ಸಮ್ಮೇದ್ ಶಿಖರ್ಜಿ ಜೈನ ತೀರ್ಥಕ್ಷೇತ್ರ ಪ್ರವಾಸಿ ಕ್ಷೇತ್ರ ಬೇಡ, ದಾಂಡೇಲಿ ಜೈನ ಸಮಾಜ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

By Suvarna NewsFirst Published Jan 6, 2023, 9:06 PM IST
Highlights

ಜೈನ ಸಮಾಜದ ಅತ್ಯಂತ ಪರಮ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರವು ಪ್ರವಾಸೋದ್ಯಮ ತಾಣವನ್ನಾಗಿ ಘೋಷಣೆ ಮಾಡಿರುವುದನ್ನು ಕೈ ಬಿಡುವವರೆಗೆ ಮುಂಬರಲಿರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಘೋಷಣೆ ಮಾಡಿದೆ.

ಉತ್ತರ ಕನ್ನಡ (ಜ.6): ಜೈನ ಸಮಾಜದ ಅತ್ಯಂತ ಪರಮ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರವು ಪ್ರವಾಸೋದ್ಯಮ ತಾಣವನ್ನಾಗಿ ಘೋಷಣೆ ಮಾಡಿರುವುದನ್ನು ಕೈ ಬಿಡುವವರೆಗೆ ಮುಂಬರಲಿರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಘೋಷಣೆ ಮಾಡಿದೆ. ಅಲ್ಲದೇ, ಉಪ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಲಿಖಿತ ಮನವಿ ಸಲ್ಲಿಸಿದೆ. ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಜೈನ ಧರ್ಮೀಯರ ಪರಮ ಭಕ್ತಿಯ ತೀರ್ಥಕ್ಷೇತ್ರವಾದ ಸಮ್ಮೇದ್ ಶಿಖರ್ಝಿಯನ್ನು ಪ್ರವಾಸಿ ತಾಣವನ್ನಾಗಿಸಿದ್ದಲ್ಲಿ ಮೋಜು, ಮಸ್ತಿಗಳಂತಹ ಮತ್ತು ಮದ್ಯ, ಮಾಂಸ ಮಾರಾಟದಂತಹ ಚಟುವಟಿಕೆಗಳು ನಡೆಯುತ್ತವೆ. ತೀರ್ಥಕ್ಷೇತ್ರದ ಗಾಂಭೀರ್ಯತೆ ಮತ್ತು ಪಾವಿತ್ರ್ಯತೆಗೆ ಬಲವಾದ ಪರಿಣಾಮ ಬೀರಲಿರುವುದರ ಜತೆಗೆ ಜೈನ ಧರ್ಮ ಬಾಂಧವರ ಭಾವನೆಗಳಿಗೆ ಧಕ್ಕೆಯಾಗಲಿದೆ. ಸಮ್ಮೇದ್ ಶಿಖರ್ಝಿಯನ್ನು ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿರುವುದನ್ನು ಕೈ ಬಿಡಬೇಕೆಂದು ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆಗಳು, ಹೋರಾಟಗಳು ನಡೆಯುತ್ತಿದೆ.

ಈ ನಡುವೆ ದಾಂಡೇಲಿಯ ಜೈನ ಸಮಾಜ ಪವಿತ್ರ ಕ್ಷೇತ್ರವಾದ ಸಮ್ಮೇದ್ ಶಿಖರ್ಜಿಯ ಉಳಿವಿಗಾಗಿ ಮತ್ತು ರಕ್ಷಣೆಗಾಗಿ ಈ ನಿರ್ಧಾರಕ್ಕೆ ಬಂದಿದೆ. ಸಮ್ಮೇದ್ ಶಿಖರ್ಝಿಯನ್ನು ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಿರುವುದನ್ನು ಕೈ ಬಿಡುವವರೆಗೆ ಮುಂಬರಲಿರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಮತ್ತು ಈ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಜೈನ ಸಮುದಾಯ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

 

Tumakur : ಶಿಖರ್ಜಿ ಪ್ರವಾಸಿ ತಾಣ ಆದೇಶ ಹಿಂಪಡೆಯಲು ಆಗ್ರಹ

ಅಲ್ಲದೇ, ಸಮ್ಮೇದ್ ಶಿಖರ್ಝಿಯನ್ನು ಪ್ರವಾಸಿ ತಾಣವನ್ನಾಗಿಸಿರುವುದನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಜೈನ ಸಮಾಜ ಸೇವಾ ಟ್ರಸ್ಟಿನ ಕಾರ್ಯಾಧ್ಯಕ್ಷರಾದ ಮಹಾವೀರ ನೇರ್ಲೇಕರ್, ಪ್ರಧಾನ ಕಾರ್ಯದರ್ಶಿ ಸಂದೇಶ್.ಎಸ್.ಜೈನ್, ಸಮಾಜದ ಪ್ರಮುಖರುಗಳಾದ ಡಾ.ಬಿ.ಪಿ.ಮಹೇಂದ್ರಕುಮಾರ್, ನಾಗೇಂದ್ರನಾಥ್, ಮಹಾವೀರ ಬಂಡಿ, ಮಹಾವೀರ ಘಾಳಿ, ಎಸ್.ಕೆ.ಬನ್ಸಾಲಿ, ಅಭಯ್.ಎಸ್.ಸದಲಗಿ, ಎಸ್.ಡಿ.ದೇವಕ್ಕಿ, ಅಜಿತ್, ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು ಮತ್ತು ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.

Jain Protest: ಜೈನರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಉಳಿಸಿ: ಜೈನ ಸಮುದಾಯ ಹೋರಾಟ

click me!