ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ
320ಕ್ಕೂ ಹೆಚ್ಚು ನೀರು ಸರಬರಾಜು ನೌಕರರಿಂದ ಅಮರಣ ಉಪವಾಸ ಸತ್ಯಾಗ್ರಹ ಆರಂಭ
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವ
ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜ.30): ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ 358 ನೌಕರರಿಗೆ ಕಳೆದ 8 ತಿಂಗಳಿಂದ ಸಂಬಳವೂ ನೀಡದೆ, ಮರು ನೇಮಕವೂ ಮಾಡದೆ ಬಡವರ ಮಕ್ಕಳ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಇಂತಹ ಜನವಿರೋಧಿ ನೀತಿ ಖಂಡಿಸಿ ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು 320ಕ್ಕೂ ಹೆಚ್ಚು ನೀರು ಸರಬರಾಜು ನೌಕರರು ಸೋಮವಾರ ಬೆಳಗ್ಗೆಯಿಂದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಳೆದ ಹಲವು ತಿಂಗಳಿಂದ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ, ಸಕಾರಾತ್ಮಕವಾಗಿ ಸ್ಪಂದಿಸಬೇಕಾದ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ ತಮ್ಮ ವೈಯಕ್ತಿಕ ಪ್ರತಿಷ್ಟೆಗಾಗಿ ಎಲ್ ಆಂಡ್ ಟಿ ಕಂಪನಿಯ ಹಿತವನ್ನು ಕಾಯುತ್ತಿದ್ದಾರೆ. ಆದರೆ ನಮ್ಮ ನೂರಾರು ನೌಕರರ ಕಾಳಜಿ ವಹಿಸುತ್ತಿಲ್ಲ. ರಾಜ್ಯ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ನಮ್ಮ ಭವಿಷ್ಯದೊಂದಿಗೆ ಆಟವಾಡುತ್ತಿರುವುದು ಯಾವ ನ್ಯಾಯ. ಈಗಲಾದರೂ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತು ಎಲ್ಲಾ 358 ನೌಕರರ ಮರುನೇಮಕ ಮಾಡಿಕೊಳ್ಳಬೇಕು ಹಾಗೂ ಎಂಟು ತಿಂಗಳ ಸಂಬಳ ತಕ್ಷಣ ಬಿಡುಗಡೆಗೆ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಾಗುವ ಎಲ್ಲಾ ಅನುಹುತಗಳಿಗೆ ರಾಜ್ಯ ಸರಕಾರವೇ ಹೊಣೆಯಾಗುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದರು.
Dharwad: ದಕ್ಷಿಣ ಭಾರತದ ಪ್ರಥಮ ಫಾರೆನ್ಸಿಕ್ ವಿವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಡಿಗಲ್ಲು
ನೌಕರರ ನೋವಿಗೆ ಸ್ಪಂದಿಸದ ಸರ್ಕಾರ : ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ತವರು ಜಿಲ್ಲೆಯಲ್ಲಿಯೇ ಹಲವಾರು ತಿಂಗಳಿಂದ ನೂರಾರು ನೌಕರರು ಹೋರಾಟ ನಡೆಸುತ್ತಿದ್ದರೂ ನಮ್ಮ ನೋವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ. ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಎಲ್ ಆಂಡ್ ಟಿ ಪರ ಮುತುವರ್ಜಿ ತೋರಿಸುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ನೂರಾರು ನೌಕರರ ಜೊತೆಗೆ ಚೆಲ್ಲಾಟವಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಮಾಡು ಇಲ್ಲವೇ ಮಡಿ ಅಸ್ತ್ರ: ಈ ಅಮರಣ ಉಪವಾಸ ಸತ್ಯಾಗ್ರಹ ದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ, ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಗೌಡರ, ನೌಕರರಾದ ಅಮಿತ್ ತಾರಿಹಾಳ, ಮಂಜುನಾಥ ಚವ್ಹಾಣ, ಶರಣು ಕಂಬಾರ, ಶೇಖು ಬೆಟಗೇರಿ, ಪ್ರಕಾಶ ಹುಲ್ಲೂರ, ಬಸನಗೌಡ ಜಕ್ಕನಗೌಡರ, ಅಣ್ಣಪ್ಪ ಕಾಳಗಿ, ಸಂತೋಷ ಕರಿಲಿಂಗಣ್ಣನವರ, ನಿಂಗಪ್ಪ ಕಡೆಮನಿ, ಮಂಜುನಾಥ ಕರಿಲಿಂಗಣ್ಣವರ, ರಾಜು ಭೂಮಕ್ಕನವರ, ರಾಜಪತ್ರ ದೊಡ್ಡಮನಿ, ಶ್ರೀಮತಿ ಬಸಮ್ಮ ರತ್ನಣ್ಣವರ ಸೇರಿ 320ಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದು ಅಮರಣ ಉಪವಾಸ ಸತ್ಯಾಗ್ರಹದ ವಿಶೇಷವಾಗಿದೆ. ಜನಜಾಗೃತಿ ಸಂಘ ಅಧ್ಯಕ್ಯರಾದ ಬಸವರಾಜ ಕೊರವರ ಮಾತನಾಡಿ ಇದು ಹೋರಾಟದ ಕೊನೆಯ ಅಸ್ತ್ರವಾಗಿದ್ದು ಮಾಡು ಇಲ್ಲವೇ ಮಡಿ ಎಂಬಾಂತಾಗಿದೆ.
ಬೆಂಗಳೂರು: ಬಿಬಿಎಂಪಿ ಹೆಸರಲ್ಲಿ ಕರೆ ಮಾಡಿ ಸ್ನೇಹಿತರಿಗೇ ವಂಚನೆ..!
ಈ ಪ್ರತಿಭಟನೆಯಲ್ಲಿ ಆನಂದ ಕಾಳಮ್ಮನವರ, ಸಿದ್ದು ಕಳ್ಳಿಮನಿ, ಬಸವರಾಜ ಮುಕ್ಕಲ, ಮಹೇಶ ಮೇಲಿನಮಠ, ನಿಂಗಪ್ಪ ಸೂರ್ಯವಂಶಿ, ಅಯ್ಯಪ್ಪಯ್ಯ ಸೇರಿದಂತೆ ಅನೇಕ ನೌಕರರು ಉಪಸ್ಥಿತರಿದ್ದರು.