ಶಿರಾ ಚುನಾವಣೆ : ಬುಡಮೇಲಾದ ರಾಜಕೀಯ ಲೆಕ್ಕಾಚಾರ!

By Kannadaprabha NewsFirst Published Nov 12, 2020, 9:33 AM IST
Highlights

ಶಿರಾ ತಾಲೂಕಿನ ಎಲ್ಲೆಡೆ ವಾತಾವರಣ ಗಮನಿಸಿದ್ದರೆ ಬಿಜೆಪಿ ಜಯದ ಹೊಸ್ತಿಲಲ್ಲಿದೆ ಎಂಬುದು ಎಲ್ಲರಿಗೂ ತಿಳಿಯುತ್ತಿತ್ತು. ಇಲ್ಲಿನ ರಾಜಕೀಯ ಲೆಕ್ಕಾಚಾರವೇ ಬುಡಮೇಲಾಗಿದೆ. 

ವರದಿ : ಉಗಮ ಶ್ರೀನಿವಾಸ್‌

 ತುಮಕೂರು (ನ.12):  ಮತಾದಾನಕ್ಕೂ ಮುನ್ನ ಶಿರಾ ತಾಲೂಕಿನ ಎಲ್ಲೆಡೆ ವಾತಾವರಣ ಗಮನಿಸಿದ್ದರೆ ಬಿಜೆಪಿ ಜಯದ ಹೊಸ್ತಿಲಲ್ಲಿದೆ ಎಂಬುದು ಎಲ್ಲರಿಗೂ ತಿಳಿಯುತ್ತಿತ್ತು. ಆದರೆ ಎಲ್ಲಾ 24 ಸುತ್ತುಗಳಲ್ಲೂ ಲೀಡ್‌ ಬಿಟ್ಟು ಕೊಡದ ಮಟ್ಟಿಗೆ ಬಿಜೆಪಿ ತಳವೂರಿದೆ ಎಂಬುದು ಫಲಿತಾಂಶ ಹೊರಬಿದ್ದಾಗಲೇ ತಿಳಿದದ್ದು.

ಹಾಗೆ ನೋಡಿದರೆ ಬಿಜೆಪಿ ಶಿರಾದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಯೇ ಇಲ್ಲ. ಗೆಲ್ಲುವುದಿರಲಿ ಎರಡನೇ ಸ್ಥಾನಕ್ಕೂ ಈವರೆಗೆ ಬಂದಿರಲಿಲ್ಲ. ಕಳೆದ ಚುನಾವಣೆಯಲ್ಲಿ ಕೇವಲ 16 ಸಾವಿರ ಮತಗಳನ್ನು ಪಡೆದಿದ್ದ ಬಿಜೆಪಿ ಎರಡೂವರೆ ವರ್ಷದಲ್ಲೇ ಬಂದ ಉಪಚುನಾವಣೆಯಲ್ಲಿ ಸರಿ ಸುಮಾರು 5 ಪಟ್ಟು ಮತ ಪಡೆಯುತ್ತದೆ ಎಂಬುದನ್ನು ಯಾವ ರಾಜಕೀಯ ಪಂಡಿತರು ಲೆಕ್ಕ ಹಾಕಿರಲಿಲ್ಲ.

ಒಂದಲ್ಲಾ ಎರಡಲ್ಲ ಭರ್ತಿ 76564 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಮದಲೂರು ಕೆರೆಯನ್ನೇ ಕೇಂದ್ರವಾಗಿಟ್ಟುಕೊಂಡು ಹೊರಟ ಬಿಜೆಪಿ ಈಗ ಗೆದ್ದು ಸಂಭ್ರಮಿಸಿದೆ. 6 ಬಾರಿ ಶಾಸಕರಾಗಿದ್ದ ಜಯಚಂದ್ರ ಸತತ ಎರಡು ಸೋಲಿನಿಂದ ಅಕ್ಷರಶಃ ಕಂಗೆಟ್ಟಿದ್ದು ಅವರಿಗೆ ರಾಜಕೀಯ ಹಿನ್ನೆಡೆಯಾಗಿದೆ ಎಂಬ ಚರ್ಚೆ ಶುರುವಾಗಿದೆ. ಇನ್ನು ಬಿಜೆಪಿ ಕಳೆದ ಬಾರಿ 74 ಸಾವಿರ ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ ಅರ್ಧದಷ್ಟುಮತಗಳನ್ನು ಪಡೆಯಲು ವಿಫಲವಾಗುವ ಮೂಲಕ ತೀವ್ರ ನಿರಾಶೆ ಮೂಡಿಸಿದೆ.

ಬಿಜೆಪಿಗಾಗಿ ದುಡಿದ ಮತ್ತೋರ್ವ ಮುಖಂಡಗೆ ಸಚಿವ ಸ್ಥಾನ : ಸಿಎಂ ಆಪ್ತರಿಂದಲೇ ವಿರೋಧ ..

ಜೆಡಿಎಸ್‌ ಭದ್ರಕೋಟೆಯಲ್ಲಿ ಬಿರುಕು:  ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನ ದೊಡ್ಡ ಕೋಟೆಯಾಗಿದ್ದ ತುಮಕೂರಿನ ದಳದ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದು ಕಾಲದಲ್ಲಿ 9 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಜೆಡಿಎಸ್‌ ಈಗ ಶಿರಾವನ್ನು ಅತ್ಯಂತ ಹೀನಾಯವಾಗಿ ಕಳೆದುಕೊಂಡಿದೆ. ಆರಂಭದಿಂದಲೂ ಪಕ್ಷದ ಯಾವೊಬ್ಬರ ವಿಶ್ವಾಸವನ್ನು ಪಡೆಯುವಲ್ಲಿ ಜೆಡಿಎಸ್‌ ವಿಫಲವಾಯಿತು. ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌, ಸುರೇಶಬಾಬು, ಕಾಂತರಾಜು ಮತ್ತಿತರರು ಸಕ್ರಿಯವಾಗಿ ತೊಡಗಿಕೊಳ್ಳಲಿಲ್ಲ. ಹೀಗಾಗಿ ಶಿರಾದ ವಶದಲ್ಲಿದ್ದ ಜೆಡಿಎಸ್‌ ಅನ್ನು ಅತ್ಯಂತ ಉದಾರವಾಗಿ ಬಿಟ್ಟುಕೊಟ್ಟಂತಾಗಿದೆ.

ಇನ್ನು ಕಾಂಗ್ರೆಸ್‌ ಸತತ ಎರಡನೇ ಬಾರಿ ಸೋಲನ್ನು ಅನುಭವಿಸಿದೆ. ಜಯಚಂದ್ರ ಅವರ ಕುಟುಂಬಕ್ಕೆ ಇದು ಮೂರನೇ ಸೋಲು. ಕಳೆದ 2018 ರ ಚುನಾವಣೆಯಲ್ಲಿ ಜಯಚಂದ್ರ ಅವರು ಶಿರಾದಿಂದ ಸ್ಪರ್ಧಿಸಿದರೆ ಅವರ ಪುತ್ರ ಸಂತೋಷ್‌ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸಿದ್ದರು. ಎರಡೂ ಕಡೆ ಸೋಲು ಕಾಣುವಂತಾಯಿತು. ಈಗ ಉಪಚುನಾವಣೆಯಲ್ಲೂ ಜಯಚಂದ್ರ ಸೋಲುವುದರೊಂದಿಗೆ ಅವರಿಗೆ ರಾಜಕೀಯ ಹಿನ್ನೆಡೆಯಾಗಲಿದೆ ಎಂಬ ಚರ್ಚೆ ನಡೆದಿದೆ.

ಮತ್ತೆ ನಾಲ್ಕು ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ...

ಇನ್ನು ಬಿಜೆಪಿ ಚುನಾವಣೆ ಘೋಷಣೆಯಾದಾಗಿನಿಂದ ಮುಗಿಯುವವರೆಗೂ ಅದು ನಡೆಸಿದ ತಂತ್ರಗಾರಿಕೆ ರೋಚಕವಾಗಿತ್ತು. ನಿರಂತರವಾಗಿ ಬೂತ್‌ ಮಟ್ಟದ ಸಭೆಗಳು, ಪಕ್ಷದೊಳಗಿನ ಅಸಮಾಧಾನ ಸ್ಫೋಟಗೊಳ್ಳದಂತೆ ನೋಡಿಕೊಂಡಿದ್ದು, ಬೇರೆ ಪಕ್ಷದಲ್ಲಿನ ಅಸಮಾಧಾನಗೊಂಡಿರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಹೀಗೆ ಎಲ್ಲಾ ಹಂತದಲ್ಲೂ ಬಿಜೆಪಿ ತನ್ನ ಚಾಣಕ್ಯ ನೀತಿ ಅನುಸರಿಸಿತು. ಶಿರಾದಲ್ಲಿ ಗೆದ್ದದ್ದು ಅಭ್ಯರ್ಥಿಗಿಂತ ಹೆಚ್ಚಾಗಿ ಪಕ್ಷವೇ ಗೆದ್ದಿತು. ಚುನಾವಣೆ ಘೋಷಣೆಯಾದಾಗ ರಾಜೇಶಗೌಡ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತು. 3 ವಾರಗಳ ರಾಜಕೀಯ ತಂತ್ರಗಾರಿಕೆಯಿಂದ ಬಿಜೆಪಿ ಜಯಭೇರಿ ಬಾರಿಸುವುದರೊಂದಿಗೆ ಮೊದಲ ಬಾರಿಗೆ ಶಿರಾದಲ್ಲಿ ಬಿಜೆಪಿ ಬಾವುಟ ಹಾರಿದಂತಾಗಿದೆ.
  
ಪಕ್ಷ 2018

ಜೆಡಿಎಸ್‌ 74338

ಕಾಂಗ್ರೆಸ್‌ 63973

ಬಿಜೆಪಿ 16959

2020

ಜೆಡಿಎಸ್‌ 36783

ಕಾಂಗ್ರೆಸ್‌ 63150

ಬಿಜೆಪಿ 76564

click me!