ಕಲಬುರಗಿ: ಕೊರೋನಾ ಸಾವಿನ ಸರಣಿ ಕಟ್ಟಿಹಾಕಲು ಗಲ್ಲಿಗಲ್ಲಿ ಆರೋಗ್ಯ ತಪಾಸಣೆ..!

By Kannadaprabha News  |  First Published Aug 3, 2020, 3:50 PM IST

ಗಲ್ಲಿಗಲ್ಲಿ ಆರೋಗ್ಯ ತಪಾಸಣೆಗೆ ಮುಂದಾದ ಜಿಲ್ಲಾಡಳಿತ| ಹೆಚ್ಚುತ್ತಿರುವ ಕೊರೋನಾ ಸೋಂಕು| ಇಂದಿನಿಂದ ವಿಶೇಷ ಆರೋಗ್ಯ ತಪಾಸಣೆ ಶಿಬಿರ| 100 ಕೊರೋನಾ ಸಾವಿನ ಪ್ರಕರಣಗಳಲ್ಲಿ ಶೇ. 80 ನಗರದಲ್ಲೇ ಸಂಭವಿಸಿದ್ದು ಆತಂಕ ಹೆಚ್ಚಿಸಿದೆ|


ಶೇಷಮೂರ್ತಿ ಅವಧಾನಿ

ಕಲಬುರಗಿ(ಆ.03): ನಗರ ಪ್ರದೇಶದಲ್ಲಿ ಏರುಗತಿಯಲ್ಲಿ ಸಾಗಿರುವ ಕೊರೋನಾ ಸೋಂಕು- ಸಾವಿನ ಪ್ರಕರಣಗಳಿಂದಾಗಿ ಕಳವಳಗೊಂಡಿರುವ ಜಿಲ್ಲಾಡಳಿತ ಇದೀಗ ಜನರ ವಾಸದ ಬಡಾವಣೆಗಳಿಗೆ ಧಾವಿಸಿ ಆರೋಗ್ಯ ತಪಾಸಣೆಗೆ ಮುಂದಾಗಿದೆ.

Tap to resize

Latest Videos

ಬಡಾವಣೆ/ಗಲ್ಲಿಗಳಲ್ಲಿ ಠಿಕಾಣಿ ಹೂಡಿ ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿರುವವರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಕೋವಿಡ್‌ ಸಾವಿಗೆ ಸಾಥ್‌ ನೀಡುತ್ತಿರುವ ಐಎಲ್‌ಐ, ಮಧುಮೇಹ, ಸಾರಿ, ಬಿಪಿಯಂತಹ ಸಮಸ್ಯೆಗಳಿಗೆ ಮೂಲದಲ್ಲೇ ಚಿಕಿತ್ಸೆ ನೀಡಲು ಆ.3ರಿಂದ ಆ.9ರ ವರೆಗೆ ಬಡಾವಣೆಗಳತ್ತ ಹೆಜ್ಜೆ ಹಾಕುತ್ತಿದೆ.

ಕಳೆದ ಮಾರ್ಚ್‌ನಿಂದಲೇ ತೊಗರಿ ಕಣಜ ಹೊಕ್ಕಿರುವ ಹೆಮ್ಮಾರಿಯ ಮರಣ ಮೃದಂಗಕ್ಕೆ ವಿಷಮಶೀತ ಜ್ವರ (ಇನ್‌ಫ್ಲುಯನ್ಸ್‌ ಲೈಕ್‌ ಇಲ್‌ನೆಸ್‌) ತೀವ್ರ ಉಸಿರಾಟ ತೊಂದರೆ (ಸಾರಿ), ಮಧುಮೇಹ, ರಕ್ತದೊತ್ತಡಗಳು ಸಾಥ್‌ ನೀಡುತ್ತಿರೋದರಿಂದಲೇ ಸಾವಿನ ಸರಣಿ ಬೆಳೆಯುತ್ತಿದೆ.

ಚಿತ್ತಾಪುರ: ಕೊರೋನಾ ತಡೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಿ, ಪ್ರಿಯಾಂಕ್‌ ಖರ್ಗೆ

ಇದುವರೆಗೂ ಜಿಲ್ಲೆಯಲ್ಲಿ ಸಂಭವಿಸಿರುವ 100 ಸಾವಿನ ಪ್ರಕರಣಗಳಲ್ಲಿ 80 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೊರೋನಾ ಜೊತೆಗೇ ಮಧುಮೇಹ, ರಕ್ತದೊತ್ತಡ, ಐಎಲ್‌ಐ, ಸಾರಿಯಂತಹ ಅನಾರೋಗ್ಯ ಸೇರಿಕೊಂಡು ಸಾವುನೋವು ಸಂಭವಿಸುತ್ತಿವೆ. 100 ಸಾವಿನ ಪ್ರಕರಣಗಳಲ್ಲಿ ಶೇ. 80 ನಗರದಲ್ಲೇ ಸಂಭವಿಸಿದ್ದು ಆತಂಕ ಹೆಚ್ಚಿಸಿದೆ.

ನಗರದೆಲ್ಲೆಡೆ ಆರೋಗ್ಯ ಶಿಬಿರ:

ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಧುಮೇಹ ಮತ್ತು ರಕ್ತದೊತ್ತಡವಿರುವ ವ್ಯಕ್ತಿಗಳಿಗೆ ವಿಶೇಷ ಆರೋಗ್ಯ ತಪಾಸಣಾ ಚಿಕಿತ್ಸೆ ನಡೆಸಲು ಆ.3ರಿಂದ 10ರ ವರೆಗೆ ಕಲಬುರಗಿ ನಗರದ ವಿವಿಧ ನಗರ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವಿಶೇಷ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದೆ.

ಆರೋಗ್ಯ ಶಿಬಿರ ನಡೆಯುವ ಸ್ಥಳ

ಆ.3ರಂದು ಅಶೋಕ ನಗರ ಆರೋಗ್ಯ ಕೇಂದ್ರ, ಹೀರಾಪುರ ಶಾಜಿಲಾನಿ ದರ್ಗಾ 2ನೇ ಅಂಗನವಾಡಿ ಕೇಂದ್ರ, ಸಾಯಿ ಮಂದಿರ ಗಾರ್ಡನ್‌ ಹತ್ತಿರ, ಖಾನಾಪುರ ನಗರ ವೀರಭಧ್ರೇಶ್ವರ ಗುಡಿ ಅಂಗಳ. ಆ.4ರಂದು ಮಕ್ತಂಪೂರ ಅಂಗನವಾಡಿ ಕೇಂದ್ರ-1, ಎಸ್‌.ಎಂ.ಕೃಷ್ಣ ಕಾಲೋನಿ ಅಂಗನವಾಡಿ ಕೇಂದ್ರ, ಖಮರ್‌ ಕಾಲೋನಿ ಅಂಗನವಾಡಿ ಕೇಂದ್ರ, ಫಿಲ್ಟರ್‌ ಬೆಡ್‌ ಅಂಗನವಾಡಿ ಕೇಂದ್ರ-1. ಆ.5ರಂದು ಶಿವಾಜಿ ನಗರ ಮಹಾದೇವ ಮಂದಿರ ರಾಮ ನಗರ, ಸಮದಾಯ ಭವನ ಗಾಜೀಪೂರ, ಅಂಬೇಡ್ಕರ ಸಮುದಾಯ ಭವನ, ಮಲ್ಲಿಕಾರ್ಜುನ ಗುಡಿ ಅಂಗನವಾಡಿ ಕೇಂದ್ರ-1. ಆ.6ರಂದು ಕೃಷ್ಣಾ ನಗರ, ಗಣೇಶ ನಗರ ಬಿದ್ದಾಪುರ ಕಾಲೋನಿ, ಸಮುದಾಯ ಭವನ ಪಂಚಶೀಲ ನಗರ, ಯಾದುಲ್ಲಾ ಕಾಲೋನಿ ಅಂನವಾಡಿ ಕೇಂದ್ರ-2. ಆ.7ರಂದು ಮಕ್ತಂಪುರ ಅಂಗನವಾಡಿ ಕೇಂದ್ರ-1, ಮಾಮಿಕೇಸ್ವರಿ ಕಾಲೋನಿ ಶಿವಲಿಂಗೇಶ್ವರ ಮಂದಿರ ಅಂಗನವಾಡಿ ಕೇಂದ್ರ, ಮಹೆಬೂಬ್‌ ನಗರ ಅಂಗನವಾಡಿ ಕೇಂದ್ರ-1, ಫಿಲ್ಟರ್‌ ಬೆಡ್‌ ಅಂಗನವಾಡಿ ಕೇಂದ್ರ-2. ಆ.8ರಂದು ಅಂಭಾಭವಾನಿ ಗುಡಿ ಶಿವಾಜಿನಗರ ಅಂಗನವಾಡಿ ಕೇಂದ್ರ-1, ಭವಾನಿ ಮಂದಿರ, ಮಲ್ಲಿಕಾರ್ಜುನ ಮಂದಿರ, ತಾರಫೈಲ್‌. ಆ.9ರಂದು ಅಶೋಕ ನಗರ ಶಿವದತ್ತ ಮಠ, ಹೀರಾಪುರ ಆರೋಗ್ಯ ಕೇಂದ್ರದ ಅಂಗನವಾಡಿ ಕೇಂದ್ರ-4 ಬಿದ್ದಾಪುರ, ಪೊಲೀಸ್‌ ಕಾಲೋನಿ, ಖಾನಾಪುರ ನಗರದ ಸೈಯದ್‌ ಗಲ್ಲಿಯಲ್ಲಿ ಶಿಬಿರ ನಡೆಯಲಿದೆ.

ಕೋವಿಡ್‌-19ನಿಂದ ಮರಣ ಪ್ರಮಾಣ ತಗ್ಗಿಸಲು ಮಧುಮೇಹ ಮತ್ತು ರಕ್ತದೊತ್ತಡವಿರುವ ವ್ಯಕ್ತಿಗಳನ್ನು ಈಗಾಗಲೇ ಮನೆ-ಮನೆ ಸರ್ವೆ ಮೂಲಕ ಗುರುತಿಸಿದ್ದು, ಇವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆ ನೀಡಲು ಈ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಮತ್ತು ಸಲಹೆ ಪಡೆದುಕೊಳ್ಳುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಅವರು ತಿಳಿಸಿದ್ದಾರೆ. 

click me!