ಮೈಸೂರಲ್ಲಿ ಗಜಪಡೆಯ ತಾಲೀಮು ಆರಂಭ

By Web DeskFirst Published Aug 29, 2019, 10:27 AM IST
Highlights

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ನೇತೃತ್ವ ವಹಿಸುವ ಅರ್ಜುನ ಮತ್ತು ಆತನ ತಂಡಕ್ಕೆ  ದಿನಕ್ಕೆರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ನಡೆಯುವ ತಾಲೀಮು ನೀಡಲಾಗುತ್ತಿದೆ.

ಮೈಸೂರು[ಆ.29]:  ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೆ ತಿಂಗಳ ಮುಂಚೆಯೇ ನಗರದಲ್ಲಿ ವಾಸ್ತವ್ಯ ಹೂಡಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಯು ತಾಲೀಮು ಆರಂಭಿಸಿವೆ.

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ನೇತೃತ್ವ ವಹಿಸುವ ಅರ್ಜುನ ಮತ್ತು ಆತನ ತಂಡಕ್ಕೆ  ದಿನಕ್ಕೆರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ನಡೆಯುವ ತಾಲೀಮು ನೀಡಲಾಗುತ್ತಿದೆ.

ಒಂದು ವರ್ಷದಿಂದ ಕಾಡಿನ ಪರಿಸರಕ್ಕೆ ಹೊಂದಿಕೊಂಡಿರುವ ಆನೆಗಳಿಗೆ ನಗರದ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಇಲ್ಲಿನ ರಸ್ತೆ ಮಾರ್ಗ ಪರಿಚಯವಾಗಲಿ ಎಂಬ ಕಾರಣಕ್ಕೆ ದಸರಾ ಪೂರ್ಣಗೊಳ್ಳುವವರೆಗೂ ತಾಲೀಮು ನೀಡಲಾಗುತ್ತದೆ. ಮಂಗಳವಾರವಷ್ಟೇ ಯಾರು ಬಲಶಾಲಿ ಎಂಬುದನ್ನು ತೂಕದ ಮೂಲಕ ಸಾಬೀತುಪಡಿಸಲಾಗಿದೆ. ಬುಧವಾರದಿಂದ ಬೆಳಗ್ಗೆ ಮತ್ತು ಸಂಜೆ ಆನೆಗಳ ತಾಲೀಮು ನಡೆಯಿತು.

ಅರಮನೆಯ ಬಲರಾಮ ದ್ವಾರದ ಮೂಲಕ ತೆರಳಿದ ಆನೆಗಳು ಚಾಮರಾಜ ಒಡೆಯರ್‌ ವೃತ್ತ, ಕೆ.ಆರ್‌. ವೃತ್ತ, ಸಯ್ಯಾಜಿರಾವ್‌ ರಸ್ತೆಯ ಮೂಲಕ ಬನ್ನಿಮಂಟಪ ತಲುಪಿತು. ಆನೆಗಳ ತಾಲೀಮಿನ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಅಲ್ಲದೆ ಬಿಗಿ ಪೊಲೀಸ್‌ ಬಂದೋಬಸ್‌್ತ ಕಲ್ಪಿಸಲಾಗಿತ್ತು.

ತಾಲೀಮಿನಿಂದ ಬಂದ ಆನೆಗಳು ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಅರಮನೆ ಆವರಣದಲ್ಲಿ ನಿರ್ಮಿಸಲಾದ ಸ್ನಾನದ ಹೊಂಡದಲ್ಲಿ ಕೂರಿಸಿ ಸ್ನಾನ ಮಾಡಿಸಲಾಯಿತು. ಬಳಿಕ ಆನೆಗಳಿಗೆ ಮೇವು, ನೀರು ಮತ್ತೆ ಮಧ್ಯಾಹ್ನದ ವೇಳೆಗೆ ಪುಷ್ಕಳವಾದ ಆಹಾರ ನೀಡಲಾಯಿತು. ಬೆಲ್ಲ, ಕಬ್ಬು, ಆಲದ ಎಲೆ, ಉರುಳಿ ಮತ್ತಿತರ ಕಾಳುಗಳನ್ನು ಹಾಕಿ ಬೇಯಿಸಿದ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಯಿತು.

ಅಂತೆಯೇ ವೈದ್ಯರು ನಿಯಮಿತವಾಗಿ ಅದರ ಆರೋಗ್ಯ ಪರೀಕ್ಷಿಸಿದರು. ಸೆ. 28 ರಂದು ದಸರಾ ಮಹೋತ್ಸವ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ತಾಲೀಮು ನೀಡಲಾಗುತ್ತಿದೆ. ಒಂದೆರಡು ವಾರ ಕಳೆದ ಬಳಿಕ ಮರದ ಅಂಬಾರಿ, ಮರಳ ಮೂಟೆ ಇಟ್ಟು ಆನೆಗೆ ಅಂಬಾರಿ ಹೊರುವ ತಾಲೀಮು ನೀಡಲಾಗುವುದು.

click me!