ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಮಂಡಳಿಯ ಸರ್ವ ಸದಸ್ಯರ ನಿಯೋಗದೊಂದಿಗೆ ಜು.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಶಿವಮೊಗ್ಗ (ಜು.01): ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಮಂಡಳಿಯ ಸರ್ವ ಸದಸ್ಯರ ನಿಯೋಗದೊಂದಿಗೆ ಜು.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಡಿ.ಸುಧಾಕರ್ ಹೇಳಿದರು.
ನಗರದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಮಂಡಳಿಯು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಶಕ್ತವಾಗಿದ್ದು, ಮಂಡಳಿಯ ವತಿಯಿಂದ ಕೈಗೊಳ್ಳಲಾದ ಈವರೆಗಿನ ಕಾಮಗಾರಿಗಳು ತೃಪ್ತಿಕರವಾಗಿವೆ. ಈ ಮಂಡಳಿಯನ್ನು ಇನ್ನಷ್ಟುಕ್ರಿಯಾಶೀಲವಾಗಿ ಮಾಡುವಲ್ಲಿ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು. ಜು.7ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಮೊದಲೇ ಮಂಡಳಿಯ ಮೊದಲ ಸಭೆ ಇದಾಗಿದ್ದು, ಹೆಚ್ಚಿನ ಅನುದಾನಕ್ಕೆ ಶಾಸಕರು ಆಗ್ರಹಿಸಿದರು.
ಮಳೆ ಕೊರತೆ ಹಿನ್ನೆಲೆ ಕುಡಿವ ನೀರು ಸಮಸ್ಯೆಯಾಗದಿರಲಿ: ಶಾಸಕ ಬಿ.ವೈ.ವಿಜಯೇಂದ್ರ
ಇಂದಿನ ಸಭೆಯಲ್ಲಿ ಪ್ರತಿ ಶಾಸಕರಿಗೆ 3 ಕೋಟಿ ನೀಡಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದೆ .1 ಕೋಟಿ ನೀಡಲು ಸರ್ಕಾರ ತೀರ್ಮಾನಿಸಿತ್ತು. ಒಟ್ಟು .350 ಕೋಟಿ ಪ್ರಸ್ತಾವನೆಯನ್ನು ಕೂಡ ಹಿಂದಿನ ಎಂಎಡಿಬಿ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು. ಅದನ್ನೇ ಈ ಬಾರಿಯೂ ಕೂಡ ಸಭೆಯಲ್ಲಿ ಆಗ್ರಹಿಸಲಾಯಿತು. 44 ಶಾಸಕರು ಕಾಮಗಾರಿಯ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಈ ಬಾರಿ ಆಯ್ಕೆಯಾದ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲು ವಿನಂತಿಸಲಾಯಿತು. 2023 -24ನೇ ಸಾಲಿಗೆ ಹಿಂದಿನ ಸರ್ಕಾರ ಒಟ್ಟು 43 ಕೋಟಿ ಅನುದಾನವನ್ನು ಆಯವ್ಯಯದಲ್ಲಿ ನಿಗದಿ ಮಾಡಿದ್ದು, ಹೊಸ ಬಜೆಟ್‌ನಲ್ಲಿ ಮಂಡಳಿಗೆ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಡಿ.ಸುಧಾಕರ್ ತಿಳಿಸಿದರು.
ಮಂಡಳಿಯ ಪ್ರದೇಶದ ವ್ಯಾಪ್ತಿ ವಿಶಾಲವಾಗಿದ್ದು, ಅನುದಾನ ಕಡಿಮೆಯಾಗಿದೆ. ಇನ್ನಷ್ಟುಹೆಚ್ಚಿನ ಅನುದಾನಕ್ಕೆ ಪ್ರಯತ್ನ ಮಾಡಲಾಗುವುದಲ್ಲದೇ ಬಿಡುಗಡೆಯಾದ ಮೊತ್ತವನ್ನು ನಿರೀಕ್ಷಿತ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಲೆನಾಡಿನಲ್ಲಿ ಆಗಾಗ್ಗೆ ತಲೆದೋರುವ ಪ್ರಕೃತಿ ವಿಕೋಪ ಮತ್ತು ಮಳೆಹಾನಿಗಳಿಂದಾಗಿ ಆಗುವ ಅವಘಡಗಳಿಗೆ ಪರ್ಯಾಯ ಕ್ರಮವಾಗಿ ಕೆರೆ-ಕಟ್ಟೆ- ಕಾಲುವೆಗಳಿಗೆ ಆದ್ಯತೆ ನೀಡುವಂತೆ ಹಾಗೂ ಕಾಲುಸಂಕಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು. ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಮಂಡಳಿ ವ್ಯಾಪ್ತಿಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಂದ ಕಾಮಗಾರಿಗಳ ಹೊಸ ಪ್ರಸ್ತಾವನೆಗಳನ್ನು ಪಡೆದು, ಸಭೆಯಲ್ಲಿ ಅನುಮೋದನೆ ಪಡೆದು, ಅಗತ್ಯವಿರುವ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವಂತೆ ಒತ್ತಾಯಿಸಿದರು.
ಮೂಲಸೌಲಭ್ಯಗಳಿಗೆ ಆದ್ಯತೆ: ಸಭೆಯಲ್ಲಿ ಮಂಡಳಿ ಆಡಳಿತಾಧಿಕಾರಿ ಕೆ.ಎಸ್.ಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಡಳಿಯು ಮಲೆನಾಡು ಪ್ರದೇಶದ 13 ಜಿಲ್ಲೆಗಳ ಪ್ರಾಥಮಿಕ ಅವಶ್ಯಕತೆಗಳಾಗಿರುವ ರಸ್ತೆ, ಚರಂಡಿ, ಕಾಲುವೆ, ಸಣ್ಣ ಹಾಗೂ ಸೇತುವೆಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಅವಶ್ಯಕವಾಗಿರುವ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ, ಆರೋಗ್ಯ ಸೇವೆಗಳು, ಸಮುದಾಯ ಭವನಗಳು, ಬಸ್ ನಿಲ್ದಾಣ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಪಕ್ಷದ ವಿರುದ್ಧ ಬಹಿರಂಗ ಟೀಕೆ ಸರಿಯಲ್ಲ: ರೇಣುಕಾಚಾರ್ಯಗೆ ಆರಗ ಜ್ಞಾನೇಂದ್ರ ಸಲಹೆ
ಕಳೆದ ಸಾಲಿನಲ್ಲಿ 43 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಅದರಲ್ಲಿ ಬಂಡವಾಳ ವೆಚ್ಚ .32.64 ಕೋಟಿ, ವಿಶೇಷ ಘಟಕ ಯೋಜನೆ 7.37 ಕೋಟಿ ಮತ್ತು ಗಿರಿಜನ ಉಪಯೋಜನೆಯಡಿ .2.99 ಕೋಟಿ ಬಿಡುಗಡೆಯಾಗಿತ್ತು. ಈ ಅನುದಾನದಲ್ಲಿ ಮಂಡಳಿಯ ಎಲ್ಲ ಶಾಸಕ ಸದಸ್ಯರಿಗೆ ತಲಾ .50 ಲಕ್ಷಗಳಂತೆ ಕ್ರಿಯಾಯೋಜನೆಗೆ ಕಾಮಗಾರಿಗಳನ್ನು ನೀಡಲು ಪತ್ರವ್ಯವಹಾರ ಮಾಡಲಾಗಿದೆ. ಹೊಸ ಶಾಸಕರಿಂದಲೂ ಪ್ರಸ್ತಾವನೆ ಪಡೆದು, ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗುವುದು ಎಂದರು. ಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಶಾಂತನಗೌಡರ್, ಚನ್ನಬಸಪ್ಪ, ಬಸವರಾಜ ಶಿವಣ್ಣನವರ್, ಹನುಮಂತ ನಿರಾನಿ, ರಾಜೇಗೌಡ, ಯು.ಬಿ.ಬಣಕಾರ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಇದ್ದರು.