ತಿಕೋಟಾ: ಸಂತನಿಲ್ಲದೇ ಬಿಜ್ಜರಗಿಯಲ್ಲಿ ಈಗಲೂ ನೀರವ ಮೌನ..!

By Kannadaprabha News  |  First Published Jan 6, 2023, 9:00 PM IST

ವ್ಯಾಪಾರ, ವಹಿವಾಟು, ಯಾವುದೇ ಚಟುವಟಿಕೆಯೂ ಆ ಗ್ರಾಮದಲ್ಲಿಲ್ಲ, ಇನ್ನೂ ಶ್ರೀಗಳ ನೆನಪಿನಲ್ಲಿದ್ದಾರೆ ಜನ. 


ಚಂದ್ರಶೇಖರಯ್ಯ ಹಿರೇಮಠ

ತಿಕೋಟಾ(ಜ.06): ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಹುಟ್ಟೂರು ತಾಲೂಕಿನ ಬಿಜ್ಜರಗಿಯಲ್ಲಿ ಈಗಲೂ ನೀರವ ಮೌನ ಆವರಿಸಿದೆ. ಗ್ರಾಮದ ಜ್ಞಾನ ಪುತ್ರನೊಬ್ಬನ ಕಳೆದುಕೊಂಡ ಗ್ರಾಮಸ್ಥರು ಇನ್ನೂ ಆ ದುಃಖದಿಂದ ಹೊರಬಂದಿಲ್ಲ. ಲವಲವಿಕೆಯಿಂದ ಮರೆಯಾಗಿದೆ. ಚಟುವಟಿಕೆಯಿಂದ ಕೂಡಿರುತ್ತಿದ್ದ ಜನಜೀವನ ಪರಿಮಳವಿಲ್ಲದ ಹೂವಿನಂತಾಗಿದೆ. ರೆಕ್ಕೆ ಕತ್ತರಿಸಿಕೊಂಡ ಹಕ್ಕಿಯಂತಾಗಿದೆ. ಯಾವುದೇ ವ್ಯಾಪಾರ, ವಹಿವಾಟು ಇಲ್ಲದೆ ಗ್ರಾಮದ ಜನ ಇನ್ನೂ ಸಿದ್ದೇಶ್ವರ ಶ್ರೀಗಳ ನೆನಪಿನಲ್ಲಿಯೇ ಉಳಿದಿದ್ದಾರೆ.

Tap to resize

Latest Videos

ಬಿಜ್ಜರಗಿಯಲ್ಲಿ ಸಿದ್ದೇಶ್ವರ ಶ್ರೀಗಳು ಹಿಂದೆ ನಡೆದಾಡಿದ ಮನೆ, ಜಾಗಗಳೆಲ್ಲವೂ ಈಗ ಭಣಗುಡುತ್ತಿದೆ. ವಚನಗಳ ಮೂಲಕ ಜ್ಞಾನವನ್ನು ಪಸರಿಸಿದ ಸಿದ್ದೇಶ್ವರ ಶ್ರೀಗಳು, ಗ್ರಾಮದ ಹೆಸರನ್ನು ರಾಜ್ಯ, ದೇಶಾದ್ಯಂತ ಅದರ ಕೀರ್ತಿಯನ್ನೂ ಪರೋಕ್ಷವಾಗಿ ಪಸರಿಸಿ, ಈಗ ಕಣ್ಮರೆಯಾಗಿದ್ದಾರೆ. ಅಂತಹ ಒಬ್ಬ ಸರಳ ಜೀವಿಯನ್ನು, ಸಂತನನ್ನು ಕಳೆದುಕೊಂಡ ಬಿಜ್ಜರಗಿ ಗ್ರಾಮದಲ್ಲಿ ಈಗ ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ. ಪೂರ್ವಾಶ್ರಮದ ಸಹೋದರರಿಯರು ಇಲ್ಲಿಯೇ ಇದ್ದರೂ ಶ್ರೀಗಳು ಅದರತ್ತ ಒಂದು ದಿನವೂ ನೆನವು ಮಾಡದೇ ತಮ್ಮ ಸಂತ ಕಾಯಕವನ್ನೇ ಮುಂದುವರಿಸಿದ್ದರು. ತಾಯಿ ಮೃತಪಟ್ಟಾಗಲೂ ಸಂತರ ನಿಜ ಕಾಯಕವನ್ನು ಎತ್ತಿ ಹಿಡಿದು ಆಶ್ರಮದಲ್ಲಿಯೇ ಪೂಜೆ ಪುನಸ್ಕಾರಗಳನ್ನು ಮುಗಿಸಿದ್ದರು. ಅಂತಹ ಒಬ್ಬ ಸಂತ ಇಂದು ನಮ್ಮೊಂದಿಗೆ ಇಲ್ಲ ಎಂಬ ನೋವು ಇಡೀ ಗ್ರಾಮದ ಜನರನ್ನು ಇನ್ನೂ ಹೆಚ್ಚು ಬಾಧಿಸುತ್ತಿದೆ.

'ಸರಳತೆಯ ಸಂತ' ಸದಾ ಜೀವಂತ: 'ಸಿದ್ದೇಶ್ವರ ಸ್ವಾಮೀಜಿ' ಇಚ್ಛೆಯಂತೆ ವಿಧಿವಿಧಾನ

ಜ್ಞಾನದ ಬೆಳಕು ಅರಸಿಕೊಂಡು ಹೋದ ಸಂತ:

ಶ್ರೀಗಳು ದೇಹತ್ಯಾಗ ಮಾಡುತ್ತಾರೆ ಎಂಬ ಕಲ್ಪನೆ ಗ್ರಾಮಸ್ಥರಲ್ಲಿ ಒಂದಿನಿತೂ ನಿರೀಕ್ಷೆ ಇರಲಿಲ್ಲ. ನೂರಾರು ಎಕರೆ ಜಮೀನು, ಅರಮನೆಯಂತಹ ಮನೆ ಇದ್ದರೂ ಅದರ ಬಗ್ಗೆ ಸಿದ್ದೇಶ್ವರ ಶ್ರೀಗಳಿಗೆ ಎಂದಿಗೂ ವ್ಯಾಮೋಹ ಇಟ್ಟುಕೊಂಡಿರಲಿಲ್ಲ. ಒಕ್ಕಲುತನವೇ ಸಿದ್ದೇಶ್ವರ ಶ್ರೀಗಳ ಕುಟುಂಬದ ಮೂಲ ಕಸುಬಾಗಿತ್ತು. ಬಡತನ ಹತ್ತಿರವೂ ಸುಳಿದಿರಲಿಲ್ಲ. ಅಂತಹ ಸಿರಿಸಂಪತ್ತಿನ ಮನೆಯಲ್ಲಿದ್ದರೂ ಜ್ಞಾನದ ಬೆಳಕು ಅರಸಿಕೊಂಡು ಹೋಗಬೇಕೆಂಬ ಕಾರಣಕ್ಕೆ ಪೂರ್ವಾಶ್ರಮದ ಸಿದಗೊಂಡ ಅವರು ಸಿದ್ದೇಶ್ವರ ಶ್ರೀಗಳಾಗಿ ಮುಂದೆ ಬೆಳೆದು ನಿಂತಿದ್ದು, ಜಗತ್ತಿಗೆ ಬೆಳಕಾಗಿದ್ದು ಮಾತ್ರ ಅವಿಸ್ಮರಣೀಯ. ಇದಕ್ಕೆ ಕಾರಣವೂ ಇತ್ತು. ಶ್ರೀಗಳ ಪೂರ್ವಾಶ್ರಮದ ತಾಯಿ ಸಂಗಮ್ಮ ಓಗೆಪ್ಪ ಬಿರಾದಾರ ಅವರು ತಮ್ಮ ತವರೂರು ಬಸವನಬಾಗೇವಾಡಿಯ ನಂದಿಹಾಳ ಗ್ರಾಮದಲ್ಲಿ 5.9.1940ರಂದು ಸಿದಗೊಂಡನಿಗೆ ಜನ್ಮ ನೀಡಿದ್ದರು. ಮಗುವಿನ ತೇಜಸ್ಸು ಗಮನಿಸಿದ ಸಂಗಮ್ಮ ಅವರ ತಂದೆ ನಾಗಪ್ಪ ಇವನು ನಿಮ್ಮ ಕುಟುಂಬಕ್ಕೆ ದಕ್ಕುವುದಿಲ್ಲ. ಸಮಾಜದ ಉದ್ದಾರಕ್ಕೆ ಹುಟ್ಟಿಬಂದಿದ್ದು, ತಿಳಿವಳಿಕೆ ಬರುವ ಹೊತ್ತಿಗೆ ಇವನು ಜಗದ ಕಲ್ಯಾಣಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಆ ಭವಿಷ್ಯ ಕೂಡ ಇಂದು ದಿಟವಾಗಿದೆ.

ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾಗಿದ್ದ ಸಿದಗೊಂಡ ಅವರು ಅವರ ಸೆಲೆಯಲ್ಲಿಯೇ ಉಳಿದುಬಿಡುತ್ತಾರೆ. ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಪದೇ ಪದೇ ಬರುತ್ತಿದ್ದ ಸಿದಗೊಂಡನ ಪೋಷಕರಿಗೆ ಮಲ್ಲಿಕಾರ್ಜುನ ಶ್ರೀಗಳು ಇನ್ನೆಂದೂ ವಾಪಸ್‌ ಕರಿಯಲು ಬರಬೇಡಿ ಎಂದು ಹೇಳಿ ಕಳುಹಿಸುತ್ತಾರೆ. ನಂತರ ಸಿದಗೊಂಡ ಅವರು ಸಿದ್ದೇಶ್ವರ ಶ್ರೀಗಳಾಗಿ ನಾಮಾಂತಿಕವಾಗಿ ಬದಲಾಗಲು ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಪ್ರೇರಣೆಯಾಗುತ್ತದೆ. ಅಂದಿನಿಂದ ಜ್ಞಾನದ ಬೆಳಕು ಬಿತ್ತುತ್ತಾ ಬಂದಿದ್ದ ಶ್ರೀಗಳು ಅಂತಿಮ ಕಾಲದವರೆಗೂ ಅದನ್ನು ಕಾಯಕವಾಗಿ ಮಾಡಿಕೊಂಡರು. ಈಗ ಕಾಯವನ್ನು ಬಿಟ್ಟು ಲಕ್ಷಾಂತರ ಭಕ್ತರ ಮನದಲ್ಲಿ ಮರೆಯಾಗಿದ್ದಾರೆ.

ಶತಮಾನೋತ್ಸವ ಕಾರ್ಯಕ್ರಮ ಆಯೋಜನೆ:

ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ 1883ರಲ್ಲಿ ಶಾಲೆ ಆರಂಭಗೊಂಡಿತ್ತು. ಇದಕ್ಕೆ ಈಗ 139 ವರ್ಷಗಳ ಇತಿಹಾಸ. ಇದೇ ಶಾಲೆಯಲ್ಲಿ 1946ರಿಂದ ಶ್ರೀಗಳು ತಮ್ಮ ಪ್ರಾಥಮಿಕ ಶಾಲೆಯ ಅಭ್ಯಾಸ ಮಾಡಿದ್ದರು. ಹೀಗಾಗಿ ಜನವರಿ ತಿಂಗಳಿನಲ್ಲಿ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನಡೆಸಬೇಕು ಎಂದು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಶಾಲೆಯಲ್ಲಿ ಗ್ರಂಥಾಲಯವನ್ನೂ ಸ್ಥಾಪಿಸಬೇಕು ಎಂದು ಶ್ರೀಗಳ ಇಚ್ಚೆಯಾಗಿತ್ತು. ಹೀಗಾಗಿ ಬಿಜ್ಜರಗಿಯ ಗ್ರಾಮಸ್ಥರು ಶತಮಾನೋತ್ಸವ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದರು. ಅದಕ್ಕೆ ಸಿದ್ದೇಶ್ವರ ಶ್ರೀಗಳನ್ನೇ ಆಮಂತ್ರಿಸಲು ಕೂಡ ಸನ್ನದ್ಧರಾಗಿದ್ದರು. ಆದರೆ, ಕಾರ್ಯಕ್ರಮಕ್ಕೂ ಮೊದಲು ಶ್ರೀಗಳು ದೇಹತ್ಯಾಗ ಮಾಡಿರುವುದು ಗ್ರಾಮಸ್ಥರಲ್ಲಿ ಆಘಾತ ತಂದಿದೆ.

ಪ್ರತಿ ಮನೆಯಲ್ಲಿ ಶ್ರೀಗಳ ಫೋಟೊ:

ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆ ಸದ್ಗುರು ಶಿವಾನಂದ ಶಿಕ್ಷಣ ಸಂಸ್ಥೆ, ಅಕ್ಕಮಹಾದೇವಿ ಪೌಢ ಶಾಲೆ, ಶ್ರೀ ಗಳು ಕಲಿತ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಮೇಣದಬತ್ತಿಗಳನ್ನು ಹಚ್ಚಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಗ್ರಾಮದ ಪ್ರತಿ ಮನೆಯಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಗಳನ್ನು ಇಟ್ಟು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು.

ಬಸವನಬಾಗೇವಾಡಿ: ಪ್ರವಚನದಲ್ಲಿಯೇ ಮನಸು ಒಂದುಗೂಡಿಸುತ್ತಿದ್ದ ಸಿದ್ದೇಶ್ವರ ಶ್ರೀ

ಬಿಜ್ಜರಗಿಯಲ್ಲಿ 30 ದಿನಗಳ ಕಾಲ ಪ್ರವಚನಕ್ಕಾಗಿ ಶ್ರೀಗಳನ್ನು ಮನವಿ ಮಾಡಿಕೊಂಡಾಗ ಬರುತ್ತೇನೆಂದು ಪ್ರಸನ್ನತೆ ವ್ಯಕ್ತಪಡಿಸಿದ್ದರು. ಇದಕ್ಕೆ ಎಲ್ಲರೂ ಸಂತೋಷದಿಂದ ಶತಮಾನೊತ್ಸವದ ಸ್ಮರಣ ಸಂಚಿಕೆ ತಯಾರಿಮಾಡುತ್ತಿದ್ದೆವು. ಶಾಲೆಯಲ್ಲಿ ಕಲಿತು ನೌಕರಿ ಮಾಡುತ್ತಿರುವ, ಪ್ರಗತಿಪರ ರೈತರನ್ನು ಹಾಗೂ ಸಿದ್ದೇಶ್ವರ ಶ್ರೀಗಳನ್ನು ಕಲಿಸಿದ ಗುರುಗಳನ್ನು ಕರೆಸಿ ಸಿದ್ದೇಶ್ವರ ಶ್ರೀಗಳ ಮುಂದೆ ಸನ್ಮಾನ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅಷ್ಟರೊಳಗೆ ಗುರುಗಳು ನಮ್ಮನ್ನು ಬಿಟ್ಟು ಅಗಲಿದ್ದು ದುಃಖಕರ ಸಂಗತಿ ಅಂತ ಬಿಜ್ಜರಗಿ ಗ್ರಾಪಂ ಅಧ್ಯಕ್ಷ ಸುಭಾಷಗೌಡ ಪಾಟೀಲ ತಿಳಿಸಿದ್ದಾರೆ. 

ನನಗೂ, ಶ್ರೀಗಳಿಗೂ 78 ವರ್ಷಗಳ ಗೆಳೆತನ. ಮೊದಲಿನಿಂದಲು ಅವರು ಒಂದೇ ಜಾಗದಲ್ಲಿ ಕುಳಿತುಕೊಳ್ಳುವರು. ಅನುಷ್ಠಾನ ಮಾಡುವವರು. ಅಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರು ಅಂತ ಬಿಜ್ಜರಗಿಯ ಶ್ರೀಗಳ ಮಿತ್ರ ಹಣಮಂತರಾಯಗೌಡ ಗು. ಪಾಟೀಲ ಹೇಳಿದ್ದಾರೆ. 

click me!