ಬೆಂಗ್ಳೂರಿನ ಮಳೆ ಹಾನಿ ಪ್ರದೇಶಗಳಲ್ಲಿ ಡಿಸಿಎಂ ರೌಂಡ್ಸ್‌

Published : May 21, 2024, 08:28 AM IST
ಬೆಂಗ್ಳೂರಿನ ಮಳೆ ಹಾನಿ ಪ್ರದೇಶಗಳಲ್ಲಿ ಡಿಸಿಎಂ ರೌಂಡ್ಸ್‌

ಸಾರಾಂಶ

ರಾಚೇನಹಳ್ಳಿ ಕೆರೆಯ ಬಳಿ ಖಾಸಗಿ ಲೇಔಟ್‌ಗಳಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹಾಗೂ ಕೊಳಚೆ ನೀರನ್ನು ಒಟ್ಟಿಗೆ ಬಿಟ್ಟಿರುವ ಕಾರಣಕ್ಕೆ ಸಮಸ್ಯೆಗಳು ಉಂಟಾಗುತ್ತಿವೆ. ಲೇಔಟ್ ಮಾಡುವಾಗ ಸೂಕ್ತ ವ್ಯವಸ್ಥೆ ಮಾಡದಿರುವುದು ಡೆವಲಪರ್‌ಗಳ ತಪ್ಪು ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

ಬೆಂಗಳೂರು(ಮೇ.21):  ಮೂಲಸೌಕರ್ಯ ವ್ಯವಸ್ಥೆಗಳನ್ನು ಸರಿಯಾಗಿ ನೀಡದ ಖಾಸಗಿ ಲೇಔಟ್ ಡೆವಲಪರ್‌ಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯಿಂದ ಅನಾಹುತ ಸಂಭವಿಸಿರುವ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ರಾಚೇನಹಳ್ಳಿ ಕೆರೆಯ ಬಳಿ ಖಾಸಗಿ ಲೇಔಟ್‌ಗಳಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹಾಗೂ ಕೊಳಚೆ ನೀರನ್ನು ಒಟ್ಟಿಗೆ ಬಿಟ್ಟಿರುವ ಕಾರಣಕ್ಕೆ ಸಮಸ್ಯೆಗಳು ಉಂಟಾಗುತ್ತಿವೆ. ಲೇಔಟ್ ಮಾಡುವಾಗ ಸೂಕ್ತ ವ್ಯವಸ್ಥೆ ಮಾಡದಿರುವುದು ಡೆವಲಪರ್‌ಗಳ ತಪ್ಪು ಎಂದರು.

ಜನರಿಂದ ಹಣ ಪಡೆದು ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದೇ ಇರುವ ಕಾರಣಕ್ಕೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ಹೀಗಾಗಿ, ನೋಟಿಸ್ ನೀಡಲಾಗುತ್ತದೆ. ಪ್ರತಿ ವರ್ಷ ಎಲ್ಲೆಲ್ಲಿ ಮಳೆಯಿಂದ ತೊಂದರೆ ಆಗುತ್ತದೆಯೋ ಆ ಪ್ರದೇಶಗಳನ್ನು ಗುರುತಿಸಿ ಹಂತ, ಹಂತವಾಗಿ ಸರಿಪಡಿಸುವುದಾಗಿ ಭರವಸೆ ನೀಡಿದರು. ರಾಜಕಾಲುವೆ ಒತ್ತುವರಿ ಮಾಡಿರುವ ಖಾಸಗಿ ಲೇಔಟ್ ಡೆವಲಪರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಟಿಪಿ ಅಳವಡಿಕೆ ಮಾಡದವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ ರಸ್ತೆ ಗುಂಡಿಗೆ ತ್ವರಿತ ಮುಕ್ತಿ..!

ಅನಾಹುತ ಸಂಭವಿಸುವ ಪ್ರದೇಶಕ್ಕೂ ಡಿಕೆಶಿ ಭೇಟಿ

ಮಳೆಗಾಲದ ವೇಳೆ ಪ್ರವಾಹ ಪರಿಸ್ಥಿತಿ ಎದುರಾಗುವ ಸ್ಥಳಗಳಿಗೂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಜತೆ ಚರ್ಚೆ ನಡೆಸಿದರು.

ಪಾಲಿಕೆಯಿಂದ ಕಾಲುವೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿರುವ ಕುರಿತು ನಾಗರಿಕರು ದೂರಿದಾಗ, ಇಲ್ಲಿಂದ ಮುಂದೆ ಅರಣ್ಯ ಇಲಾಖೆಯ ಜಾಗ ಇರುವ ಕಾರಣ, ಕಾಲುವೆ ವಿಸ್ತರಿಸಲು ಅನುಮತಿ ಸಿಕ್ಕಿರಲಿಲ್ಲ. ಅದಕ್ಕಾಗಿ ಪಾಲಿಕೆ ಮತ್ತು ಅರಣ್ಯಾಧಿಕಾರಿಗಳ ಜತೆ ಸಭೆ ನಡೆಸಿ ಅನುಮತಿ ಪಡೆಯಲಾಗಿದೆ. ಮಳೆ ನೀರು ಹಾಗೂ ಚರಂಡಿ ನೀರು ಪ್ರತ್ಯೇಕವಾಗಿ ಹರಿಯುವಂತೆ ಮಾಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ನಗರದ ಕೆರೆಗಳಿಗೆ ಕೊಳಚೆ ನೀರು ಹರಿಸುವುದಿಲ್ಲ. ಸಂಸ್ಕರಿಸಿದ ನೀರನ್ನು ಮಾತ್ರ ಬಿಡಲಾಗುವುದು. ಈ ಬಾರಿ ಏಳು ಸಾವಿರ ಕೊಳವೆ ಬಾವಿ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಎದುರಾಗಿದ್ದು, ಮುಂದೆ ಇಂತಹ ಸಮಸ್ಯೆ ಬಾರದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.

ವರುಣನ ಅಬ್ಬರ: ಒಂದೇ ವಾರಕ್ಕೆ ಬೆಂಗ್ಳೂರು ಕೂಲ್ ಕೂಲ್..!

ರಾಚೇನಹಳ್ಳಿ ಕೆರೆ ಪಕ್ಕದಲ್ಲಿರುವ ಜವಾಹರ್ ಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಹಾದುಹೋಗಿರುವ ರಾಜಕಾಲುವೆ ಕಾಮಗಾರಿಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.
ಗೆದ್ದಲಹಳ್ಳಿಯಲ್ಲಿ ಪ್ರತಿ ಬಾರಿ ಮಳೆ ಬಂದರೂ ಮನೆಯೊಳಗೆ ನೀರು ನುಗ್ಗುವ ಕುರಿತು ನಾಗರಿಕರ ದೂರಿಗೆ, ಖಾಸಗಿ ಬಡಾವಣೆ ಮಾಡಿರುವವರು ಸರಿಯಾದ ರೀತಿಯಲ್ಲಿ ಮೂಲಸೌಕರ್ಯ ಒದಗಿಸದ ಕಾರಣ ಈ ಸಮಸ್ಯೆ ಎದುರಾಗಿದೆ. ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಇಲ್ಲಿಗೆ ಬಂದು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸ್ಕೈಡೆಕ್ ಯೋಜನಾ ವರದಿ ಸಲ್ಲಿಕೆ

ಬೆಂಗಳೂರಿಗೆ ಒಳ್ಳೆಯ ಪ್ರವಾಸಿ ಕೇಂದ್ರ ನೀಡಬೇಕು ಎನ್ನುವ ಕಾರಣಕ್ಕೆ ಸ್ಕೈ ಡೆಕ್ ನಿರ್ಮಾಣ ಮಾಡಲಾಗುತ್ತಿದೆ. ಯೋಜನಾ ವರದಿ ಸಲ್ಲಿಕೆಯಾಗಿದೆ. ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು, ಪಾರ್ಕಿಂಗ್, ಜಾಗದ ಲಭ್ಯತೆ ಮತ್ತಿತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಆರಂಭಿಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

PREV
Read more Articles on
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ