ಅಧಿಕಾರಕ್ಕೆ ಬಂದ್ರೆ ಬೆಂಗಳೂರಿನ ಚಿತ್ರಣವೇ ಬದಲು: ದೆಹಲಿ ಡಿಸಿಎಂ ಸಿಸೋಡಿಯಾ

By Kannadaprabha NewsFirst Published Nov 12, 2020, 9:56 AM IST
Highlights

ಬಿಬಿಎಂಪಿ ಎಲ್ಲಾ ವಾರ್ಡಲ್ಲೂ ಆಪ್‌ ಸ್ಪರ್ಧೆ| ಅಧಿಕಾರಕ್ಕೆ ಬಂದರೆ ಪ್ರತಿವಾರ್ಡ್‌ಗೆ 3 ಆಪ್‌ ಕ್ಲಿನಿಕ್‌| ಬೆಂಗಳೂರಿನ ಶೇ.70 ರಷ್ಟು ಜನ ದೆಹಲಿ ಮಾದರಿ ಆಮ್‌ ಆದ್ಮಿ ಸರ್ಕಾರ ಬೆಂಗಳೂರಿಗೆ ಬೇಕು ಎಂಬ ಅಭಿಪ್ರಾಯ| ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ನೀಡದ ಸರ್ಕಾರ ಜನರಿಗೆ ಬೇಕಿಲ್ಲ| 

ಬೆಂಗಳೂರು(ನ.12): ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು (ಆಪ್‌) ಎಲ್ಲಾ ವಾರ್ಡ್‌ಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ತಿಳಿಸಿದ್ದಾರೆ.

ಬುಧವಾರ ಶಾಂತಿನಗರದಲ್ಲಿನ ಆಮ್‌ ಆದ್ಮಿ ಕ್ಲಿನಿಕ್‌ ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ. ಬದಲಿಗೆ ಕಾಯಕದ ಮೇಲೆ ರಾಜಕಾರಣ ಮಾಡುತ್ತೇವೆ. ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಪಕ್ಷದ ಸ್ವಯಂ ಸೇವಕರು ಸೇರಿ ಉಚಿತ ಕ್ಲಿನಿಕ್‌ ಪ್ರಾರಂಭಿಸಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿವಾರ್ಡ್‌ಗೆ 3 ಕ್ಲಿನಿಕ್‌ ತೆರೆಯಲಾಗುವುದು ಎಂದರು.

Fact Check| ದಿಲ್ಲಿ ಗಲಭೆ: ಆಪ್‌ನಿಂದ ಮುಸ್ಲಿಮರಿಗೆ ಮಾತ್ರ ಪರಿಹಾರ!

ಬಿಬಿಎಂಪಿ ಅಧಿಕಾರ ಅನುಭವಿಸಿದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಬೆಂಗಳೂರಿನ ಜನತೆಗೆ ನಯಾಪೈಸೆ ಅನುಕೂಲ ಮಾಡಿಲ್ಲ. ಪಕ್ಷವು ಅಧಿಕಾರಕ್ಕೆ ಬರುವ ವಿಶ್ವಾಸ ಇದ್ದು, ಬೆಂಗಳೂರಿನ ಚಿತ್ರವನ್ನು ಬದಲಿಸುತ್ತೇವೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಸಂಚಾಲಕ ಪೃಥಿರೆಡ್ಡಿ ಮಾತನಾಡಿ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ನೀಡದ ಸರ್ಕಾರ ಜನರಿಗೆ ಬೇಕಿಲ್ಲ. ನಾವು ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರಿನ ಶೇ.70 ರಷ್ಟು ಜನ ದೆಹಲಿ ಮಾದರಿ ಆಮ್‌ ಆದ್ಮಿ ಸರ್ಕಾರ ಬೆಂಗಳೂರಿಗೆ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಲಿದೆ ಎಂದರು. ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ಆಮ್‌ಆದ್ಮಿ ಕ್ಲಿನಿಕ್‌ ಉಸ್ತುವಾರಿ ರಾಣಿ ದೇಸಾಯಿ, ರಾಜ್ಯ ಕಾರ್ಯದರ್ಶಿ ಸಂಚಿತ್‌ ಸಹಾನಿ ಇತರರು ಉಪಸ್ಥಿತರಿದ್ದರು.
 

click me!