ರೈತರು ತಾವು ಬೆಳೆದ ಹಣ್ಣು, ತರಕಾರಿ, ಹೂವು ಸೇರಿದಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಲು ಅಗ್ರಿ ವಾರ್ ರೂಂ ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆರಂಭವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.04): ರೈತ ಸಮುದಾಯಕ್ಕೆ ಕೊರೋನಾ ಜಾಗೃತಿ ಹಾಗೂ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡುವ ಸಲುವಾಗಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವಿವಿಯ ವಿಜ್ಞಾನ ಕೇಂದ್ರದಲ್ಲಿ ಅಗ್ರಿವಾರ್ ರೂಂ ಸ್ಥಾಪಿಸಿದ್ದು, ಜಿಲ್ಲೆಯ ರೈತ ಬಾಂಧವರು ಈ ಸಹಾಯವಾಣಿಗೆ ಉಚಿತ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಕೃಷಿ ಮತ್ತು ತೋಟಗಾರಿಕೆ ವಿವಿ ಹಿರಿಯ ವಿಜ್ಞಾನಿಗಳು ತಿಳಿಸಿದ್ದಾರೆ.
ಮಾಹಿತಿ ಕೇಂದ್ರದಲ್ಲಿ ವಿವಿಧ ವಿಷಯಗಳ ತಜ್ಞರು ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಸೂಕ್ತ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ಅಲ್ಲದೆ ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ನೆರವಿನೊಂದಿಗೆ ರೈತರ ಕೃಷ್ಯುತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಲು ಸಹಕರಿಸಲಿದ್ದಾರೆ. ಇದರೊಂದಿಗೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ರೈತರು ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.
ಈ ಕೇಂದ್ರ ಬೆಳೆಗಾರರ ಮಧ್ಯೆ ಸಂಪರ್ಕ ಸೇತುವೆಯಾಗಿಯೂ ಕಾರ್ಯನಿರ್ವಹಿಸಲಿದೆ ಎಂದಿರುವ ಅವರು, ರೈತರು ತಾವು ಬೆಳೆದ ಹಣ್ಣು, ತರಕಾರಿ, ಹೂವು ಸೇರಿದಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಕುರಿತು ಮಾಹಿತಿ ನೀಡಲಿದೆ. ರೈತರು ತಮ್ಮ ಬೆಳೆ ಹಾಗೂ ಜಾನುವಾರುಗಳ ರಕ್ಷಣೆ ಬಗ್ಗೆಯೂ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಈ ಕೇಂದ್ರವು ರೈತರಿಗೆ ಕೃಷಿ ಸಂಬಂತ ವೈಜ್ಞಾನಿಕ ಮಾಹಿತಿ, ತಾಂತ್ರಿಕ ಮಾಹಿತಿ, ಸಲಹೆ, ಹಾಗೂ ಕ್ಷೇತ್ರ ಭೇಟಿ ಅಗತ್ಯಗಳಿಗೆ ಮಾರ್ಗದರ್ಶನ ಜೊತೆಗೆ ಬೀಜ, ನರ್ಸರಿಗಳು ಲಭ್ಯವಿರುವ ಮಾಹಿತಿ ನೀಡಲಿದೆ ಮಾತ್ರವಲ್ಲ ಕೃಷಿಕರಿಗೆ ಆರೋಗ್ಯ ಸೇತು ಆ್ಯಪ್ ಮನವರಿಕೆ ಮಾಡಿಕೊಡಲಿದೆ ಹಾಗೂ ಬಳಕೆಗೆ ಪ್ರೇರೇಪಿಸಲಿದೆ.
ಲಾಕ್‌ಡೌನ್‌ನಿಂದ ಬೆಲೆ ಕುಸಿತ: ಟ್ರ್ಯಾಕ್ಟರ್ ಹೊಡೆದು ಮೆಣಸಿನಕಾಯಿ ಬೆಳೆ ನಾಶ
ಕೃಷಿ ಚಟುವಟಿಕೆ ವೇಳೆ ರೈತರು ಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿಯಮಗಳ ಸಂಬಂಧ ಕೃಷಿ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರೈತರು ಕೃಷಿ ಚಟುವಟಿಕೆಗಳನ್ನು ಮಾಡುವಾಗ ಅಂತರ ಕಾಯ್ದುಕೊಂಡು ಮುಖಗವಸು ಧರಿಸಿ ಬಿತ್ತನೆ ಮಾಡಬೇಕು. ಊಟ ಮತ್ತು ವಿಶ್ರಾಂತಿಗಾಗಿ ಗದ್ದೆಯಿಂದ ಹೊರಬಂದಾಗ ಕೈಕಾಲು ಮುತ್ತು ಮುಖವನ್ನು ಸೋಪಿನಿಂದ ಸ್ವಚ್ಚವಾಗಿ ತೊಳೆಯಬೇಕು. ಭೂಮಿ ಹದಗೊಳಿಸಲು, ಬಿತ್ತನೆ ಮತ್ತು ರಸಗೊಬ್ಬರ ಬಳಕೆಗೆ ಕಾರ್ಮಿಕರ ಬಳಕೆ ಮಿತಗೊಳಿಸಿ ಯಂತ್ರೋಪಕರಣಗಳ ಬಳಕೆಯನ್ನು ಹೆಚ್ಚಿಸಬೇಕು. 1-2ಮೀ. ಅಂತರ ಕಾಯ್ದುಕೊಳ್ಳಬೇಕು. ಬಳಕೆಗೆ ಮುನ್ನ ಯಂತ್ರೋಪಕರಣಗಳನ್ನು ಸ್ವಚ್ಚಗೊಳಿಸಬೇಕು ಎಂದು ತಿಳಿಸಿದ್ದಾರೆ.
ಕಳೆ ತೆಗೆಯುವಾಗ, ಕೀಟನಾಶಕ, ರಸಗೊಬ್ಬರ ಬಳಸುವಾಗ ಸ್ವಚ್ಚತಾ ನಿಯಮಗಳನ್ನು ಪಾಲಿಸಬೇಕು. ಕೀಟನಾಶಕಗಳ ಖಾಲಿ ಪ್ಯಾಕೇಟ್‌ಗಳು ಅಥವಾ ಡಬ್ಬಿಗಳನ್ನು ಬೆಂಕಿಗೆ ಹಾಕಬೇಕು. ಇಲ್ಲವೆ ಮಣ್ಣಿನಲ್ಲಿ ಹೂಳಬೇಕು. ದಿನದ ಕೆಲಸ ಮುಗಿದ ನಂತರ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸೋಪಿನಿಂದ ಸ್ವಚ್ಚಗೊಳಿಸಬೇಕು. ಬೆಳೆ ಕಟಾವು, ಒಕ್ಕಲು ಮತ್ತು ಧಾನ್ಯಗಳನ್ನು ಚೀಲಕ್ಕೆ ತುಂಬುವಾಗ ಒಬ್ಬರಿಂದ ಮತ್ತೊಬ್ಬರಿಗೆ ಅಂತರ ಕಾಯ್ದುಕೊಳ್ಳಬೇಕು. ದಾಸ್ತಾನು ಮಾಡುವಂತಹ ಫಸಲುಗಳನ್ನು 48ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ದಾಸ್ತಾನು ಮಾಡುವಂತೆ ತಿಳಿಸಿದ್ದಾರೆ.
ಅಗ್ರಿವಾರ್ ರೂಂ ಸಂಪರ್ಕ ಮೊ.9480838967, 9480838976, 8277932600, 9448999216, 08182-267017 ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮೊಬೈಲ್ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಜಿಲ್ಲಾ ಮಟ್ಟದ ಸಮನ್ವಯ ಸಮಿತಿ :
ಶಿವಮೊಗ್ಗ - ಡಾ. ಬಿ.ಸಿ.ಹನುಮಂತಸ್ವಾಮಿ, ಮೊ 9480838976
ಚಿತ್ರದುರ್ಗ - ಡಾ. ಎಸ್.ಓಂಕಾರಪ್ಪ, ಮೊ 9480838201
ಉಡುಪಿ - ಡಾ. ಎಚ್.ಎಸ್.ಚೈತನ್ಯ, ಮೊ.9480858083
ಚಿಕ್ಕಮಗಳೂರು - ಡಾ. ಟಿ.ಪಿ.ಭರತ್‌ಕುಮಾರ್, ಮೊ 9480838203
ದಾವಣಗೆರೆ - ಡಾ. ಟಿ.ಎನ್.ದೇವರಾಜ್, ಮೊ 9449856876
ಕೊಡಗು - ಡಾ. ಸಾಜು ಜಾರ್ಜ್, ಮೊ 9945035707
ದಕ್ಷಿಣಕನ್ನಡ - ಡಾ. ಟಿ.ಜೆ.ರಮೇಶ್, ಮೊ 8794706468