ಉದ್ದವ್ ಠಾಕ್ರೆ ತಿರುಗೇಟು ಕೊಟ್ಟ ಲಕ್ಷ್ಮಣ್ ಸವದಿ| ಈ ಹಿಂದೆಯೇ ಬೆಳಗಾವಿ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಧಾರ| ಠಾಕ್ರೆ ಒಬ್ಬ ಮುಖ್ಯಮಂತ್ರಿಯಾಗಿ ಹೇಗೆ ಯೋಚಿಸಿ ಮಾತನಾಡಬೇಕು ಎಂಬುದು ಗೊತ್ತಿಲ್ಲ|
ದಾವಣಗೆರೆ(ಜ.18): ಮಹಾರಾಷ್ಟ್ರದ ಒಂದು ಸಾವಿರ ಮುಖ್ಯಮಂತ್ರಿಗಳು ಬಂದು ಹೇಳಿಕೆ ಕೊಟ್ಟರೂ ಬೆಳಗಾವಿ, ನಿಪ್ಪಾಣಿ ಕರ್ನಾಟಕದ್ದೇ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಅವರನ್ನು ಅವಿವೇಕತನದ ಹೇಳಿಕೆಯಾಗಿದೆ.ಒಬ್ಬ ಮುಖ್ಯಮಂತ್ರಿಯಾಗಿ ಹೇಗೆ ಯೋಚಿಸಿ ಮಾತನಾಡಬೇಕು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಉದ್ಧವ್ ಉದ್ಧಟತನ ಹೇಳಿಕೆ: ಮತ್ತೆ ಬೆಳಗಾವಿ ಗಡಿ ವಿವಾದ ಕೆದಕಿದ ಮಹಾ ಸಿಎಂ
ಉದ್ದವ್ ಠಾಕ್ರೆ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಮುಂದಾದ್ರು ಮಹಾರಾಷ್ಟ್ರ ಸಿಎಂ ಜಾಣತನದ ಹೇಳಿಕೆಗಳನ್ನ ಕೊಡಲಿ. ಈ ಹಿಂದೆಯೇ ಬೆಳಗಾವಿ, ನಿಪ್ಪಾಣಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಧಾರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಅಸ್ಥಿತಕ್ಕಾಗಿ ಬದುಕಲು ಈ ರೀತಿ ಉದ್ಧವ್ ಹೇಳಿಕೆ
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕಾನೂನು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ, ಮಹಾಜನ್ ವರದಿಯೇ ಅಂತಿಮ ಇದರಿಂದ ರಾಜಿಯಾಗುವ ಪ್ರಶ್ನೆ ಇಲ್ಲ. ಯಾವುದೇ ಕಾನೂನು ರಾಜ್ಯಗಳನ್ನ ಭಾಷಾವಾರು ಮರು ವಿಂಗಡನೆ ಬಗ್ಗೆ ಹೇಳಿಲ್ಲ. ಎರಡೆರಡು ಭಾರಿ ದೇಶವನ್ನು ವಿಂಗಡನೆ ಮಾಡಲು ಸಾಧ್ಯವಿಲ್ಲ ಇದು ಮುಗಿದ ಅಧ್ಯಾಯವಾಗಿದೆ. ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಯಾಗಿದೆ. ರಾಜಕೀಯ ಅಸ್ಥಿತಕ್ಕಾಗಿ ಬದುಕಲು ಈ ರೀತಿ ಉದ್ಧವ್ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಒಂದಿಂಚೂ ಜಾಗ ಬಿಡುವ ಪ್ರಶ್ನೆಯೇ ಇಲ್ಲ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ದಟತನ ಟ್ವೀಟ್ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಮಹಾರಾಷ್ಟ್ರ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಒಂದಿಂಚೂ ಜಾಗ ಬಿಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿ ನಡೆದುಕೊಂಡರೇ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ.
ಉದ್ಧವ್ ಠಾಕ್ರೆಗೆ ಮಾಡಲು ಕೆಲಸವಿಲ್ಲ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಗೆ ಹಾವೇರಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಮಾಡಲು ಕೆಲಸವಿಲ್ಲ. ಮತ್ತೆ ಕರ್ನಾಟಕವನ್ನ ಕೆಣಕುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಕರ್ನಾಟಕದ ಭಾಗವಾಗಿದೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾಗಿ, ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬೆಳಗಾವಿಯನ್ನ ರಾಜ್ಯ ಸರ್ಕಾರ ಎರಡನೇ ರಾಜಧಾನಿ ಅಂತ ಘೋಷಣೆ ಮಾಡಿದೆ. ಬೆಳಗಾವಿಯಲ್ಲಿ ಎಲ್ಲ ಜನರೂ ಒಂದಾಗಿದ್ದಾರೆ. ಉದ್ಧವ್ ಠಾಕ್ರೆ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ಈ ರೀತಿಯ ನೀತಿಗೆಟ್ಟ ಹೇಳಿಕೆಗಳನ್ನ ಕೊಡುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಕೊಡಲ್ಲ
ಕಾರವಾರದಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು, ಉದ್ಧವ್ ಠಾಕ್ರೆಗೆ ಮಾಡಲು ಬೇರೆ ಕೆಲಸವಿಲ್ಲ, ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಕೊಡಲ್ಲ ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಆಗಲೀ, ಅಜಿತ್ ಪವಾರ್ ಆಗಲೀ ಯಾವ ಕಾರಣದಿಂದ ಮಾತಾಡ್ತಿದ್ದಾರೆ ಅಂತ ಗೊತ್ತಾಗ್ತಿಲ್ಲ, ಅವರು ರಾಜಕೀಯ ಮಾಡ್ತಿದ್ದಾರೆ, ಮಾಡ್ಲಿ, ಕರ್ನಾಟಕದಿಂದ ಯಾವುದೇ ಜಾಗ ಕೊಡಲ್ಲ, ಯಾರೂ ಮಹಾರಾಷ್ಟ್ರ ಸೇರಲ್ಲ. ಅವರಿಗೆ ಏನೂ ಕೆಲಸವಿಲ್ಲ, ಏನೂ ಮಾಡ್ತಿಲ್ಲ, "ತೀನ್ ತಿಗಡಾ, ಬಾತ್ ಬಿಗಡಾ" ಅಂತಹ ಸ್ಥಿತಿಯವರದ್ದಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್, ಶಿವಸೇನಾ ಸೇರಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಒಂದಿಂಚೂ ಅವರಿಗೆ ಜಾಗ ಕೊಡೋದೇ ಇಲ್ಲ. ಉದ್ಧವ್ ಠಾಕ್ರೆಗೆ ಮಾಡೋಕೇನು ಕೆಲಸವಿಲ್ಲ, ರಾಜ್ಯದಿಂದ ಒಂದಿಂಚೂ ಜಾಗ ಅವರಿಗೆ ಕೊಡೊ ಮಾತೇ ಇಲ್ಲ, ಅವರು ಎಷ್ಟು ಬಾಯಿ ಬಡ್ಕೊಂಡ್ರು ಅಷ್ಟೇ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.