ಸೇವೆ ಕಾಯಂ ಮತ್ತು ಉದ್ಯೋಗ ಭದ್ರತೆ ಎದುರು ನೋಡುತ್ತಿರುವ ಅತಿಥಿ ಉಪನ್ಯಾಸಕರಿಗೆ ವರ್ಷಕ್ಕೆ ಎರಡು ಮೂರು ಬಾರಿ ಮಾತ್ರ ಸಂಬಳ ಬಿಡುಗಡೆ ಆಗುತ್ತದೆ. ಈಗ ಆ ವೇತನ ಪಡೆಯಲೂ ಲಂಚ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.14): ಸೇವೆ ಕಾಯಂ ಮತ್ತು ಉದ್ಯೋಗ ಭದ್ರತೆ ಎದುರು ನೋಡುತ್ತಿರುವ ಅತಿಥಿ ಉಪನ್ಯಾಸಕರಿಗೆ ವರ್ಷಕ್ಕೆ ಎರಡು ಮೂರು ಬಾರಿ ಮಾತ್ರ ಸಂಬಳ ಬಿಡುಗಡೆ ಆಗುತ್ತದೆ. ಈಗ ಆ ವೇತನ ಪಡೆಯಲೂ ಲಂಚ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅತಿಥಿ ಉಪನ್ಯಾಸಕರು ಪ್ರತಿ ಬಾರಿ ಸಂಬಳ ಬ್ಯಾಂಕ್ ಖಾತೆಗೆ ಜಮೆಯಾಗಬೇಕೆಂದರೆ, ಕಾಲೇಜು ಪ್ರಾಂಶುಪಾಲರು, ಗುಮಾಸ್ತರಿಗೆ ಇಂತಿಷ್ಟುಲಂಚ ಕೊಡಲೇಬೇಕು. ಕಾಲೇಜಿನ ಉಪನ್ಯಾಸಕರ ಸಂಖ್ಯೆ, ಒಟ್ಟಾರೆ ವೇತನದ ಪ್ರಮಾಣ ಆಧರಿಸಿ ಲಂಚ ನಿರ್ಧಾರವಾಗುತ್ತದೆ.
ಡಿಡಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ: ಆದರೀಗ ಅತಿಥಿ ಉಪನ್ಯಾಸಕರಿಗೆ ಡಿಸೆಂಬರ್ ತಿಂಗಳಲ್ಲಿ ಹೆಚ್ಚುವರಿಯಾಗಿ 2021-22ನೇ ಸಾಲಿನ ಮಾಚ್‌ರ್ ಹಾಗೂ ಏಪ್ರಿಲ್ ತಿಂಗಳ ವೇತನ ಬಿಡುಗಡೆಯಾಗಿದೆ. ಅಂದರೆ ಎರಡು ತಿಂಗಳಿಗೆ 15 ಸಾವಿರ ರುಪಾಯಿ ಖಾತೆಗೆ ಜಮೆಯಾಗಿದೆ. ಮಾರ್ಚ್ ತಿಂಗಳ ವೇತನ 9 ಸಾವಿರ ಬೇಡ, ಏಪ್ರಿಲ್ ತಿಂಗಳ ವೇತನದಲ್ಲಿ 3400 ರು. ಇಟ್ಟುಕೊಂಡು ಉಳಿಕೆ 5600 ರುಪಾಯಿ ವಾಪಸ್ ನೀಡುವಂತೆ ಕೆಲ ಕಾಲೇಜುಗಳ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗೆ ಫರ್ಮಾನು ಹೊರಡಿಸಿದ್ದಾರೆ.
ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ: ಸಂಸದ ಸುರೇಶ್
ಅತಿಥಿ ಉಪನ್ಯಾಸಕರು ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಏಕೆಂದು ಪ್ರಶ್ನಿಸಿದರೆ ಅವರೆಲ್ಲರು ಉಪನಿರ್ದೇಶಕರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಆದರೆ, ಉಪನಿರ್ದೇಶಕರ ಪ್ರಾಮಾಣಿಕತೆ ಬಗ್ಗೆ ತಿಳಿದಿರುವ ಅತಿಥಿ ಉಪನ್ಯಾಸಕರಿಗೆ ಕಾಲೇಜು ಪ್ರಾಂಶುಪಾಲರು ಮತ್ತು ಇಲಾಖೆ ಅಧಿಕಾರಿಗಳ ಮೇಲೆಯೇ ಅನುಮಾನ ಮೂಡಿವೆ.
ಪ್ರಾಂಶುಪಾಲರ ಮರ್ಜಿಯಲ್ಲಿ ಅತಿಥಿ ಉಪನ್ಯಾಸಕರು: ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಆಯ್ಕೆಯಾದ ಬಳಿಕ ಪ್ರಾಂಶುಪಾಲರ ಮರ್ಜಿಯಲ್ಲಿರಬೇಕು. ಹೆಚ್ಚುವರಿ ಕೆಲಸ ಹೇಳಿದರೆ, ಇಲ್ಲವೆನ್ನುವಂತಿಲ್ಲ. ಮಾಡಿದಷ್ಟುಕೆಲಸಕ್ಕೆ ಸಂಬಳದ ಅನುಮೋದನೆ ಆಗದಿದ್ದರೆ, ಕೇಳುವಂತೆಯೂ ಇಲ್ಲ. ಕೇಳಿದರೆ, ಅನುಮೋದನೆ ಆಗಿದ್ದಿಷ್ಟೇ. ಬೇಕಾದರೆ ಕಾಲೇಜು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಎಂಬ ಸೂಚನೆ. ಅಲ್ಲಿಯೂ ಸಮರ್ಪಕ ಉತ್ತರ ಸಿಗುವುದಿಲ್ಲ. ನಂತರ, ಮುಂದಿನ ವರ್ಷ ಆ ಕಾಲೇಜಿನಲ್ಲಿ ಕೆಲಸ ಸಿಗುವುದು ಖಚಿತ ಇರುವುದಿಲ್ಲ.
ಹತ್ತಾರು ವರ್ಷದ ಅನುಭವವಿದ್ದರೂ ಪ್ರತಿ ವರ್ಷವೂ ಹೊಸದಾಗಿ ಅರ್ಜಿ ಹಾಕಲೇಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗಾಗಿ ಲೋಕಸೇವಾ ಆಯೋಗ ಅರ್ಜಿ ಕರೆದರೂ ಅನುಭವವನ್ನು ಪರಿಗಣಿಸದಿರುವುದರಿಂದ ಹೆಚ್ಚುವರಿ ಅಂಕವಿಲ್ಲ. ಬಹುತೇಕರಿಗೆ ವಯೋಮಿತಿ ಮೀರಿರುವುದರಿಂದ ಅರ್ಜಿ ಹಾಕಲೂ ಸಾಧ್ಯವಾಗದೆ ಉದ್ಯೋಗದ ಕನಸು ಚೂರುಚೂರಾಗಿದೆ. ಇದರ ಲಾಭವನ್ನು ಪ್ರಾಂಶುಪಾಲರು ಪಡೆಯುತ್ತಿದ್ದಾರೆ. ಈ ಮೊದಲು ಅತಿಥಿ ಉಪನ್ಯಾಸಕರಿಗೆ 9 ಸಾವಿರ ರುಪಾಯಿ ವೇತನವನ್ನು ರಾಜ್ಯ ಸರ್ಕಾರ 2022-23ನೇ ಸಾಲಿನ ಜುಲೈ ತಿಂಗಳಿಂದ 12 ಸಾವಿರ ರುಪಾಯಿಗೆ ಹೆಚ್ಚಳ ಮಾಡಿದೆ. ಕೆಲ ಕಾಲೇಜುಗಳಲ್ಲಿ ಪ್ರತಿ ತಿಂಗಳ ವೇತನದಲ್ಲಿಯೂ ಲಂಚ ಫಿಕ್ಸ್ ಮಾಡಿರುವ ಆರೋಪಗಳು ಕೇಳಿ ಬರುತ್ತಿವೆ.
ಅತಿಥಿ ಉಪನ್ಯಾಸಕರು ಒಂದಕ್ಕಿಂತ ಹೆಚ್ಚು ಕಾಲೇಜಲ್ಲಿ ಪಾಠ ಮಾಡುವಂತಿಲ್ಲ. ಹೀಗಾಗಿ ಮೂರು ದಿನವಷ್ಟೇ ಕೆಲಸ. ಉಳಿದ ದಿನಗಳಲ್ಲಿ ಬೇರೆ ಕೆಲಸ ಗಟ್ಟಿ. ಆಸ್ತಿ ಇದ್ದರೆ, ದಂಪತಿ ಇಬ್ಬರೂ ದುಡಿಯುತ್ತಿದ್ದರಷ್ಟೇ ನಿರಾಳ. ಪತಿಗೂ ಕೆಲಸವಿಲ್ಲದೆ, ಅತಿಥಿ ಉಪನ್ಯಾಸಕರಾಗಿ ಮನೆ ಹೊಣೆ ಹೊತ್ತ ಮಹಿಳೆಯರ ಪರಿಸ್ಥಿತಿ ಇನ್ನೂ ಕಷ್ಟ. ಸಿಗುವ ಹಿಡಿಯಷ್ಟುಸಂಬಳದಲ್ಲಿ ಮನೆ ಬಾಡಿಗೆ, ಹೆಂಡತಿ, ಮಕ್ಕಳು, ಅಪ್ಪ-ಅಮ್ಮನ ಯೋಗಕ್ಷೇಮ ನೋಡುವುದಾದರೂ ಹೇಗೆ? ಸ್ವಂತ ಖರ್ಚಿಗೂ ಹಣವಿರುವುದಿಲ್ಲ. ಇಂಥ ಅತಂತ್ರ ಪರಿಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರ ಬಳಿಯೂ ಕೆಲ ಪ್ರಾಂಶುಪಾಲರು ಲಂಚಕ್ಕೆ ಬೇಡಿಕೆ ಇಡುತ್ತಿರುವುದು ವಿಪರ್ಯಾಸದ ಸಂಗತಿ.
ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ಹೆಚ್ಚುವರಿ ವೇತನದಲ್ಲಿ 5600 ರುಪಾಯಿ ಹಿಂದಿರುಗಿಸುವಂತೆ ಪ್ರಾಂಶುಪಾಲರು ನಮ್ಮೆಲ್ಲರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನೀಡಬೇಕೆಂದು ನೇರವಾಗಿಯೇ ಹೇಳುತ್ತಿದ್ದಾರೆ. ಸರ್ಕಾರ ಹಣ ವಾಪಸ್ ಕೇಳಿದ್ದರೆ ಆದೇಶ ಬರುತ್ತಿತ್ತು. ಆದರೆ, ಪ್ರಾಂಶುಪಾಲರು ಬೇಡಿಕೆ ಇಡುತ್ತಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಉಪನಿರ್ದೇಶಕರು ಗಮನ ಹರಿಸಿ ಕ್ರಮ ವಹಿಸಬೇಕು.
- ಅತಿಥಿ ಉಪನ್ಯಾಸಕರು
ಪ್ರಾಣಕೊಟ್ಟು ಹೋರಾಡಿ ಪಕ್ಷ ಗೆಲ್ಲಿಸುತ್ತೇವೆ: ಎಚ್.ಡಿ.ದೇವೇಗೌಡ
ಅತಿಥಿ ಉಪನ್ಯಾಸಕರ ಖಾತೆಗಳಿಗೆ ನೇರವಾಗಿ ವೇತನ ಬಿಡುಗಡೆಯಾಗುತ್ತದೆ. ಅವರ ವೇತನದಲ್ಲಿ ಹಣ ನೀಡುವಂತೆ ನಾನು ಯಾರಿಗೂ ಹೇಳಿಲ್ಲ. ಯಾವುದಾದರು ಕಾಲೇಜುಗಳಲ್ಲಿ ಆ ರೀತಿ ಹಣ ವಸೂಲಿ ಮಾಡಿದ್ದರೆ ದೂರು ನೀಡಬಹುದು. ತಪ್ಪಿತಸ್ಥ ಪ್ರಾಂಶುಪಾಲರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ. ಅತಿಥಿ ಉಪನ್ಯಾಸಕರು ಹಿಂಜರಿಯದೆ ದೂರು ನೀಡಬಹುದು.
-ಗೋವಿಂದರಾಜು, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮನಗರ