ಶ್ರೀರಾಮಸೇನೆ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ, ಮಾಲಾಧಾರಿಗಳಿಂದ ದತ್ತ ಪಾದುಕೆ ದರ್ಶನ

By Suvarna News  |  First Published Nov 13, 2022, 7:18 PM IST

ಶ್ರೀರಾಮಸೇನಾ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಇಂದು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜ್ಯದ ಮೂಲೆ-ಮೂಲೆಗಳಿಂದ ಬಂದಿದ್ದ ಸಾವಿರಾರು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು.


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (13): ಕಳೆದೊಂದು ವಾರದಿಂದ ಕಾಫಿನಾಡು ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿದೆ.  ಶ್ರೀರಾಮಸೇನಾ ವತಿಯಿಂದ ನಡೆಯುತ್ತಿದ್ದ ದತ್ತಮಾಲಾ ಅಭಿಯಾನ ಇಂದು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜ್ಯದ ಮೂಲೆ-ಮೂಲೆಗಳಿಂದ ಬಂದಿದ್ದ ಸಾವಿರಾರು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು. ಶ್ರೀರಾಮ ಸೇನೆ ವತಿಯಿಂದ ವಿವಾದಿತ ದತ್ತಪೀಠದಲ್ಲಿ ಹಮ್ಮಿಗೊಂಡಿದ್ದ  18ನೇ ವರ್ಷದ ದತ್ತಮಾಲಾ ಅಭಿಮಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 800ಕ್ಕೂ ಅಧಿಕ ಪೊಲೀಸರು ಹೆಜ್ಜೆಗೊಬ್ಬರಂತೆ ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ರು. ದೇವಾಲಯದ ಹೊರಭಾಗದಲ್ಲಿ ಹೋಮ-ಹವನ ನಡೆಸಿ, ದತ್ತಪೀಠ ಹಿಂದೂಗಳದ್ದೆಂದು ಆಗ್ರಹಿಸಿದ್ರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇದ್ರು ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಿಲ್ಲ ಎಂದು ಸರ್ಕಾರಗಳ ವಿರುದ್ಧ ಕೆಂಡಾಮಂಡಲರಾದ್ರು. ಬೆಳಗ್ಗೆ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿ ದತ್ತಪಾದುಕೆ ದರ್ಶನ ಪಡೆದ್ರು. ದತ್ತಪಾದುಕೆ ದರ್ಶನ ಪಡೆಯುಲು ಭಜನೆ ಮಾಡ್ತಾ ಸರದಿ ಸಾಲಲ್ಲಿ ಭಕ್ತರು ತೆರಳಿದರು.

Latest Videos

undefined

ದತ್ತಭಕ್ತರಿಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಮಹೇಶ್ ಕಟ್ಟಿನಮನೆ ಸಾಥ್ ನೀಡಿದರು. ಅಭಿಯಾನಕ್ಕೆ ಆಗಮಿಸಿದ್ದ ಸ್ವಾಮೀಜಿಗಳಿಗೆ ದತ್ತಪಾದುಕೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ, ಹೋಮ ಮಂಟಪದಲ್ಲಿ ಗಣಪತಿ, ದತ್ತಾತ್ರೇಯ ಹೋಮವನ್ನು ನಡೆಸಿ ಧಾರ್ಮಿಕ ಸಭೆಯನ್ನು ನಡೆಸಿದರು. ಹಿಂದೂ ಅರ್ಚಕರ ಶೀಘ್ರ ನೇಮಿಸಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂಬ ಆಗ್ರಹ ಎಂದಿನಂತೆ ಇತ್ತು.

ದತ್ತಪೀಠದ ಚೆಂಡು ಸರ್ಕಾರದ ಅಂಗಳದಲ್ಲಿದೆ. ಹಿಂದುತ್ವದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಕೂಡಲೇ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ದತ್ತಪೀಠದ ಹೆಸರೇಳೆಕೊಂಡು ಅಧಿಕಾರಕ್ಕೆ ಬಂದ ಶಾಸಕ ಸಿ.ಟಿ.ರವಿಗೆ ಅರ್ಚಕರ ನೇಮಿಸಿ ಪೂಜೆ ಪ್ರಾರಂಭ ಮಾಡಿದರೆ ನಿಮ್ಮಪ್ಪನ ಗಂಟು ಹೋಗೋದ ಎಂದು ಸಿ.ಟಿ.ರವಿ ವಿರುದ್ಧ ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

Chikkamagaluru: ಶ್ರೀರಾಮಸೇನೆ ವತಿಯಿಂದ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ

ಶೋಭಾಯಾತ್ರೆಯಲ್ಲಿ ದತ್ತಾತ್ರೇಯ ಮೂರ್ತಿಯೊಂದಿಗೆ ಮೆರವಣಿಗೆ
ಇನ್ನು ರಾಜ್ಯದ ವಿವಿಧ ಭಾಗದಿಂದ ದತ್ತಮಾಲಾಧಾರಿಗಳು ಆಗಮಿಸಿದ್ರು. ಇದೇ ಮೊದಲ ಬಾರಿಗೆ ದತ್ತಾತ್ರೇಯ ಮೂರ್ತಿಯೊಂದಿಗೆ ಮೆರವಣಿಗೆ ಆರಂಭಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಸ್ವಾಮಿಯ ಮೂರ್ತಿ ಕೆಳಗಡೆ ಬಂದಿದೆ. ಮುಂದಿನ ವರ್ಷ ದತ್ತಪೀಠದಲ್ಲಿ ಆಸೀನನಾಗ್ತಾನೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಸುಮಾರು ಐದು ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು. ಪೊಲೀಸರು ಕೂಡ ಚಿಕ್ಕಮಗಳೂರು ನಗರ ಹಾಗೂ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತೋ ಕಲ್ಪಿಸಿದ್ದರು. ಸುಮಾರು 1000ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆಬಿದ್ದಿದೆ.

ದತ್ತಪೀಠ ವಿವಾದ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ: ಶ್ರೀರಾಮಸೇನೆ

ಒಟ್ಟಾರೆ, ಕಳೆದೊಂದು ವಾರದಿಂದ ಕೆಸರಿಮಯವಾಗಿದ್ದ ಚಿಕ್ಕಮಗಳೂರು ನಾಳೆಯಿಂದ ಯತಾಸ್ಥಿತಿಗೆ ಮರಳಲಿದೆ. ಎರಡ್ಮೂರು ದಶಕಗಳ ಹಿಂದಿನ ದತ್ತಪೀಠವೇ ಬೇರೆ ಇಂದಿನ ದತ್ತಪೀಠವೇ ಬೇರೆ. ದತ್ತಪೀಠ ಅಂದ್ರೆ ಅಂದು ಭಕ್ತಿ ಇದ್ರೆ, ಇಂದು ಗಲಾಟೆ ಎಂಬ ಭಯದ ವಾತಾವರಣ ಇದೆ. ಆದ್ರೆ, ಪೊಲೀಸರು ಸರ್ಪಗಾವಲಿನಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಎಲ್ಲಾ ಶಾಂತರೀತಿಯಲ್ಲಿ ಮುಕ್ತಾಯವಾಗಿದ್ದು, ಎಂದಿನಂತೆ ದತ್ತಪೀಠ ಹಿಂದುಗಳ ಪೀಠ, ಅದನ್ನ ಹಿಂದೂಗಳಿಗೆ ಒಪ್ಪಿಸಬೇಕೆಂಬ ಕೂಗು ಮಾತ್ರ ಜೋರಾಗಿತ್ತು.

click me!