
ಚಾಮರಾಜನಗರ: ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಡಾ.ಶ್ರೀನಿಧಿ ಮದುವೆ ಆರತಕ್ಷತೆ ಹಾಗೂ ಬೀಗರ ಔತಣ ಇಂದು (ನ.29) ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆದಿದೆ. ನೂತನ ದಂಪತಿಯ ಆರತಕ್ಷತೆ ಭರ್ಜರಿಯಾಗಿ ನಡೆಯುತ್ತಿದ್ದು, ಸುಮಾರು 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು
ನ.26ರಂದು ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ‘ಮಂತ್ರ ಮಾಂಗಲ್ಯ’ ಪದ್ಧತಿಯಲ್ಲಿ ದರ್ಶನ್ ಧ್ರುವನಾರಾಯಣ್ ಮತ್ತು ಶ್ರೀನಿಧಿ ವಿವಾಹವಾಗಿದ್ದರು. ರಾಮನಗರದ ಜಾನಪದ ಲೋಕದ ದೊಡ್ಡಮನೆಯಲ್ಲಿ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಭಾಗವಹಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ನವ ಜೋಡಿಗೆ ಶುಭ ಹಾರೈಸಿದ್ದರು. ಮಂತ್ರ ಮಾಂಗಲ್ಯದಡಿ ವಿವಾಹ ಆಗಿರೋದು ಭಾರೀ ಪ್ರಶಂಸೆಗೆ ಕಾರಣವಾಗಿತ್ತು.
ಆಡಂಬರದ ಮದುವೆಗೆ ಬದಲಾಗಿ ಸರಳ ಮಂತ್ರ ಮಾಂಗಲ್ಯ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದ ದರ್ಶನ್ ಧ್ರುವನಾರಾಯಣ್ ಅವರ ನಡೆ ಸಾಕಷ್ಟು ಗಮನ ಸೆಳೆದಿತ್ತು. ಕುವೆಂಪು ಅವರ ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಆಶಯದಂತೆ ವಿವಾಹ ನೆರವೇರಿಸಿದ್ದರು. ಇದೀಗ ಸ್ವಗ್ರಾಮ ಹೆಗ್ಗವಾಡಿಯಲ್ಲಿ ಆರತಕ್ಷತೆ ಹಾಗೂ ಬೀಗರ ಔತಣ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಗಣ್ಯರು, ಸಚಿವರು, ಶಾಸಕರು ಹಾಗೂ ಮುಖಂಡರು ಭಾಗವಹಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಇಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿ ನವ ದಂಪತಿಗೆ ಶುಭ ಕೋರಿದೆ. ಸಚಿವರಾದ ಪುಟ್ಟರಂಗ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ಇಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿ ನವ ದಂಪತಿಗೆ ಶುಭ ಕೋರಿದೆ.
ಸಚಿವರಾದ ಪುಟ್ಟರಂಗ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಉಪಸ್ಥಿತರಿದ್ದರು. https://t.co/0d8ioHl5JG
— Siddaramaiah (@siddaramaiah) November 29, 2026
ಔತಣಕೂಟಕ್ಕೆ ಆಗಮಿಸುವ ಜನರಿಗೆ ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಸರಳವಾಗಿ ನಡೆದಿದ್ದರೂ, ಸ್ವಗ್ರಾಮದಲ್ಲಿ ನಡೆಯುತ್ತಿರುವ ಆರತಕ್ಷತೆ ಮತ್ತು ಬೀಗರ ಔತಣಕ್ಕೆ ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೀಗರ ಊಟಕ್ಕೆ ಆಗಮಿಸಿದ್ದ ಸಾವಿರಾರು ಜನರು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ.