
ದಾವಣಗೆರೆ (ಅ.06): ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಅಡಿಕೆ ಕಳ್ಳತನದ ಪ್ರಕರಣವೊಂದು ವರದಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಅಡಿಕೆಗೆ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇರುವ ಹಿನ್ನೆಲೆಯಲ್ಲಿ, ಫಸಲಿಗೆ ಬಂದಿದ್ದ ಅಡಿಕೆ ತೋಟಕ್ಕೆ ಕಳ್ಳರು ರಾತ್ರೋರಾತ್ರಿ ಕನ್ನ ಹಾಕಿದ್ದಾರೆ.
ಕೆಳಗೋಟೆ ಗ್ರಾಮದ ರೈತ ಸಂತೋಷ್ ಎಂಬುವವರು ಸಾಲ ಮಾಡಿ ಅಡಿಕೆ ಬೆಳೆದಿದ್ದರು. ಇದೀಗ ಕಟಾವಿಗೆ ಬಂದಿದ್ದ ಸಂದರ್ಭದಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಸುಮಾರು 1,100 ಅಡಿಕೆ ಮರಗಳಲ್ಲಿ ಕಳ್ಳರು ಹಸಿ ಅಡಿಕೆ ಗೊನೆಗಳನ್ನು ಕಟಾವು ಮಾಡಿ ಪರಾರಿಯಾಗಿದ್ದಾರೆ. ಅಂದಾಜು 4 ಕ್ವಿಂಟಾಲ್ ಅಡಿಕೆ ಕಳ್ಳತನವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಗೆ 48,000 ದಿಂದ 50,000 ರೂ.ಗಳಷ್ಟು ಬೆಲೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ರೈತನ ಶ್ರಮವನ್ನು ಲೂಟಿ ಮಾಡಿದ್ದಾರೆ. ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ ಗೊನೆಗಳನ್ನು ಕದ್ದೊಯ್ದಿರುವುದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಇನ್ನು ಇದೇ ಮೊದಲನೆಯದಾಗಿ ಅಡಿಕೆ ತೋಟದಲ್ಲಿ ಜೋರಾಗಿ ಫಸಲು ಬಂದಿತ್ತು. ಒಳ್ಳೆಯ ಇಳುವರಿ ಬಂದಿದ್ದರಿಂದ ಆದಾಯವನ್ನೂ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಕಳ್ಳತನದಿಂದಾಗಿ ಬೆಳೆಗಾಗಿ ಮಾಡಿದ ಸಾಲವೂ ಮೈಮೇಲೆ ಬರುವ ಆತಂಕ ಎದುರಾಗಿದೆ.
ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಬೆಲೆಬಾಳುವ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ರೈತರು ಅಡಿಕೆ ತೋಟವನ್ನೂ ಕಾಯುವುದಕ್ಕೆ ತೋಟದಲ್ಲಿಯೇ ಕಾವಲು ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಅಥವಾ ಇದಕ್ಕೆ ಒಬ್ಬ ರಾತ್ರಿ ಪಾಳಿಗೆ ಕಾವಲುಗಾರರನ್ನು ನೇಮಕ ಮಾಡಬೇಕಾಗಿದೆ.