ಬಿಜೆಪಿಯಲ್ಲಿ ದುಃಖಿಗಳಿಲ್ಲ, ಎಲ್ಲರೂ ಸುಖಿ: ನಳಿನ್

By Kannadaprabha NewsFirst Published Aug 31, 2019, 2:09 PM IST
Highlights

ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಬಿಜೆಪಿ ಒಳಗೆ ಅಸಮಾಧಾನವಿದೆ ಎಂಬ ಮಾತುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಳ್ಳಿ ಹಾಕಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಸುಖಿಗಳು ಎಂದು ಹೇಳಿದ್ದಾರೆ.

ಮಂಗಳೂರು(ಆ.31): ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ನೂತನ ಸರ್ಕಾರದಲ್ಲಿ ಯಾವುದೇ ಅಸಮಾಧಾನಗಳಿಲ್ಲ. ಹಲವರಿಗೆ ಅಸಮಾಧಾನವಿದೆ ಎಂಬ ಮಾಧ್ಯಮಗಳಲ್ಲಿ ವರದಿಯಾಗಿದ್ದು, ನಮ್ಮಲ್ಲಿ ಯಾರೂ ದುಃಖಿಗಳಿಲ್ಲ. ಎಲ್ಲರೂ ಸುಖಿಗಳಾಗಿದ್ದಾರೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಸಹಾಯ ನೀಡಿದ ಯಾರನ್ನೂ ಕೈಬಿಡುವ ಪ್ರಶ್ನೆಯಿಲ್ಲ. 17 ಶಾಸಕರ ಅನರ್ಹತೆ ಪ್ರಕರಣವು ನ್ಯಾಯಾಲಯದ ಮುಂದಿರುವ ಕಾರಣ ಆ ಬಗ್ಗೆ ಏನೂ ಹೇಳುವಂತಿಲ್ಲ. ಆರು ಬಾರಿ ಗೆದ್ದ ಎಸ್‌.ಅಂಗಾರ ಅವರು ನಮಗೆಲ್ಲ ಮಾರ್ಗದರ್ಶಕರು. ಅವರಿಗೆ ನಾನು ಅಪಾರ ಗೌರವ ಕೊಡುತ್ತೇನೆ. ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಎಂಬುದು ನಿಜ. ಆದರೆ ಇಂದಿನ ಸ್ಥಿತಿಯಲ್ಲಿ ಅದಾಗಿಲ್ಲ ಎಂದು ನುಡಿದರು.

150 ಸೀಟು ಬಂದಿದ್ದರೆ ಮಂತ್ರಿ:

ಒಂದು ವೇಳೆ ಬಿಜೆಪಿಗೆ 150 ಸೀಟು ಸಿಕ್ಕಿದ್ದಲ್ಲಿ ಅಂಗಾರ ಅವರೇ ಮೊದಲು ಮಂತ್ರಿ ಆಗಿರುತ್ತಿದ್ದರು. ನಾನಾಗಲಿ, ಅಂಗಾರ ಅವರಾಗಲಿ ಯಾವುದೇ ಸ್ಥಾನಮಾನ ಕೇಳಿಕೊಂಡು ಹೋದವರಲ್ಲ. ನಿನ್ನೆ ಅಂಗಾರ ಅವರೇ ಬಹಿರಂಗವಾಗಿ ನನಗೇನೂ ಅಸಮಾಧಾನ ಇಲ್ಲ ಎಂದು ತಿಳಿಸಿದ್ದಾರೆ. ಸುಳ್ಯ ಬಿಜೆಪಿಯಲ್ಲಿ ಯಾವುದೇ ಅಸಹಕಾರ ಚಳುವಳಿ ಇಲ್ಲ. ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅಸಹಕಾರ ಚಳುವಳಿ ಎಂಬುದನ್ನು ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಕಾಂಗ್ರೆಸಿಗರು ಸೃಷ್ಟಿಸಿ ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಇದೀಗ ಬಂದ ಸುದ್ದಿ: ಮತ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಪುತ್ತೂರು ಜಿಲ್ಲೆ ಮಾಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಹಿಂದೆ ಪುತ್ತೂರು ಭೇಟಿ ಸಂದರ್ಭದಲ್ಲಿ ನೀಡಿದ್ದ ಭರವಸೆಯ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಕಟೀಲ್‌, ಶಾಸಕರು ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹೊಸ ಜಿಲ್ಲೆ, ತಾಲೂಕು ರಚನೆಯಲ್ಲಿ ಆದಾಯ, ಸಂಪನ್ಮೂಲದ ವಿಚಾರವೂ ಅಡಗಿರುತ್ತದೆ. ಇದನ್ನೆಲ್ಲ ನೋಡಿಕೊಂಡು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಪುತ್ತೂರು ರೈಲ್ವೆ ನಿಲ್ದಾಣದಿಂದ ಹಾರಾಡಿ ಕ್ರಾಸ್‌ಗೆ ಸಂಪರ್ಕಿಸುವ ರೈಲ್ವೆ ರಸ್ತೆಯನ್ನು ಮೇಲ್ದರ್ಜೆಗೇರಿಸಲು 1.60 ಕೋಟಿ ರು. ಮಂಜೂರಾಗಿದೆ. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯೂ ಮುಗಿದಿದೆ ಎಂದರು.

ನಗರಸಭೆ ಚುನಾವಣೆ ನಡೆದು ಒಂದು ವರ್ಷವಾದರೂ ಇನ್ನೂ ಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ. ಹಿಂದಿನ ಮೈತ್ರಿ ಸರಕಾರ ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿ ಆಡಳಿತ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಅವರೇ ಮಂತ್ರಿಯಾಗಿದ್ದಾರೆ. ಹೀಗಾಗಿ ಸರಕಾರ ಅಫಿಡವಿಟ್‌ ಸಲ್ಲಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಂತ್ರಿಗಳಿಗೆ ಖಾತೆಗಳನ್ನು ಹಂಚಿಸಿ ಒಂದೆರಡು ದಿನ ಕಳೆದಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಧಾರಗಳು ಆಗಲಿವೆ ಎಂದರು.

ಪ್ರಧಾನಿಗೆ ಕಾಯ್ಬೇಡಿ, ಪರಿಹಾರ ಘೋಷಿಸಿ: ಮೊಯಿಲಿ

ಬಿಜೆಪಿ ಜಿಲ್ಲಾಧ್ಯಕ್ಷ ಪುತ್ತೂರು ಶಾಸಕ ಸಂಜೀವ ಮಠಂದೂರು, ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್‌, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಇದ್ದರು.

click me!