ಬೆಳಗಾವಿ: ದಸರಾಕ್ಕೆ ಕಳೆತಂದುಕೊಟ್ಟ ಉಗಾರದ ಪದ್ಮಾವತಿ ದೇವಿ

By Web DeskFirst Published Oct 7, 2019, 10:36 AM IST
Highlights

ಶ್ರಾವಣ ಹಾಗೂ ದಸರಾ ಬಂತೆಂದರೆ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಅಥಣಿ ತಾಲೂಕಿನ ಕೃಷ್ಣಾ ತೀರದ ಉಗಾರ ಗ್ರಾಮದ ಪದ್ಮಾವತಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ| ತಾಯಿ ಪದ್ಮಾವತಿ ದೇವಿ ನೆಲೆಸಿರುವುದರಿಂದ ಈ ಗ್ರಾಮಕ್ಕೆ ಪದ್ಮಾವತಿ ಉಗಾರ ಎಂದೇ ಪ್ರಖ್ಯಾತಗೊಂಡಿದೆ| ವಿಜಯದಶಮಿ ಹಬ್ಬದ 9 ದಿನಗಳ ಕಾಲ ಗ್ರಾಮದಲ್ಲಿ ಜಾತ್ರೆಯ ಸ್ವರೂಪವೇ ಕಳೆಗಟ್ಟಿರುತ್ತದೆ| ಎಲ್ಲರಲ್ಲೂ ಪದ್ಮಾವತಿ ದೇವಿಯ ದರ್ಶನ ಪಡೆಯುವ ತವಕ ಶ್ರದ್ಧಾಭಕ್ತಿಯಿಂದ ದೇವಿಗೆ ನಮಸ್ಕರಿಸಿ ಅವಳ ಕೃಪಾಶೀರ್ವಾದಕ್ಕೆ ಹಾತೊರೆಯುವುದು ಕಂಡುಬರುತ್ತದೆ|

ಸಿದ್ದಯ್ಯ ಹಿರೇಮಠ 

ಕಾಗವಾಡ(ಅ.7): ಶ್ರಾವಣ ಹಾಗೂ ದಸರಾ ಬಂತೆಂದರೆ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಅಥಣಿ ತಾಲೂಕಿನ ಕೃಷ್ಣಾ ತೀರದ ಉಗಾರ ಗ್ರಾಮದ ಪದ್ಮಾವತಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ತಾಯಿ ಪದ್ಮಾವತಿ ದೇವಿ ನೆಲೆಸಿರುವುದರಿಂದ ಈ ಗ್ರಾಮಕ್ಕೆ ಪದ್ಮಾವತಿ ಉಗಾರ ಎಂದೇ ಪ್ರಖ್ಯಾತಗೊಂಡಿದೆ.

ಹೌದು, ವಿಜಯದಶಮಿ ಹಬ್ಬದ 9 ದಿನಗಳ ಕಾಲ ಗ್ರಾಮದಲ್ಲಿ ಜಾತ್ರೆಯ ಸ್ವರೂಪವೇ ಕಳೆಗಟ್ಟಿರುತ್ತದೆ. ಎಲ್ಲಿ ನೋಡಿದರಲ್ಲಿ ಭಕ್ತರ ದಂಡು. ಎಲ್ಲರಲ್ಲೂ ಪದ್ಮಾವತಿ ದೇವಿಯ ದರ್ಶನ ಪಡೆಯುವ ತವಕ ಶ್ರದ್ಧಾಭಕ್ತಿಯಿಂದ ದೇವಿಗೆ ನಮಸ್ಕರಿಸಿ ಅವಳ ಕೃಪಾಶೀರ್ವಾದಕ್ಕೆ ಹಾತೊರೆಯುವುದು ಕಂಡುಬರುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರದ್ಧಾ ಭಕ್ತಿಯಿಂದ ದೇವಿಯ ಆರಾಧನೆ ಮಾಡಿದರೆ ದೇವಿ ಒಲಿಯುವುದು ನಿಶ್ಚಿತ ಎಂಬುದು ಪ್ರತೀತಿ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಿಯ ಆರಾಧಕರಾಗಿದ್ದಾರೆ. ಪದ್ಮಾವತಿ ದೇವಿ ಉಗಾರ ಗ್ರಾಮದ ಗೌಡರ ಮನೆಯಲ್ಲಿ ವಾಸವಾಗಿರುವುದಕ್ಕೆ ಸಾವಿರಾರು ವರ್ಷಗಳ ಇತಿಹಾಸವುಂಟು. ಸಾವಿರಾರು ವರ್ಷಗಳ ಹಿಂದಿನ ಕಥೆ ಇದೆ.

ಉಗಾರಕ್ಕೆ ಬಂದು ನೆಲೆಸಿದ ಮಹಾತಾಯಿ:

ಗೌಡರ ಸೊಸೆ ಪದ್ಮಾವತಿ ದೇವಿಯ ಆರಾಧಕಳಾಗಿದ್ದಳು. ಅವಳ ಭಕ್ತಿಗೆ ಮೆಚ್ಚಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಹಾತಕನಗಲಾ ತಾಲೂಕಿನ ಕುಂಭೋಜ ಗ್ರಾಮದಿಂದ ಪದ್ಮಾವತಿ ದೇವಿ ಉಗಾರಕ್ಕೆ ಬಂದು ನೆಲೆಸಿದ್ದಾಳೆ ಎಂದು ಪ್ರಚಲಿತ ಕಥೆ ಇದೆ. ಅಂದಿನಿಂದ ಗೌಡರ ವಾಡೆಯ ಪಕ್ಕದಲ್ಲಿ ಸುಂದರ ಮಂದಿರ ನಿರ್ಮಿಸಿ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಗೌಡರ ಮನೆಯಲ್ಲಿ ದೇವಿ ವಾಸವಾಗಿರುವದರಿಂದ ದೇವಿಯ ಆರಾಧನೆಯ ಪ್ರಥಮ ಪ್ರಾಸಸ್ತ್ಯ ಗೌಡರಿಗೆ ಸಲ್ಲುತ್ತದೆ. ಗೌಡರ ಮನೆತನದವರು ದೇವಿಯ ದರ್ಶನ ಪಡೆದುಕೊಂಡ ನಂತರವೇ ತಮ್ಮ ದಿನಚರಿ ಪ್ರಾರಂಭಿಸುತ್ತಾರೆ. ಇಂದಿಗೂ ಕೂಡ ಬಾಪುಗೌಡ ಅಪ್ಪುಗೌಡ ಪಾಟೀಲ, ಶೀತಲ್‌ಗೌಡ ಪಾಟೀಲ, ವೃಷಭಗೌಡ ಪಾಟೀಲ ಹಾಗೂ ಅವರ ಕುಟುಂಬ ವರ್ಗದವರು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ.

ವಿದ್ಯುತ್‌ ಅಲಂಕೃತ:

ನವರಾತ್ರಿಯ 9 ದಿನಗಳ ಕಾಲ ದೇವಿಯ ಮಂದಿರಕ್ಕೆ ವಿದ್ಯುತ್‌ ದೀಪಾಲಂಕಾರ, ಮಾಡಿ 40 ಅಖಂಡ ತುಪ್ಪದ ಜ್ಯೋತಿಗಳನ್ನು ಬೆಳಗಲಾಗುತ್ತದೆ. ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ದೇವಿಯ ಅಲಂಕಾರ, ಅಷ್ಟಕ ಸ್ತೋತ್ರ, ಕುಂಕುಮ ಅರ್ಚನೆ ಸಂಜೆ ಅಭಿಷೇಕ ಹಾಗೂ ರಾತ್ರಿ 7 ಗಂಟೆಗೆ ಆದರ್ಶ ಮಹಿಳಾ ಮಂಡಳದ ವತಿಯಿಂದ ದಾಂಡಿಯಾ ಹಾಗೂ ಗಾರ್ಭಾ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ.

ಮುತ್ತಿನ ಹನಿಗೈದು ಸಾಕ್ಷೀಕರಿಸುವ ಮಹಾತಾಯಿ:

ಅ.7ರಂದು ಆಯುಧ ಪೂಜೆ, ಖಂಡೆಮಹಾನವಮಿ, ಜಗನ್ಮಾತೆ ಪದ್ಮಾವತಿ ದೇವಿಯ ಮೂರ್ತಿ ಪೂಜೆ, ಬೆಳಗ್ಗೆ 11 ಗಂಟೆಗೆ ಪದ್ಮಾವತಿ ದೇವಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನ 1 ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣಿಗೆ ಮಾಡುತ್ತಾ ಕೃಷ್ಣಾ ತೀರದ ನದಿಯ ದಡದಲ್ಲಿ ಮಂಟಪ ನಿರ್ಮಿಸಿ ಅಲ್ಲಿ ತಾಯಿ ಪದ್ಮಾವತಿಗೆ ಅಷ್ಟದ್ರವ್ಯಗಳ ಅಭಿಷೇಕ ಕಾರ್ಯಕ್ರಮ ನಡೆಯುತ್ತದೆ. 

ಈ ಸಮಯದಲ್ಲಿ 100 ಲೀ. ಹಾಲು, ಮೊಸರು, ತುಪ್ಪಗಳಿಂದ ಅಭಿಷೇಕ ಮಾಡಲಾಗುತ್ತದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಈ ಪೂಜೆ ವೀಕ್ಷಿಸಲು ಆಗಮಿಸುತ್ತಾರೆ. ಕೃಷ್ಣಾ ನದಿಯಲ್ಲಿ ದೇವಿಯ ಪೂಜೆ ಶ್ರದ್ಧಾ ಭಕ್ತಿಯಿಂದ ಜರುಗುತ್ತಿರುವಾಗಲೇ ಮೇಘರಾಜ 5 ಮಳೆಯ ಹನಿಗಳನ್ನಾದರೂ ಸುರಿಸಿ ಭಕ್ತರ ಭಕ್ತಿ ಸಾಕ್ಷಿಕರಿಸುತ್ತಾನೆ. ಆ ಮಳೆ ಹನಿಗೆ ಮುತ್ತಿನ ಮಳೆ ಎಂದೇ ಕರೆಯಲ್ಪಡುತ್ತಾರೆ. ಸಾವಿರಾರು ವರ್ಷಗಳಿಂದ ಇದು ನಡೆದುಕೊಂಡು ಬಂದ ಸಾಂಪ್ರದಾಯ ಹಾಗೂ ದೇವಿಯ ಮಹಾತ್ಮೆ.

8 ರಂದು ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದ್ದು, 11 ಗಂಟೆಗೆ ಅಲಂಕೃತ ದೇವಿಗೆ 51 ಕಳಶಗಳಿಂದ ಪೂಜಾಭಿಷೇಕ ಕಾರ್ಯಕ್ರಮ, ಸೋಡೋಪಚಾರ ಪೂಜೆ ಕುಂಕುಮಾರ್ಚನೆ ಜರುಗುತ್ತದೆ. ಸಂಜೆ ಅಲಂಕೃತ ದೇವಿಯನ್ನು ಪಲ್ಲಕ್ಕಿಯಲ್ಲಿ ಪೂಜಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌಡರ ತೋಟದ ಕಡೆಗೆ ಮೆರವಣಿಗೆ ಸಾಗುತ್ತದೆ. ಮರಳಿ ಪದ್ಮಾವತಿ ದೇವಿಯ ಮಂದಿರಕ್ಕೆ ರಾತ್ರಿ 2 ಗಂಟೆಗೆ ಬಂದು ಮೆರವಣಗೆ ವಿಸರ್ಜನೆಗೊಳ್ಳುತ್ತದೆ.
 

click me!