಿಸಿದೆ. ಹುಕ್ಕೇರಿ ವಿಧಾನಸಭಾ ಮತಕ್ಷೇತ್ರವೊಂದಕ್ಕೆ 2636 ಹೆಚ್ಚುವರಿಯಾಗಿ ಹೊಸ ಮನೆಗಳನ್ನು ನಿರ್ಮಿಸಲು ಗ್ರೀನ್ ಸಿಗ್ನಲ್ ನೀಡಿದೆ. ತನ್ಮೂಲಕ ರಾಜ್ಯ ಸರ್ಕಾರ ಮತದಾರರಲ್ಲಿ ಕ್ಷೇತ್ರಕ್ಕೆ ಶಾಸಕರಿಲ್ಲ ಎಂಬ ಅನಾಥ ಪ್ರಜ್ಞೆ ಹೋಗಲಾಡಿಸಲು ಹೊಸ ಹೆಜ್ಜೆ ಇಟ್ಟಿದೆ.
2021-22ನೇ ಸಾಲಿನ ಬಸವ ವಸತಿ ಯೋಜನೆಯಡಿ 2001 ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಡಿ 635 ಸೇರಿ ಒಟ್ಟು 2636 ಹೆಚ್ಚುವರಿ ಮನೆಗಳ ನಿರ್ಮಾಣ ಗುರಿ ನಿಗದಿಪಡಿಸಿ ಮಂಜೂರಾತಿ ನೀಡಿ ಆದೇಶಿಸಿದೆ. ಆದರೆ, ತಾಲೂಕಿನ ಮತ್ತೊಂದು ಕ್ಷೇತ್ರವಾದ ಯಮಕನಮರಡಿಗೆ ಒಂದೇ ಒಂದು ಹೆಚ್ಚುವರಿ ಮನೆ ಹಂಚಿಕೆಯಾಗದಿರುವುದು ಆ ಭಾಗದ ಬಡವರಲ್ಲಿ ನಿರಾಸೆ ಮೂಡಿಸಿದೆ.
ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆ: ಪಾಟೀಲ್ - ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ 'ದಾಖಲೆ' ದಂಗಲ್!
ಹುಕ್ಕೇರಿ ಕ್ಷೇತ್ರ ವ್ಯಾಪ್ತಿಯ 32 ಗ್ರಾಮ ಪಂಚಾಯಿತಿಗಳ ವಸತಿ ರಹಿತ ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ನಿವಾಸ್ (ಗ್ರಾಮೀಣ) ಯೋಜನೆಯಡಿ ಒಟ್ಟು 2636 ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.
ಇದೀಗ ಹೆಚ್ಚುವರಿ ಮನೆಗಳನ್ನು ನೀಡಿರುವುದು ಬಡವರಲ್ಲಿ ಸಹಜವಾಗಿ ಸಂಭ್ರಮ ಮನೆ ಮಾಡಿದೆ. ಸ್ವಂತ ಸೂರಿಲ್ಲದೆ ಪರದಾಡುತ್ತಿರುವ ಬಡವರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವುದು ಈ ಭಾಗದಲ್ಲಿ ಹರ್ಷದ ಹೊನಲು ಹರಿದಿದೆ.
ಇದೇ ವೇಳೆ ತಮ್ಮ ಜೀವಿತಾವಧಿಯಲ್ಲೇ ಮನೆಗಳ ಮಂಜೂರಾತಿಗೆ ದಿ.ಉಮೇಶ ಕತ್ತಿ ಪ್ರಯತ್ನಿಸಿದ್ದರು. ಬಳಿಕ ಮಾಜಿ ಸಂಸದರೂ ಆದ ಸಹೋದರ ರಮೇಶ ಕತ್ತಿ ಅವರು ವಸತಿ ಸಚಿವ ವಿ.ಸೋಮಣ್ಣ, ವಸತಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಎರಡೂವರೆ ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲರಾಗಿದ್ದು ಬಡವರ ಬಾಳಿಗೆ ‘ಆಸರೆ’ಯಾಗಿದ್ದಾರೆ.
ರಮೇಶ ಜಾರಕಿಹೊಳಿ ಕೋಟೆಯಲ್ಲಿ ಲಕ್ಷ್ಮೀ ಸ್ಪರ್ಧಿಸ್ತಾರಾ?: ಮಾಜಿ ಸಚಿವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ
ಎ,ಬಿ,ಸಿ ವರ್ಗಗಳಂತೆ ಗ್ರಾಪಂವಾರು ಮತ್ತು ಗ್ರಾಮ ಪಂಚಾಯತಿ ಸದಸ್ಯರ ಅನುಗುಣವಾಗಿ ಈ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು ಈ ತಿಂಗಳ ಅಂತ್ಯದೊಳಗೆ ಫಲಾನುಭಗಳನ್ನು ಆಯ್ಕೆ ಮಾಡುವ ಅಂತಿಮ ಗಡುವು ನೀಡಲಾಗಿದೆ. ಮನೆಗಳ ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಗ್ರಾಮಸಭೆಯ ಮೂಲಕ ಆಯ್ಕೆಗೊಳಿಸಬೇಕು. ಫಲಾನುಭವಿಗಳು ಹೆಚ್ಚಿದ್ದಲ್ಲಿ ಲಾಟರಿ ಎತ್ತುವ ಮೂಲಕ ವಿಡಿಯೋ ಚಿತ್ರಿಕರಣ ದಾಖಲಿಸುವುದು. ಅನರ್ಹ ಫಲಾನುಭವಿಗಳು ಆಯ್ಕೆಯಾಗಿದ್ದು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಹುಕ್ಕೇರಿ ಕ್ಷೇತ್ರದ ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಕಲ್ಪಿಸಬೇಕೆಂಬುದು ಸಹೋದರ ಉಮೇಶ ಕತ್ತಿ ಅವರ ಕನಸಾಗಿತ್ತು. ಇದೀಗ ಹುಕ್ಕೇರಿ ಕ್ಷೇತ್ರ ವ್ಯಾಪ್ತಿಯ 32 ಗ್ರಾಪಂಗಳಿಗೆ 2636 ಹೆಚ್ಚುವರಿ ಮನೆಗಳನ್ನು ಮಂಜೂರಾತಿ ಮಾಡಿದ್ದು ಬಡವರು, ವಸತಿರಹಿತರಿಗೆ ವರದಾನವಾಗಿದೆ ಅಂತ ಮಾಜಿ ಸಂಸದರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದ್ದಾರೆ.