‘ಜಯ ಕರ್ನಾಟಕ’ ಘೋಷಣೆ, ಮೊಬೈಲ್ ರಿಂಗ್‌ಟೋನ್‌ನಲ್ಲೂ ‘ಕನ್ನಡ ಡಿಂಡಿಮ’, ಅಕ್ಕಲಕೋಟೆ ನಂತರ ಇದೀಗ ದಕ್ಷಿಣ ಸೊಲ್ಲಾಪುರದ 28 ಹಳ್ಳಿ ಜನರಿಂದ ಕರ್ನಾಟಕ ಸೇರುವ ನಿರ್ಣಯ
ಶೇಷಮೂರ್ತಿ ಅವಧಾನಿ
ಕಲಬುರಗಿ(ಡಿ.02): ಮಹಾ ಗಡಿ ಭಾಗದ ಕನ್ನಡಿಗರ ಸಮಸ್ಯೆ ಆಲಿಸಲು ಸಿಎಂ ಬಸವರಾಜ ಬೊಮ್ಮಾಯಿ ಆಸಕ್ತಿ ತೋರಿರುವ ಬೆನ್ನಲ್ಲೇ ಇತ್ತ ಅಲ್ಲಿನ ಜನರಿಂದ ಕರ್ನಾಟಕ ಸೇರುತ್ತೇವೆಂಬ ಕೂಗು ಹೆಚ್ಚುತ್ತಲೇ ಸಾಗಿದೆ.
ಮೊನ್ನೆಯಷ್ಟೇ ಅಕ್ಕಲಕೋಟೆ ತಾಲೂಕಿನ 20ಕ್ಕೂ ಗ್ರಾಮಗಳು ತಡವಳದಲ್ಲಿ ಸಭೆ ಸೇರಿ ಕರ್ನಾಟಕ ಸೇರುವ ನಿರ್ಣಯ ಕೈಗೊಂಡಿರುವಂತೆಯೇ ಇದೀಗ ಸೊಲ್ಲಾಪುರ ಜಿಲ್ಲೆಯ ದಕ್ಷಿಣ ಸೊಲ್ಲಾಪುರ ತಾಲೂಕಿನ 28 ಹಳ್ಳಿಗಳ ಜನ ಸೊಲ್ಲಾಪುರದಲ್ಲಿ ಸಭೆ ಸೇರಿ ಕರ್ನಾಟಕ ಸೇರುವ ಒಲವು ತೋರಿದ್ದಾರೆ. ಮಹಾಜನ್ ವರದಿಯಂತೆ ನಾವು ಕರ್ನಾಟಕ ಸೇರಲು ಠರಾವು ಮಾಡಿದ್ದಾಗಿದೆ ಎಂದು ತಿಳಿಸಿದ್ದಾರೆ.
ನೀರು, ರಸ್ತೆ, ವಿದ್ಯುತ್, ಬಸ್ ಸೇವೆ ಇಲ್ಲಿ ಇನ್ನೂ ಮರೀಚಿಕೆ. ಸೌಲಭ್ಯಕ್ಕಾಗಿ ದುಂಬಾಲು ಬಿದ್ದರೂ ಅಲ್ಲಿನ ಸರ್ಕಾರ ಕ್ಯಾರೆ ಎಂದಿಲ್ಲ. ಕರುನಾಡಿನ ನಗರ, ಪಟ್ಟಣಗಳನ್ನು ಮರಳಿ ಕೇಳುತ್ತಿರುವ ಮಹಾರಾಷ್ಟ್ರ ಮೊದಲು ತನ್ನಲ್ಲಿರುವ ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶಗಳಿಗೆ ಸವಲತ್ತು ಒದಗಿಸಲಿ ಎಂದು ಮರಳಿ ಗುಟುರು ಹಾಕಿದ್ದಾರೆ. ಇವೆಲ್ಲ ಬೆಳವಣಿಗೆಗಳಿಂದಾಗಿ ಕರ್ನಾಟಕ- ಮಹಾರಾಷ್ಟ್ರ ಗಡಿ ಕದನ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳು ಗೋಚರಿಸಿವೆ.
ಮಹಾರಾಷ್ಟ್ರದ ಗಡಿ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ: ಸಿಎಂ ಬೊಮ್ಮಾಯಿ
ಕನ್ನಡ ಬಾವುಟ ಹಾರಾಟ:
ಅಕ್ಕಲಕೋಟ ತಾಲೂಕಿನ ಆಳಗಿ ಹಾಗೂ ತಡವಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಳೆದ 3 ದಿನದಿಂದ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಕರಜಗಿ, ಹಿಳ್ಳಿ, ಬೊರೋಟಿ, ಮಂಗರೂಳ, ಅಂದೇವಾಡಿ, ಹಂದ್ರಾಳ್, ನಾಗಣಸೂರು ಕನ್ನಡ ಭಾಷಿಕರು ತಮ್ಮ ಮನೆ, ಮಳಿಗೆ, ಹೊಲಗದ್ದೆಗಳಲ್ಲಿ ಬಾನೆತ್ತರಕ್ಕೆ ಕನ್ನಡ ಬಾವುಟ ಹಾರಿಸಿ ಮಹಾ ಕ್ಯಾತೆಗೆ ಮಾರುತ್ತರ ನೀಡಿದ್ದಾರೆ.
ಗಡಿ ವಿವಾದ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವರ ಸರಣಿ ಸಭೆ
‘ಮಹಾಜನ ವರದಿಯಂತೆ ನಮ್ಮನ್ನ ಕರ್ನಾಟಕಕ್ಕ ಕೊಟ್ಟು ಬಿಡ್ಲಿ , ನೀರು, ರಸ್ತೆ ಕೊಡಲು ಆಗದವರು ನಮ್ಮನ್ನು ಹಿಡಿದಿಟ್ಟುಕೊಂಡಿದ್ದಾರೆ. ನಾವು ಕರ್ನಾಟಕ ಸಿಎಂ ಭೇಟಿ ಮಾಡ್ತೀವಿ. ನಮ್ಮ ಮನದಾಳದ ಮಾತು ಹೇಳ್ತೀವಿ’ ಎಂದು ಅಕ್ಕಲಕೋಟೆ ತಾಲೂಕಿನ ತಡವಳದಲ್ಲಿರುವ ಕನ್ನಡಿಗರು ಆಕ್ರೋಶ ಭರಿತ ಮಾತಾಡಿದ್ದಾರೆ.
ಮೊಬೈಲ್ ರಿಂಗ್‌ಟೋನ್‌ನಲ್ಲೂ ಕನ್ನಡ!
ಅಕ್ಕಲಕೋಟೆ, ಸೊಲ್ಲಾಪುರ ಗಡಿಯಲ್ಲಿರುವ ಕನ್ನಡಿಗರು ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು... ಎಂಬ ಹಾಡನ್ನೇ ತಮ್ಮ ಮೊಬೈಲ್ ರಿಂಗ್‌ಟೋನ್ ಮಾಡಿಕೊಂಡಿದ್ದಾರೆ. ಕರ್ನಾಟಕ ಸೇರಬೇಕೆಂಬುದು ನಮ್ಮ ಸ್ವಯಂಪ್ರೇರಿತ ಕೂಗಾಗಿದೆ. ನಮಗೆ ಇಲ್ಲಿ ಆರೂ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬರೀ ಹೇಳಿಕೆಗಳಿಗೇ ಸೀಮೀತವಾಗಿರದೆ ಬೀದಿಗಿಳಿದು ಹೋರಾಟ ನಡೆಸಿ ಮಹಾರಾಷ್ಟ್ರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.