ಬೆಂ. ಗ್ರಾಮಾಂತರ: ಭೂವಿವಾದಗಳಿಗೆ ಶೀಘ್ರ ಇತಿಶ್ರೀ..?

By Kannadaprabha NewsFirst Published Aug 31, 2019, 2:54 PM IST
Highlights

ಬೆಂಗಳೂರು ಗ್ರಾಮಾಂತರದ ಎಲ್ಲಾ ತಾಲೂಕುಗಳ ಪಹಣಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿ​ದರು. ಭೂಮಿಗೆ ಸಂಬಂಧಿಸಿದ ವಿವಾದಗಳಿಗೆ ಶೀಘ್ರ ಪರಿಹಾರ ಒದಗಿಸಲು ಹೇಳಿದ್ದಾರೆ.

ರಾಮನಗರ(ಆ.31): ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಾಕಿ ಇರುವ ಭೂಮಿಗೆ ಸಂಬಂಧಿಸಿದ ವಿವಾದಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿ​ದರು.

ನಗ​ರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳ ಪಹಣಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳ ಕುರಿತು ಮಾಹಿತಿ ನೀಡುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.

ಮುಂದಿನ ಸಭೆಯಷ್ಟರಲ್ಲಿ ಇರುವ ಎಲ್ಲಾ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ, ಜಿಲ್ಲೆಯ ಪ್ರಗತಿಗೆ ಬೇಕಾದ ಕ್ರಮಕೈಗೊಳ್ಳಬೇಕು. ಸಕಾಲದಡಿಯಲ್ಲಿ ಬಂದ ಭೂವಿವಾದ ಸಂಬಂಧಿತ ಅರ್ಜಿಗಳ ವಿಲೇವಾರಿ ಕುರಿತಂತೆ ಬಾಕಿ ಇರುವ ಅರ್ಜಿಗಳ ಬಗ್ಗೆ ಮಾಹಿತಿ ನೀಡಿ, ಅರ್ಜಿಭರ್ತಿಗೆ ತಾಂತ್ರಿಕ ಸಮಸ್ಯೆ ಇದ್ದಲ್ಲಿ, ಬದಲಿ ವ್ಯವಸ್ಥೆ ಮಾಡಿಕೊಂಡು ಶೀಘ್ರ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದರು.

2019ನೇ ಸಾಲಿನ ಮುಂಗಾರು ಹಂಗಾಮಿ ಬೆಳೆ ಸಮೀಕ್ಷೆ ಕಾರ್ಯ ಈಗಾಗಲೇ ಕನಕಪುರ ತಾಲೂಕಿನ 30ಗ್ರಾಮಗಳಲ್ಲಿ ಪ್ರಗತಿಯಲ್ಲಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಗಳಲ್ಲಿ ಸೆಪ್ಟೆಂಬರ್‌ 1ರಿಂದ ಬೆಳೆ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ವಿಡಿಯೋ ಸಂವಾದ:

ಜಿಲ್ಲೆಯ ಎಲ್ಲಾ ತಾಲೂಕಿನ ಮಾಸ್ಟರ್‌ ಟ್ರೈನರ್‌ಗಳಿಗೆ ವಿಡಿಯೋ ಸಂವಾದದ ಮೂಲಕ ಬೆಳೆ ಸಮೀಕ್ಷೆ ಕುರಿತು ತರಬೇತಿ ನೀಡಲಾಗಿದೆ, ಇವರೊಂದಿಗೆ ಖಾಸಗಿ ನಿವಾಸಿಗಳು, ಮೇಲ್ವಿಚಾರಕರು ಸೇರಿದಂತೆ ಇತರೆ ಅಧಿಕಾರಿಗಳು ನಿಯೋಜನೆಗೊಂಡಿರುವುದಾಗಿ ಹೇಳಿದರು.

ಸರ್ಕಾರಿ ಜಮೀನಿನಲ್ಲಿ 1990ರ ಹಿಂದೆ ಅನಧಿಕೃತವಾಗಿ ಸಾಗುವಳಿ ನಡೆಸುತ್ತಿದ್ದು, ಅನಧಿಕೃತ ಸಾಗುವಳಿಗೆ ಸಂಬಂಧಿಸಿದಂತೆ ಸಕ್ರಮಗೊಳಿಸಿದ ಅರ್ಜಿಗಳಲ್ಲಿ ಸಾಗುವಳಿ ಚೀಟಿ ನೀಡಲು ಬಾಕಿ ಇರುವ ಪ್ರಕರಣಗಳ ಕುರಿತು ಸ್ಪಷ್ಟನೆ ನೀಡುವಂತೆ ತಿಳಿಸಿ, ಶೀಘ್ರ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ 823 ಗ್ರಾಮಗಳಲ್ಲಿ 683 ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನವಿದ್ದು, ಇನ್ನುಳಿದ ಗ್ರಾಮಗಳಲ್ಲಿ ಸ್ಮಶಾನಕ್ಕೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ, 25ಗ್ರಾಮಗಳಲ್ಲಿ ಖಾಸಗಿ ಜಮೀನನ್ನು ಖರೀದಿಸಲು ಬೇಕಾದ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಿಂಚಣಿದಾರರ ಸಮಸ್ಯೆ:

ಪಿಂಚಣಿದಾರರ ಖಾತೆಗೆ ಆಧಾರ್‌ ಲಿಂಕ್‌ಗೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಬಗೆಹರಿಸಿ, ವಿಕಲಚೇತನರಿಗೆ, ವಿಧವೆಯರಿಗೆ, ವೃದ್ಧರಿಗೆ ನೀಡಲಾಗುತ್ತಿರುವ ಪಿಂಚಣಿ ಸರಿಯಾಗಿ ಸೇರುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮದ್ಯ ಸೇವನೆಗೆ ಹಣ ನೀಡದ ಪತ್ನಿಯ ಕೊಚ್ಚಿ ಕೊಂದ ಪತಿ!

ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರರಿಗೆ ಅಂಗನವಾಡಿ, ವಿವಿಧ ಇಲಾಖೆಯ ವಿದ್ಯಾರ್ಥಿನಿಲಯಗಳನ್ನು ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು. ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಬೇಕಾದ ಕ್ರಮಕೈಗೊಳ್ಳುವಂತೆ ಅರ್ಚನಾ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಸೇರಿದಂತೆ ಕಂದಾಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!