ಕೊರೋನಾ ಕಾಟ: ಸ್ವಾತಂತ್ರ್ಯದ ವಜ್ರಮಹೋತ್ಸವಕ್ಕೂ ರಾಷ್ಟ್ರಧ್ವಜ ಉತ್ಪಾದನೆ ಕುಸಿತ

By Kannadaprabha NewsFirst Published May 10, 2021, 7:32 AM IST
Highlights

* ತಿಂಗಳ ಕಾಲ ಕುಸಿಯಲಿದೆ ಉತ್ಪಾದನೆ
* ಆದಾಯದ ಕನಸಿಗೆ ಕೊಳ್ಳಿಯಿಟ್ಟ ಕೊರೋನಾ
* ಸಿಬ್ಬಂದಿಗೆ ಏಪ್ರಿಲ್‌ ಸಂಬಳ ಇನ್ನೂ ಆಗಿಲ್ಲ
 

ಮಯೂರ ಹೆಗಡೆ

ಹುಬ್ಬಳ್ಳಿ(ಮೇ.10): ಮುಂಬರುವ 75ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಹೆಚ್ಚಿನ ರಾಷ್ಟ್ರಧ್ವಜ ಉತ್ಪಾದನೆ ಗುರಿ ಇಟ್ಟುಕೊಂಡಿದ್ದ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬಿಸಿ ತಟ್ಟಿದೆ. ಜನತಾ ಕರ್ಫ್ಯೂ ಹಾಗೂ ಸೆಮಿ ಲಾಕ್‌ಡೌನ್‌ನಿಂದಾಗಿ ತಿಂಗಳ ಕಾಲ ಉತ್ಪಾದನೆ ಕುಸಿಯಲಿದೆ.

Latest Videos

ಹೌದು, ಕಳೆದ ವರ್ಷ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಈ ಖಾದಿ ಕೇಂದ್ರ 1.26 ಕೋಟಿ ಧ್ವಜಗಳ ವ್ಯಾಪಾರವಾಗದೆ ಹಾಗೆ ಉಳಿಸಿಕೊಳ್ಳುವಂತಾಗಿತ್ತು. ಆದರೆ, ಈ ಬಾರಿ ಹೆಚ್ಚಿನ ಆದಾಯದ ನಿರೀಕ್ಷೆಯಿತ್ತು. ಕಾರಣ ಮುಂದಿನ 75ನೇ ಸ್ವಾತಂತ್ರ್ಯೋತ್ಸವ. ಕೇಂದ್ರ ಸರ್ಕಾರ ಸ್ವಾತಂತ್ರ್ಯದ ವಜ್ರ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಚಿಂತಿಸಿತ್ತು. ಹೀಗಾಗಿ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇತ್ತು. ಆದರೆ, ಈ ವರ್ಷವೂ ಕೊರೋನಾ ಹೆಚ್ಚಿನ ಆದಾಯದ ಕನಸಿಗೆ ಕೊಳ್ಳಿಯಿಟ್ಟಿದೆ.

ಈ ಬಗ್ಗೆ ಮಾತನಾಡಿದ ಕೇಂದ್ರದ ಕಾರ್ಯದರ್ಶಿ ಶಿವಾನಂದ ಮಠಪತಿ, ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದ ಈ ಸಂದರ್ಭದಲ್ಲಿ 1 ತಿಂಗಳಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬಾಗಲಕೋಟೆ ಸುತ್ತಮುತ್ತಲ ಪ್ರದೇಶದಿಂದ 5-6 ಸಾವಿರ ಮೀಟರ್‌ ಬಟ್ಟೆ ಪೂರೈಕೆಯಾಗುತ್ತದೆ. ಹೆಚ್ಚು ಕಡಿಮೆ 8-10 ಲಕ್ಷ ಮೊತ್ತದ 5 ಸಾವಿರ ಫ್ಲಾಗ್‌ ಸಿದ್ಧವಾಗುತ್ತವೆ. ಆದರೆ, ಶೇ. 75ರಷ್ಟೂಉತ್ಪಾದನೆಯಾಗಿಲ್ಲ ಎಂದರು.

ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ

15 ದಿನಗಳ ಹಿಂದೆ ಜನತಾ ಕರ್ಫ್ಯೂ ಜಾರಿಯಾದ ಬಳಿಕ ಕೇಂದ್ರದಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. 20ರಲ್ಲಿ ಕೇವಲ 6-7 ಮಹಿಳೆಯರು ಕಾರ್ಯ ನಿರ್ವಹಿಸಿದ್ದಾರೆ. ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇನ್ನು ಕೇಂದ್ರದಲ್ಲಿ 15 ದಿನ ರಾಷ್ಟ್ರಧ್ವಜ ರೂಪಿಸುವ ಕಾರ್ಯ ನಡೆಯುವ ಸಂದೇಹವಿದೆ. ಹೀಗಾಗಿ ಒಂದು ತಿಂಗಳ ಕೆಲಸ-ಕಾರ್ಯಗಳು ಬಹುತೇಕ ನಿಂತಂತಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಧ್ವಜಕ್ಕೆ ಹೆಚ್ಚಿನ ಬೇಡಿಕೆ ಬಂದರೂ ಪೂರೈಸಲು ಸಾಧ್ಯವಾಗದೆ ಹೋಗಬಹುದು ಅಥವಾ ಇದೇ ಸ್ಥಿತಿ ಮುಂದುವರಿದರೆ ಧ್ವಜ ತಯಾರಿಕೆಯಲ್ಲಿ ಗಣನೀಯ ಕುಸಿತವಾಗಬಹುದು. ಇನ್ನು, ಪರಿಸ್ಥಿತಿ ಸುಧಾರಿಸಿದರೆ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಂಡು ಧ್ವಜ ತಯಾರಿಕೆ ಮಾಡುವ ಬಗ್ಗೆ ಚಿಂತನೆ ಇದೆ. ಇನ್ನೂ ನಿರ್ಧರಿಸಿಲ್ಲ ಎಂದರು.

ಆರ್ಡರ್‌ ಕಡಿಮೆ ಸಾಧ್ಯತೆ:

ಕೇಂದ್ರವು ಕೂಡ ಈ ಬಾರಿ 3.5 ಕೋಟಿ ಆದಾಯದ ಗುರಿ ಹೊಂದಿತ್ತು. ಸಾಮಾನ್ಯವಾಗಿ ಖಾದಿ ಕೇಂದ್ರಕ್ಕೆ ಜನವರಿಯಿಂದ ಆಗಸ್ಟ್‌ ವರೆಗೆ ಧ್ವಜಕ್ಕೆ ವಿವಿಧೆಡೆಯಿಂದ ಬೇಡಿಕೆ ಇರುತ್ತದೆ. ಆದರೆ, ಮಾರ್ಚ್‌, ಏಪ್ರಿಲ್‌ನಲ್ಲಿ ದೆಹಲಿ, ಮುಂಬೈಗಳು ಲಾಕ್‌ಡೌನ್‌ ಆದ ಕಾರಣ ಅಲ್ಲಿಂದ ಹೆಚ್ಚಿನ ಬೇಡಿಕೆಗಳು ಬಂದಿಲ್ಲ ಎಂದು ಕೇಂದ್ರ ತಿಳಿಸಿದೆ.

ತಿಂಗಳ ಸಂಬಳವಾಗಿಲ್ಲ:

ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಎಲ್ಲ ಸಿಬ್ಬಂದಿಗೆ ಏಪ್ರಿಲ್‌ ತಿಂಗಳ ಸಂಬಳ ಆಗಿಲ್ಲ ಎಂದು ತಿಳಿಸಿದ ಕಾರ್ಯದರ್ಶಿ ಮಠಪತಿ, ಬಾಗಲಕೋಟೆಯಲ್ಲಿ ಧ್ವಜಕ್ಕಾಗಿ ನೂಲು ತಯಾರಿಕೆ, ಬಟ್ಟೆ ನೇಯ್ಗೆ ಸೇರಿ 950 ಜನರು ಕೆಲಸ ಮಾಡುತ್ತಾರೆ. ಖಾದಿ ಗ್ರಾಮೋದ್ಯೋಗದ ಹುಬ್ಬಳ್ಳಿ, ಬೆಂಗಳೂರು ಸೇರಿ 100 ಸ್ಟಾಫ್‌ ಸಿಬ್ಬಂದಿ ಇದ್ದಾರೆ. ಆದಾಯ ಕೊರತೆ, ಸರ್ಕಾರದಿಂದ ಬರಬೇಕಾದ 3 ಕೋಟಿ ಪ್ರೋತ್ಸಾಹಕ ಧನ ಬಾಕಿಯಿರುವ ಕಾರಣ ಇವರಿಗೆ ಸಂಬಳ ಆಗಿಲ್ಲ. ಹಂತ ಹಂತವಾಗಿ ಸಂಬಳ ನೀಡಲು ನಿರ್ಧರಿಸಲಾಗಿದೆ ಎಂದರು.

ಜನತಾ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಕಾರಣದಿಂದ ಒಂದು ತಿಂಗಳ ಧ್ವಜ ರೂಪಿಸುವ ಕಾರ್ಯ ಬಹುತೇಕ ಕಡಿಮೆಯಾಗಿದೆ. 75ನೇ ಸ್ವಾತಂತ್ರ್ಯೋತ್ಸವಕ್ಕೆ ಹೆಚ್ಚಿನ ಆರ್ಡರ್‌ ಬರುವ ನಿರೀಕ್ಷೆ ಹಾಗೂ ಧ್ವಜ ಸಿದ್ಧಗೊಳಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ಸಿಬ್ಬಂದಿಗೆ ತಿಂಗಳ ಸಂಬಳ ವಿಳಂಬವಾಗಿದೆ ಎಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಕಾರ್ಯದರ್ಶಿ ಶಿವಾನಂದ ಮಠಪತಿ ತಿಳಿಸಿದ್ದಾರೆ.
 

click me!