ಪರಿ​ಪೂರ್ಣ ಜೀವ​ನಕ್ಕೆ ಪದ​ವಿ​ಗಳು ಮುಖ್ಯ​ವಲ್ಲ!

By Kannadaprabha NewsFirst Published Dec 19, 2022, 4:58 AM IST
Highlights

ನಮ್ಮ ಪರಿಪೂರ್ಣ ಜೀವನಕ್ಕೆ ಪದವಿಗಳು ಮುಖ್ಯವಲ್ಲ. ಬದಲಾಗಿ ಪರಿಪೂರ್ಣ ಮನಸ್ಸು, ಹೃದಯ ವೈಶಾಲ್ಯತೆ ಮುಖ್ಯ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ತಿಳಿಸಿದರು.

 ತುಮ​ಕೂರು (ಡಿ.19):  ನಮ್ಮ ಪರಿಪೂರ್ಣ ಜೀವನಕ್ಕೆ ಪದವಿಗಳು ಮುಖ್ಯವಲ್ಲ. ಬದಲಾಗಿ ಪರಿಪೂರ್ಣ ಮನಸ್ಸು, ಹೃದಯ ವೈಶಾಲ್ಯತೆ ಮುಖ್ಯ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ತಿಳಿಸಿದರು.

ನಗರದ ಸಿದ್ದಗಂಗಾ ಮಠದ ಶ್ರೀ ಗೋಸುಲ ಸಿದ್ದೇಶ್ವರ ವೇದಿಕೆಯಲ್ಲಿ ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಸರ್ವ ಸದಸ್ಯರ 66ನೇ ಮಹಾಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದಗಂಗಾ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಕೆಲಸ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ. ಹಾಗಾಗಿ ಪರಿಪೂರ್ಣ ಮನಸ್ಸು, ಹೃದಯ ವೈಶಾಲ್ಯತೆ ಮುಖ್ಯ. ಈ ನಿಟ್ಟಿನಲ್ಲಿ ಮಕ್ಕಳಿಕೆ ಪರಿಪೂರ್ಣ ಮನಸ್ಸು, ಮಾನವೀಯತೆ ಹಾಗೂ ಹೃದಯವಂತಿಕೆಯನ್ನು ಶ್ರೀಕ್ಷೇತ್ರ ಕಲಿಸುತ್ತಿದೆ ಎಂದರು.

ನಮ್ಮ ದೇಶದಲ್ಲಿ ಬುದ್ಧಿವಂತರು ಇದ್ದಾರೆ. ಆದರೆ ಬುದ್ಧಿವಂತರ ಜತೆಗೆ ಹೃದಯವಂತರು ಬೇಕಾಗಿದ್ದಾರೆ. ಶ್ರೀಕ್ಷೇತ್ರ ಕೇವಲ ಬುದ್ದಿವಂತರನ್ನು ಸೃಷ್ಠಿ ಮಾಡುತ್ತಿಲ್ಲ, ಹೃದಯವಂತರನ್ನು ಸೃಷ್ಠಿ ಮಾಡುತ್ತಿದೆ. ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಮುಖ್ಯ. ಆದರೆ ಸಿದ್ದಗಂಗಾ ಮಠ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳಿಗೆ ಸಮಾಜ ಸೇವೆಯನ್ನು ಕೂಡಾ ಕಲಿಸುತ್ತಿದೆ. ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಈ ಸಂಸ್ಕಾರ ಬರುವುದಿಲ್ಲ. ಚಿಕ್ಕವಯಸ್ಸಿನಲ್ಲಿಂದಲೇ ಇದರ ಸಂಕಲ್ಪ, ಗಂಧವನ್ನು ಕೊಡುವ ಕ್ಷೇತ್ರ ಇದಾಗಿದೆ ಎಂದರು.

ಸಿದ್ದಗಂಗಾ ಕ್ಷೇತ್ರದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರು ಮಕ್ಕಳ ರಾಜ್ಯವನ್ನೇ ಸೃಷ್ಠಿ ಮಾಡಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿ ಹೋದಂತಹ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರ ಮಕ್ಕಳಿಗೆ ಶಿಕ್ಷಣ, ದೈಹಿಕ ಆರೋಗ್ಯದ ಜತೆಗೆ ಮಾನಸಿಕವಾಗಿ ಸಬಲರನ್ನಾಗಿ ಮಾಡುತ್ತಿದೆ ಎಂದರು.

ಮಕ್ಕಳ ಶಾಲೆ ತೆರೆಯುವ ಅವಧಿ ಬದಲಾಗಲಿ: ಪ್ರಸ್ತುತ ಚಿಕ್ಕ ಮಕ್ಕಳು ಅಂದರೆ ಕನಿಷ್ಠ 2ನೇ ತರಗತಿವರೆಗೆ ಮಕ್ಕಳ ಶಾಲೆಯ ಸಮಯ ಬೆಳಿಗ್ಗೆ 10 ರಿಂದ 12.30 ಗಂಟೆಗೆ ನಿಗದಿಗೊಳಿಸಬೇಕು. ಈಗಿನ ಶಾಲಾ ಅವಧಿಯಿಂದಾಗಿ ಮಕ್ಕಳತನವನ್ನು ಕಿತ್ತುಕೊಳ್ಳಲಾಗುತ್ತಿದೆ. ಮಕ್ಕಳು ಹೆಚ್ಚು ಸಮಯ ನಿದ್ದೆ ಮಾಡಬೇಕು. ಹಲವಾರು ಶಾಲೆಗಳಲ್ಲಿ 7 ಗಂಟೆಗೆ ತರಗತಿಗಳು ಪ್ರಾರಂಭ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಸರಿಯಾಗಿ ತಿಂಡಿ ತಿನ್ನಲು ಸಹ ಆಗುತ್ತಿಲ್ಲ. ಹೀಗಾಗಿ ಹಲವಾರು ಕಾಯಿಲೆಗಳು ಮಕ್ಕಳಿಗೆ ಬರುತ್ತಿವೆ ಎಂದರು.

ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ ಶೈಲಿ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಮಧುಮೇಹ, ಹೃದಯಾಘಾತವನ್ನು ನೋಡಬಹುದಾಗಿದೆ. ಕಳೆದ 7 ವರ್ಷಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ 6 ಸಾವಿರ ಯುವ ಜನರಿಗೆ ಹೃದಯಾಘಾತದ ಚಿಕಿತ್ಸೆ ನೀಡಲಾಗಿದೆ. ಚಿಕ್ಕವಯಸ್ಸಿನಿಂದಲೇ ಒತ್ತಡಕ್ಕೆ ಒಳಗಾಗುತ್ತಿರುವುದು ಇಂತಹ ಕಾಯಿಲೆಗಳಿಗೆ ತುತ್ತಾಗುವಂತಾಗುತ್ತಿದೆ ಎಂದರು.

ಸಿದ್ದಗಂಗಾಶ್ರೀ ಪ್ರಶಸ್ತಿ ಸ್ವೀಕರಿಸಿದ ಅಥಣಿಯ ಮೋಟಗಿ ಮಠಾಧ್ಯಕ್ಷರಾದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಸೇವೆ ದಾಸೋಹ, ಸತ್ಸಂಗ ಸಮಾನತೆಯ ಸಂದೇಶವನ್ನು ಸಿದ್ದಗಂಗಾ ಸನ್ನಿಧಿಯಲ್ಲಿ ಕಾಣಬಹುದಾಗಿದೆ. ಸಿದ್ದಗಂಗೆ ಶುದ್ಧಗಂಗೆ, ಪ್ರಸಿದ್ದ ಗಂಗೆ, ಜೀವ ಗಂಗೋತ್ರಿಯ ಮಹಾಗಂಗೆ ಸಿದ್ದಗಂಗೆ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಹಳೇ ವಿದ್ಯಾರ್ಥಿಗಳು ನಮ್ಮ ಮಠದ ಶಕ್ತಿ ಮತ್ತು ಸಂಪತ್ತು ಎಂದು ಪೂಜ್ಯರು ಭಾವಿಸಿದ್ದರು ಎಂದರು.

ಈ ವೇಳೆ ಕೃಷಿ ತಜ್ಞರಾದ ಕವಿತಾ ಮಿಶ್ರಾ, ಸಾಹಿತಿ ಪ್ರೊ. ಎಸ್‌. ಮಲೆಯರು ಗುರುಸ್ವಾಮಿ, ಡಾ. ಭೀಮಾಶಂಕರ ಚಂದ್ರಶೇಖರ ಜಲಗುಂದಿ ರವರಿಗೆ ಸಿದ್ದಗಂಗಾ ಶಿವಕುಮಾರಶ್ರೀ ಪ್ರಶಸ್ತಿ ಹಾಗೂ ಹೆಚ್‌.ಜಿ. ಈಶ್ವರಯ್ಯ, ಆರ್‌.ಎಸ್‌. ಹುಚ್ಚಾಚಾರಿ, ಲಕ್ಷ್ಮಯ್ಯ, ಚನ್ನನಗೌಡ, ದೇವೇಂದ್ರ ಕಾರಂಜಿ, ಮಹೇಶ್‌ ಶಾಸ್ತ್ರಿರವರಿಗೆ ಸಂಘಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎನ್‌. ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಬಸವ ಸ್ವಾಮೀಜಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

click me!