ಮಾರ್ಗ ಮಧ್ಯೆ ಸಿಕ್ಕವಳನ್ನು ಕುಟುಂಬಕ್ಕೆ ಒಪ್ಪಿಸಿದ ಡ್ರೈವರ್‌, ಕಂಡಕ್ಟರ್‌

By Web DeskFirst Published Aug 29, 2019, 10:15 AM IST
Highlights

ಮಧ್ಯರಾತ್ರಿ ಮಾರ್ಗ ಮಧ್ಯೆ ಬಸ್‌ ಹತ್ತಿದ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು ಕುಟುಂಬದವರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಚಾಲಕ ಮತ್ತು ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು [ಆ.29]: ಕರ್ತವ್ಯ ನಿರ್ವಹಣೆ ವೇಳೆ ಮಧ್ಯರಾತ್ರಿ ಮಾರ್ಗ ಮಧ್ಯೆ ಬಸ್‌ ಹತ್ತಿದ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು ಕುಟುಂಬದವರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಚಾಲಕ ಮತ್ತು ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಚಾಲಕ ಟಿ.ಎಸ್‌.ಪವನಕುಮಾರ್‌ ಹಾಗೂ ನಿರ್ವಾಹಕ ಕೆ.ಎ.ಶೇಖರೇಗೌಡ ಆ.26ರಂದು ಬೆಂಗಳೂರು - ಮನ್ನಾರ್‌ ಮಾರ್ಗದಲ್ಲಿ ಸಂಚರಿಸುವ ಕೆಎ 57, ಎಫ್‌-3779 ನೋಂದಣಿ ಸಂಖ್ಯೆ ಬಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮನ್ನಾರ್‌ ಕಡೆಯಿಂದ ಬೆಂಗಳೂರಿಗೆ ಬರುವಾಗ ಮಧ್ಯರಾತ್ರಿ ಚಿನ್ನಾರ್‌ ಅಭಯಾರಣ್ಯದಲ್ಲಿ ಅಪರಿಚಿತ ಮಹಿಳೆ ಬಸ್‌ಗೆ ಕೈ ತೋರಿಸಿದ್ದಾರೆ. ಈ ವೇಳೆ ಬಸ್‌ ನಿಲ್ಲಿಸಿದಾಗ ಅಪರಿಚಿತ ಪುರುಷ ಆ ಮಹಿಳೆಯನ್ನು ಜನದಟ್ಟಣೆ ಇರುವ ಕಡೆ ಇಳಿಸುವಂತೆ ಮನವಿ ಮಾಡಿ ಹೊರಟು ಹೋಗಿದ್ದಾರೆ.

ಗೌರಿ ಗಣೇಶ್ ಹಬ್ಬದ ವಿಶೇಷ: KSRTCಯಿಂದ ಹೆಚ್ಚುವರಿ ಬಸ್, ರಿಯಾಯಿತಿಯೂ ಉಂಟು

ಈ ವೇಳೆ ವಿಚಾರಿಸಿದಾಗ ಆ ಮಹಿಳೆಯ ಹೆಸರು ಜಯಶ್ರೀ ಹಾಗೂ ಆಕೆ ರಾಯಚೂರಿನವರು ಎಂಬುದು ತಿಳಿದು ಬಂದಿದೆ. ಬಸ್‌ ಹತ್ತಿಸಿಕೊಂಡು ಟಿಕೆಟ್‌ ಪಡೆಯುವಂತೆ ಹೇಳಿದಾಗ ಆಕೆ ಹಣವಿಲ್ಲ ಎಂದಿದ್ದಾರೆ. ಆಗ ಚಾಲಕ ಮತ್ತು ನಿರ್ವಾಹಕ ತಮ್ಮ ಸ್ವಂತ ಹಣ ಹಾಕಿ ಟಿಕೆಟ್‌ ಕೊಟ್ಟು ಬಳಿಕ ಊಟೋಪಚಾರದ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥೆ ರೀತಿ ಕಂಡು ಆಕೆಯಿಂದ ತಂದೆಯ ಮೊಬೈಲ್‌ ನಂಬರ್‌ ಪಡೆದು ಕರೆ ಮಾಡಿ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ನಂತರ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಗೆ ಕರೆದೊಯ್ದು ಸುರಕ್ಷಿತವಾಗಿ ತಂದೆಯ ಸುಪರ್ದಿಗೆ ಒಪ್ಪಿಸಿದ್ದಾರೆ.

ಚಾಲಕ ಮತ್ತು ನಿರ್ವಾಹಕರ ಈ ಮಾದರಿ ಕಾರ್ಯವನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಮುಕ್ತಕಂಠದಿಂದ ಶ್ಲಾಘಿಸಿ, ಇಬ್ಬರಿಗೂ ಅಭಿನಂದನಾ ಪತ್ರ ನೀಡಿ ಪ್ರಶಂಸಿಸಿದ್ದಾರೆ.

click me!