ಹೆಚ್ಚುತ್ತಿರುವ ಕೊರೋನಾ ಕೇಸ್‌: 'ಆಂಧ್ರದಿಂದ ಜನರು ನುಸುಳದಂತೆ ತೀವ್ರ ನಿಗಾವಹಿಸಿ'

By Kannadaprabha News  |  First Published May 4, 2020, 9:43 AM IST

ಗಡಿ​ಭಾ​ಗ​ಗಳ ಚೆಕ್‌ ಪೋಸ್ಟ್‌​ಗ​ಳಲ್ಲಿ ಕಟ್ಟೆ​ಚ್ಚ​ರ| ಅಧಿ​ಕಾ​ರಿ​ಗಳ ಸಭೆ​ಯಲ್ಲಿ ಜಿಲ್ಲಾ​ಧಿ​ಕಾರಿ ಎಸ್‌.​ಎಸ್‌. ನಕುಲ್‌ ಖಡಕ್‌ ಸೂಚ​ನೆ| ಅಂತರ್‌ ಜಿಲ್ಲೆ ಮತ್ತು ಅಂತರ್‌ ರಾಜ್ಯದಿಂದ ಸರ್ಕಾರಿ ಬಸ್‌ಗಳಲ್ಲಿ ಬಳ್ಳಾರಿಗೆ ಬರುವ ವಲಸಿಗರು ಮತ್ತು ಕಾರ್ಮಿಕರಿಗೆ ಬಳ್ಳಾರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ಖಾನಹೊಸಳ್ಳಿ ಚೆಕ್‌ಪೋಸ್ಟ್‌ಗಳಲ್ಲಿ ಕರೆತರುವುದು| ಅಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆಗಳ ಮಾಡುವಂತೆ ಡಿಸಿ ನಕುಲ್‌ ಸೂಚನೆ|
 


ಬಳ್ಳಾರಿ(ಮೇ.04):  ಕೊರೋನಾ ಪ್ರಕರಣಗಳು ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್‌ ಜಿಲ್ಲೆಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರಾಜ್ಯದ ಗಡಿ ಭಾಗದಿಂದ ಆಂಧ್ರದ ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗಿದೆ. ಹೀಗಾಗಿ ಜನರು ನುಸುಳದಂತೆ ಕ್ರಮವಹಿಸುವ ಮತ್ತು ತೀವ್ರ ನಿಗಾವಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲೂಕುಗಳ ಗಡಿ ಭಾಗಗಳಿಗೆ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗ ಹೊಂದಿಕೊಂಡಿವೆ. ಆಂಧ್ರಪ್ರದೇಶ ರಾಜ್ಯದ ಜಿಲ್ಲೆಗಳಾದ ಕರ್ನೂಲ್‌ ಮತ್ತು ಅನಂತಪುರಂ ಜಿಲ್ಲೆಗಳಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ದೃಢಪಟ್ಟ ಕಾರಣ ಈ ಜಿಲ್ಲೆಗಳ ಗಡಿ ಭಾಗದಿಂದ ಆಂಧ್ರದ ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪ್ರವೇಶಿಸುವ ಮತ್ತು ಈ ಸೋಂಕು ಹರಡಿಸುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಯಾವುದೇ ವ್ಯಕ್ತಿಯು ಬಳ್ಳಾರಿ ಜಿಲ್ಲೆಯ ಗಡಿ ಪ್ರದೇಶದಿಂದ ಪ್ರವೇಶಿಸದಂತೆ ನಿಗಾವಹಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ನೋಡಲ್‌ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಾಗಿದ್ದು, ಅವರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಮತ್ತು ಒಂದು ವೇಳೆ ಯಾವುದೇ ವ್ಯಕ್ತಿಯು ಈ ರೀತಿ ಗಡಿ ಪ್ರದೇಶದಿಂದ ಪ್ರವೇಶಿಸಿದ್ದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

Tap to resize

Latest Videos

ಸುಧಾರಿಸದ ಜನ: ಕೊರೋನಾ ಬಗ್ಗೆ ಜಾಗೃತಿಗಾಗಿ ರೋಡಿಗಿಳಿದ ದೇವಾನು ದೇವತೆಗಳು..!

ಸಾರ್ವಜನಿಕರ ಆರೋಗ್ಯದೃಷ್ಟಿಯಿಂದ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸಿರುಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲೂಕುಗಳ ಗಡಿ ಭಾಗದಲ್ಲಿ ಪ್ರತಿನಿತ್ಯ ನಿರಂತರ 24 ಗಂಟೆಗಳ ಕಾಲ ಗಸ್ತುವಾಹನಗಳು ಸಂಚರಿಸಿ ನಿಗಾವಹಿಸಲಿವೆ ಎಂದು ವಿವರಿಸಿದ ಡಿಸಿ ನಕುಲ್‌ ಅವರು ಬಳ್ಳಾರಿ ತಾಲೂಕಿನ 29, ಸಿರುಗುಪ್ಪದ 27 ಮತ್ತು ಸಂಡೂರು ತಾಲೂಕಿನ 10 ಗ್ರಾಮಗಳು ಆಂಧ್ರದೊಂದಿಗೆ ಗಡಿ ಹಂಚಿಕೊಂಡಿವೆ ಎಂದರು.

ಬಳ್ಳಾರಿ ತಾಲೂಕಿಗೆ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಇಇ ಪ್ರಸನ್ನ, ಸಿರುಗುಪ್ಪ ತಾಲೂಕಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿಸ್ತರಣಾ ಅಧಿಕಾರಿ ಶ್ಯಾಮಪ್ಪ ಹಾಗೂ ಸಂಡೂರು ತಾಲೂಕಿಗೆ ಬಿಇಒ ಐ.ಆರ್‌. ಅಕ್ಕಿ ಅವರನ್ನು ತಾಲೂಕು ಮಟ್ಟದ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲಾಮಟ್ಟದ ನೋಡಲ್‌ ಅಧಿಕಾರಿಗಳನ್ನಾಗಿ ಬಳ್ಳಾರಿ ಗ್ರಾಮೀಣ ವಿಭಾಗದ ಡಿವೈಎಸ್ಪಿ ಅರುಣಕುಮಾರ್‌ ಅವರನ್ನು ನೇಮಿಸಲಾಗಿದೆ ಎಂದು ಅವರು ವಿವರಿಸಿದರು.

ಅಂತರ್‌ ಜಿಲ್ಲೆ ಮತ್ತು ಅಂತರ್‌ ರಾಜ್ಯದಿಂದ ಸರ್ಕಾರಿ ಬಸ್‌ಗಳಲ್ಲಿ ಬಳ್ಳಾರಿಗೆ ಬರುವ ವಲಸಿಗರು ಮತ್ತು ಕಾರ್ಮಿಕರಿಗೆ ಬಳ್ಳಾರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ಖಾನಹೊಸಳ್ಳಿ ಚೆಕ್‌ಪೋಸ್ಟ್‌ಗಳಲ್ಲಿ ಕರೆತರುವುದು. ಅಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆಗಳ ಮಾಡುವಂತೆ ಡಿಸಿ ನಕುಲ್‌ ಅವರು ಸೂಚನೆ ನೀಡಿದರು.

ಬರುವ ವಲಸಿಗರಿಗೆ ಇರುವ ಲಕ್ಷಣಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ತಪಾಸಣೆಯನ್ನು ನಡೆಸಿ ಮತ್ತು ನಿಗದಿತ ನಮೂನೆಯಲ್ಲಿ ವಿವರಗಳನ್ನು ದಾಖಲಿಸಿ ತದನಂತರ ವಲಸಿಗರ ಕೈಗೆ ಹೋಂ ಕ್ವಾರಂಟೈನ್‌ ಸೀಲ್‌ ಹಾಕುವುದು. ನಂತರ ಅವರವರ ಊರುಗಳಿಗೆ ವಲಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

ಆಂಧ್ರದ ಅನಂತಪುರ ಮತ್ತು ಕರ್ನೂಲ್‌ ಜಿಲ್ಲೆಗಳಿಂದ ತುರ್ತು ಚಿಕಿತ್ಸೆಗಾಗಿ ಬಳ್ಳಾರಿಗೆ ಬರುತ್ತಿರುವವರಿಗೆ ಅಲ್ಲಿನ ಜಿಲ್ಲಾಡಳಿತಗಳು ನೀಡಿದ ಪಾಸ್‌ ಇದ್ದರಷ್ಟೇ ಬಳ್ಳಾರಿ ಬರುವುದಕ್ಕೆ ಅನುಮತಿ ನೀಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್‌, ಅಪರ ಜಿಲ್ಲಾಧಿಕಾರಿ ಮಂಜುನಾಥ, ಪೊ›ಬೆಷನರಿ ಐಎಎಸ್‌ ಈಶ್ವರ್‌ ಕಾಂಡೂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
 

click me!