Udupi: ದೈವಾರಾಧನೆ ಟೀಕಿಸಿದ ಬಿ.ಟಿ ಲಲಿತಾ ನಾಯಕ್ ವಿರುದ್ದ ದೂರು

By Suvarna News  |  First Published Nov 13, 2022, 6:41 PM IST

ದೈವ ನರ್ತಕರಿಗೆ ಮಾಸಾಸನದ ಅಗತ್ಯವಿಲ್ಲ, ದೈವಾರಾಧನೆ ಒಂದು ಮೂಢನಂಬಿಕೆ ಎಂದಿರುವ ರಾಜಕಾರಣಿ ಕಂ ವಿಚಾರವಾದಿ ಬಿ.ಟಿ  ಲಲಿತಾ ನಾಯಕ್ ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ವರದಿ: ಶಶಿಧರ್ ಮಾಸ್ತಿಬೈಲು

ಉಡುಪಿ (ನ.13): ದೈವ ನರ್ತಕರಿಗೆ ಮಾಸಾಸನದ ಅಗತ್ಯವಿಲ್ಲ, ದೈವಾರಾಧನೆ ಒಂದು ಮೂಢನಂಬಿಕೆ ಎಂದಿರುವ ರಾಜಕಾರಣಿ ಕಂ ವಿಚಾರವಾದಿ ಬಿ.ಟಿ  ಲಲಿತಾ ನಾಯಕ್ ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೈವಾರಾಧನೆಯನ್ನು ನಿಂದಿಸಿರುವುದಕ್ಕೆ ಅವರನ್ನು ಉಡುಪಿಗೆ ಕರೆಸಿ ತಿಳಿ ಹೇಳುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಸಿ ಗಮನಸೆಳೆದಿದೆ. ಕಾಂತರಾ ಸಿನಿಮಾ ಬಿಡುಗಡೆಯಾದ ನಂತರ ಅನೇಕ ಬಗೆಯ ಧರ್ಮಸೂಕ್ಷ್ಮಗಳು ಚರ್ಚೆಯಾಗಿತ್ತು. ಸಿನಿಮಾದ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ರಾಜಕಾರಣಿ ವಿಚಾರವಾದಿ ಬಿ.ಟಿ. ಲಲಿತಾ ನಾಯಕ್ ದೈವರಾಧಕರಿಗೆ ಮಾಸಾಶನ ನೀಡಿರುವ ಸರಕಾರದ ಕ್ರಮವನ್ನು ಖಂಡಿಸಿದ್ದರು. ಮೂಡನಂಬಿಕೆಯನ್ನು ಪ್ರಚೋದಿಸುವ ವ್ಯಕ್ತಿಗಳಿಗೆ ಏಕೆ ಮಾಸಾಶನ ಎಂದು ಕೇಳಿದ್ದರು. ತಮ್ಮ ಹೇಳಿಕೆಯ ಮೂಲಕ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ, ಹಿಂದೂ ಜಾಗರಣ ವೇದಿಕೆ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದೆ. ಈ ದೂರನ್ನು ಹುಬ್ಬಳ್ಳಿಗೆ ವರ್ಗಾಯಿಸಿ ಎಫ್ಐಆರ್ ದಾಖಲಿಸುವುದಾಗಿ ಹೇಳಿದೆ.  ಭವಿಷ್ಯದಲ್ಲಿ ನ್ಯಾಯಾಲಯದ ಮೂಲಕ ಕಾನೂನು ಸಮರ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ.

Tap to resize

Latest Videos

undefined

ತುಳುನಾಡಿನ ಭೂತಾರಾಧನೆಯನ್ನು ಮೂಢನಂಬಿಕೆ ಎಂದಿರುವ ಬಿ.ಟಿ ಲಲಿತಾ ನಾಯಕ್ ಅವರ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಹಿಂ.ಜಾ.ವೇ ತಾಲೂಕು ಸಂಚಾಲಕ ಉಮೇಶ್ ಪಕ್ಕಾಲು ನೇತೃತ್ವದಲ್ಲಿ ಉಡುಪಿ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. 

ತುಳುನಾಡಿನ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆಯಾಗಿದೆ. ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹೀಯಾಳಿಸಿದ್ದಾರೆ, ನಾನು ಅನೇಕ ವರ್ಷಗಳಿಂದ ದೈವರಾದನೆ ಮಾಡಿಕೊಂಡು ಬಂದಿರುವ ಕುಟುಂಬಕ್ಕೆ ಸೇರಿದವನಾಗಿದ್ದು, ಬಿ.ಟಿ.ಲಲಿತಾ ನಾಯಕ್ ಅವರು ದೈವರಾದನೆಯ ಬಗ್ಗೆ ಬಹಳ ಕೀಳಾಗಿ ಮಾತನಾಡಿ ನನ್ನ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಭಾರತೀಯ ದಂಡಸಂಹಿತೆ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮನವಿಯಲ್ಲಿ ಉಮೇಶ್ ಪಕ್ಕಾಲು ಉಲ್ಲೇಖಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿಂ.ಜಾ.ವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ತುಳುನಾಡಿನ ಸಂಸ್ಕೃತಿ, ಸಭ್ಯತೆ, ಇತಿಹಾಸ ನ್ಯಾಯಾಂಗ ವ್ಯವಸ್ಥೆ, ಕೃಷಿ, ಕೌಟುಂಬಿಕ ಸಂಬಂಧ ಎಲ್ಲವೂ ದೈವಾರಾಧನೆಯೊಂದಿಗೆ ಅಡಕವಾಗಿದೆ. ತುಳುನಾಡು ಅಂದ್ರೆ ದೈವಾರಾದನೆ, ದೈವಾರಾಧನೆ ಅಂದ್ರೆ ತುಳುನಾಡು ಎಂದರು.

ಈ ವಿಚಾರವಾದಿಗಳು ನಮ್ಮ ಆಚರಣೆಯನ್ನು ಟೀಕಿಸುತ್ತಾರೆ. ತುಳುನಾಡಿನ ದೈವಾರಾಧನೆ ಸರಿ ಇಲ್ಲ, ಅದು ಮೂಢನಂಬಿಕೆಯಾಗಿದ್ದು ನಿಷೇಧಿಸಬೇಕು ಎನ್ನುತ್ತಾ, ದೈವಾರಾಧಕರಿಗೆ ಮಾಸಾಶನ ಕೊಟ್ಟರೆ ದುಡ್ಡು ದಂಡವಾಗುತ್ತೆ ಎನ್ನುತ್ತಾರೆ. ಈ ಮಾತನ್ನು ಕೇಳಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶ, ಕಮ್ಮಟಗಳಲ್ಲಿ ಹಿಂದುಗಳಿಗೆ ವಿಚಾರವಾದಿಗಳು ಬಾಯಿಗೆ ಬಂದ ಹಾಗೆ ಈ ಹಿಂದೆ ಬೈದಿರಬಹುದು, ಇನ್ನು ಮುಂದೆ ಇದು ಆಗಲ್ಲ. ದೈವ ನಿಂದನೆ ಮಾಡಿದ್ದಾರೆ ಎಂದು ನಾವು ಕೂಡ ಪುಂಡಾಟಿಕೆ ಮಾಡುವುದಿಲ್ಲ. ಕಾನೂನಾತ್ಮಕವಾಗಿ ನಮ್ಮ ನಂಬಿಕೆಗಳನ್ನು ಉಳಿಸಿಕೊಳ್ಳಲು ಸಂವಿಧಾನದಲ್ಲಿ ಅವಕಾಶ ಇದೆ.ಹಾಗಾಗಿ ನಾವು ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದೇವೆ ಎಂದರು. 

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಎಫ್.ಐ.ಆರ್ ದಾಖಲಾಗುತ್ತದೆ. ಆ ಬಳಿಕ ನಾವು ಮತ್ತೊಂದು ಖಾಸಗಿ ದೂರು ಕೊಡುತ್ತೇವೆ.  ನಮ್ಮ ಆರಾಧನೆಯನ್ನು ಅಲ್ಲಗಳೆಯುತ್ತಾರೆ ಅಂದರೆ ಅವರಿಗೆ ಅಜ್ಞಾನ ಇದೆ. ಕೋರ್ಟಿಗೆ ಬಂದಾಗ ತುಳುನಾಡು ಸುತ್ತಾಡಿಸುತ್ತೇವೆ. ಇಲ್ಲಿಯ ದೈವಸ್ಥಾನಗಳಿಗೆ ಕರೆದುಕೊಂಡು ಹೋಗಿ ಚರಿತ್ರೆ ಹಿನ್ನೆಲೆಯನ್ನು ತಿಳಿಸಿ ಕೊಡುತ್ತೇವೆ. ಸಂಸ್ಕೃತಿ ಮತ್ತು ಪ್ರಕೃತಿ ಇವೆರಡರ ನಡುವೆ ನಮ್ಮ ದೈವಾರಾಧನೆ ಇದೆ. ನೆಲ ಮೂಲದ ಜನ ದೇವರನ್ನಾದರೂ ಬಿಟ್ಟಾರು ದೈವಗಳನ್ನು ಬಿಡುವುದಿಲ್ಲ. ದೈವಗಳನ್ನು ಬಿಟ್ಟು ನಮ್ಮ ಬದುಕು ಇಲ್ಲ ಎಂದು ತಿಳಿಸುತ್ತೇವೆ ಎಂದರು

ಕಾಂತರಾ ಚಿತ್ರ ಬಂದಾಗ ವಿಚಾರವಾದಿಗಳು ಮೊದಲು ಬಹಳ ಸಂಭ್ರಮಿಸಿದ್ದರು. ಬಂಡಾಯ ಇದೆ ಅರಣ್ಯ ನಿವಾಸಿಗಳ ಹಕ್ಕಿನ ಬಗ್ಗೆ ಇದೆ ಎಂದು ಹೇಳುತ್ತಿದ್ದರು.ಕಾಂತಾರ ಚಿತ್ರ ನಮ್ಮ ನಂಬಿಕೆಗಳನ್ನು ಬಲಪಡಿಸುವ ಕೆಲಸ ಮಾಡಿದೆ. ಹಿಂದುತ್ವ ವಿಚಾರವನ್ನು ಸಿನಿಮಾ ಬಲಪಡಿಸುತ್ತೆ ಎಂದು ಗೊತ್ತಾದಾಗ ವಿಚಾರವಾದಿಗಳು ತಿರುಗಿ ಬಿದ್ದಿದ್ದಾರೆ. ಈಗ ಕಾಂತರಾ ಸಿನಿಮಾದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ ಎಂದು ಹೇಳಿದರು.

ಯಾವುದರ ಬಗ್ಗೆಯೂ ನಂಬಿಕೆ ಇಲ್ಲದವರು ನಮ್ಮ ದೈವಗಳ ಬಗ್ಗೆ ವಾದ ಮಾಡುತ್ತಿರುವುದು ವಿಪರ್ಯಾಸ. ದೈವ ನಂಬುವವರನ್ನು ಪ್ರಧಾನ ವಾಹಿನಿಯಿಂದ ಪ್ರತ್ಯೇಕಗೊಳಿಸಲು ಹೀಗೆ ಮಾಡುತ್ತಿದ್ದಾರೆ. ಅವರನ್ನು ನಾಸ್ತಿಕರನ್ನಾಗಿಸಿ ವಿಚಾರವಾದಿಗಳನ್ನಾಗಿಸುವ ಪ್ರಯತ್ನದಲ್ಲಿದ್ದಾರೆ. ನಮ್ಮ ನಂಬಿಕೆ ಎಂಬ ಊರುಗೋಲನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ನೆಲ ಮೂಲದ ನಿವಾಸಿಗಳ ನಂಬಿಕೆಗೆ ಧಕ್ಕೆಯಾದರೆ ಬಿಡಲ್ಲ. ಇನ್ನಷ್ಟು ತೀವ್ರವಾದ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

 

 ದೈವ ನರ್ತಕರಿಗೆ ಸರ್ಕಾರವೇಕೆ 2 ಸಾವಿರ ನೀಡಬೇಕು: ಬಿಟಿ ಲಲಿತಾ ನಾಯಕ್‌!

ದೈವಾರಾಧನೆಯಲ್ಲಿ ಸಾಮಾಜಿಕ ನ್ಯಾಯ ಅನ್ನುವುದು ಮೊದಲಿನಿಂದಲೂ ಇದೆ. ಪ್ರತಿಯೊಂದು ವರ್ಗವನ್ನು ದೈವರಾದನೆಯ ವೇಳೆ ಗುರುತಿಸಲಾಗುತ್ತದೆ. ನಮ್ಮ ರಕ್ತಗತವಾದ ನಂಬಿಕೆಯನ್ನು ಯಾರಿಗೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದರು.

ದೈವ ನರ್ತಕರಿಗೆ ಮಾಶಾಸನ ಬೇಡ ಎಂಬ ಬಿ.ಟಿ. ಲಲಿತಾ ನಾಯಕ್‌ ಹೇಳಿಕೆಗೆ ಯು.ಟಿ.ಖಾದರ್‌ ಖಂಡನೆ

ಹಿಂದೂ ಜಾಗರಣ ವೇದಿಕೆ ಕಾನೂನು ಸಮರ ಮುಂದುವರಿಸುವುದಾಗಿ ಹೇಳಿದೆ. ನಾಡಿನ ಇತರ ಭಾಗಗಳಲ್ಲೂ ಕೇಸು ದಾಖಲಾಗುವ ಸಾಧ್ಯತೆ ಇದೆ. ಕಾಂತರಾ ಚಲನಚಿತ್ರ ಹುಟ್ಟಿಸಿರುವ ಚರ್ಚೆ ಈ ಮೂಲಕ ನಾನು ಆಯಾಮಗಳನ್ನು ಪಡೆದುಕೊಂಡಿದೆ.

click me!