ಕಳೆದ ಮೂರು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ನೆರೆ ಕಾಟ ಎದುರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆ, 2021ರಲ್ಲಂತೂ ಅಕ್ಷರಶಃ ನರಕವನ್ನೇ ಕಂಡಿತ್ತು. ಭಾರೀ ಪ್ರಮಾಣದಲ್ಲಿ ಹರಿದು ಬಂದ ನೀರಿನಿಂದಾಗಿ ಡ್ಯಾಂಗಳೆಲ್ಲಾ ಏಕಾಏಕಿ ತುಂಬಿದ್ದು, ಸುತ್ತಮುತ್ತಲಿನ ಹಳ್ಳಿಗಳೆಲ್ಲವೂ ಜಲಮಯವಾಗಿತ್ತು.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜೂ.12): ಕಳೆದ ಮೂರು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ನೆರೆ ಕಾಟ ಎದುರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆ, 2021ರಲ್ಲಂತೂ ಅಕ್ಷರಶಃ ನರಕವನ್ನೇ ಕಂಡಿತ್ತು. ಭಾರೀ ಪ್ರಮಾಣದಲ್ಲಿ ಹರಿದು ಬಂದ ನೀರಿನಿಂದಾಗಿ ಡ್ಯಾಂಗಳೆಲ್ಲಾ ಏಕಾಏಕಿ ತುಂಬಿದ್ದು, ಸುತ್ತಮುತ್ತಲಿನ ಹಳ್ಳಿಗಳೆಲ್ಲವೂ ಜಲಮಯವಾಗಿತ್ತು. ಇದರೊಂದಿಗೆ ಸರಿಯಾದ ಮಾಹಿತಿ ಕೊರತೆಯಿಂದಾಗಿ ತಮ್ಮೆಲ್ಲಾ ಸೊತ್ತುಗಳನ್ನು ಬಿಟ್ಟು ಜನರು ಪ್ರಾಣ ರಕ್ಷಣೆಗಾಗಿ ಮನೆಯಿಂದ ಹೊರಗೋಡಿದ್ದರು. ಅಲ್ಲದೇ, ಜನರ ರಕ್ಷಣೆಗೆ ಜಿಲ್ಲಾಡಳಿತ ಹರಸಾಹಸಪಟ್ಟಿತ್ತು. ಈ ಕಾರಣದಿಂದ ಮುಂಬರುವ ಸಮಸ್ಯೆಯನ್ನು ಎದುರಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಈ ಬಾರಿ ಡ್ಯಾಂ ಮ್ಯಾನೇಜ್‌ಮೆಂಟ್ ಪ್ಲ್ಯಾನ್ ಮಾಡಿಕೊಂಡಿದೆ. ಅಷ್ಟಕ್ಕೂ ಏನಿದು ಡ್ಯಾಂ ಮ್ಯಾನೇಜ್‌ಮೆಂಟ್ ಪ್ಲ್ಯಾನ್? ಈ ಸ್ಟೋರಿ ನೋಡಿ.
undefined
ಹೌದು! ಉತ್ತರಕನ್ನಡ ಜಿಲ್ಲೆಯ ಜೀವನದಿಗಳಾಗಿರುವ ಕಾಳಿ ಹಾಗೂ ಶರಾವತಿ ನದಿಗಳಿಂದಾಗಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಭಾರೀ ನೆರೆ ಕಾಟ ಉಂಟಾಗಿತ್ತು. ಜನರಂತೂ ತಮ್ಮೆಲ್ಲಾ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಅಕ್ಷರಶಃ ಹೈರಾಣಾಗಿದ್ದರು. ಈ ಕಾರಣದಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿ ಈಗಾಗಲೇ ಕೆಪಿಸಿಎಲ್ ಅಧಿಕಾರಿಗಳ ಜತೆ ಸುಮಾರು 5 ಸಭೆಗಳನ್ನು ನಡೆಸಿ ಯಾವ ಡ್ಯಾಂಗಳನ್ನು ಯಾವ ರೀತಿ ವ್ಯವಸ್ಥಿತಗೊಳಿಸಬೇಕು ಹಾಗೂ ಎಷ್ಟರ ಮಟ್ಟಕ್ಕೆ ಮಾತ್ರ ನೀರು ಸಂಗ್ರಹಣೆ ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಡ್ಯಾಂಗಳಲ್ಲಿ ನೀರು ತುಂಬುವ ಮಟ್ಟಕ್ಕೆ ಬಂದಾಗ ಹಲವು ಲಕ್ಷದಷ್ಟು ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತದೆ.
ಸುಪಾ ಮುಳುಗಡೆಯಾದ ಗ್ರಾಮಗಳ ಅವಶೇಷ ಗೋಚರ..!
ಇದರಿಂದಾಗಿ ನೀರು ಏಕಾಏಕಿ ನುಗ್ಗಿ ಜನಸಾಮಾನ್ಯರ ಆಸ್ತಿಪಾಸ್ತಿಗಳನ್ನು ನಾಶ ಮಾಡಿಬಿಡುತ್ತದೆ. ಕೆಲವು ಜನರು ನಮಗೆ ಅಧಿಕಾರಿಗಳು ಕೊನೇ ಕ್ಷಣದಲ್ಲಿ ಮಾಹಿತಿ ನೀಡಿದ್ದಾರೆ ಅಂದ್ರೆ ಉಳಿದವರು ಮಾಹಿತಿಯೇ ಇಲ್ಲ ಅನ್ನೋ ಆರೋಪ ಮಾಡಿದ್ರೆ, ಅಧಿಕಾರಿಗಳಂತೂ ಜನರು ನಿರ್ಲಕ್ಷ್ಯ ಮಾಡಿದ್ರು ಅನ್ನೋ ಸಬೂಬು ನೀಡ್ತಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡ್ಯಾಂಗಳ ಕೆಳಗೆ ಯಾವ ಮಟ್ಟದಲ್ಲಿ ನೀರು ಬಂದರೆ ಯಾವ ಪ್ರದೇಶದವರೆಗೆ ಮುಳುಗಡೆಯಾಗುತ್ತೆ ಅನ್ನೋ ಸರ್ವೆ ಮಾಡೋದ್ರೊಂದಿಗೆ ಕಲರ್ ಕೋಡಿಂಗ್ ಕೂಡಾ ನಡೆಸಲಾಗಿದೆ. ಎಷ್ಟು ಲಕ್ಷ ಕ್ಯೂಸೆಕ್ ನೀರು ಹೊರ ಬಿಟ್ಟಲ್ಲಿ ಎಲ್ಲಿಯರೆಗೆ ಮುಳುಗಡೆಯಾಗಬಹುದು ಎಂಬುದನ್ನು ಕಲ್ಲುಗಳಲ್ಲಿ ಗುರುತಿಸಲಾಗಿದೆ.
ಇತಿಹಾಸ ತೆರೆದು ನೋಡಿದ್ರೆ ಕಳೆದ 100 ವರ್ಷದಲ್ಲಿ ಇಲ್ಲಿಯವರೆಗೆ ಹೆಚ್ಚು ನೀರು ಹೊರಕ್ಕೆ ಹೋಗಿರೋದು 2019ರಲ್ಲಿ ಅದು ಕೂಡಾ 2.34 ಲಕ್ಷ ಕ್ಯೂಸೆಕ್. ಆ ಮಟ್ಟಕ್ಕೆ ಬಂದಲ್ಲಿ ಎಲ್ಲೆಲ್ಲಿ ಮುಳುಗಡೆಯಾಗುತ್ತದೆ ಎಂದು ಈಗಾಗಲೇ ಗುರುತು ಮಾಡಲಾಗಿದೆ. ಈ ವ್ಯಾಪ್ತಿಯ ಜನರ ಮೊಬೈಲ್ ನಂಬರ್‌ಗಳನ್ನು ಪಂಚಾಯತ್ ಮುಖಾಂತರ ಸಂಗ್ರಹಿಸಿ ಕೆಪಿಸಿಎಲ್‌ಗೆ ನೀಡಲಾಗಿದೆ. ಕೆಪಿಸಿಎಲ್ ಜನರಿಗೆ ಅಲರ್ಟ್, ಡ್ಯಾಂನಲ್ಲಿ ಯಾವ ಮಟ್ಟದಲ್ಲಿ ನೀರಿದೆ, ಎಷ್ಟು ಸಮಯದಲ್ಲಿ ಎಷ್ಟು ನೀರು ಹೊರಬಿಡುವ ಸಾಧ್ಯತೆಗಳಿವೆ ಎಂಬಂತಹ ಮಾಹಿತಿಯನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ನೇರವಾಗಿ ಜನರಿಗೆ ಸಮೂಹ ಎಸ್‌ಎಂಎಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಇದರೊಂದಿಗೆ ಈ ಹಿಂದೆ ನಡೆಸಲಾಗುತ್ತಿದ್ದ ಪಬ್ಲಿಕ್ ಅನೌನ್ಸ್‌ಮೆಂಟ್, ಸಿಬ್ಬಂದಿಗಳ ಮೂಲಕ ಮಾಹಿತಿ ರವಾನೆ, ಪ್ಯಾಂಪ್ಲೆಟ್, ವಾಟ್ಸಪ್ ಗ್ರೂಪ್ ಮುಂತಾದವುಗಳು ಕೂಡಾ ನಡೆಯಲಿದೆ. ಹೆಚ್ಚು ನೀರು ಬಂದಲ್ಲಿ ಎಲ್ಲಿ ಮುಳುಗಡೆಯಾಗಬಹುದು ಎಂಬುದನ್ನು ಈಗಾಗಲೇ ಗುರುತಿಸಿದ್ದೇವೆ, ಅಲ್ಲಿನ ಜನರನ್ನು ಸ್ಥಳಾಂತರದ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ಸಾರ್ವಜನಿಕರು ಸಹಕಾರವನ್ನು ಕೂಡಾ ನೀಡಬೇಕು. ಇನ್ನು ಲೈವ್ ಆಗಿ ಡ್ಯಾಂಗಳ ಮಟ್ಟದ ಮಾಹಿತಿ ಜಿಲ್ಲಾ ಕಂಟ್ರೋಲ್ ರೂಂ ಬರುತ್ತದೆ.
ಉತ್ತರ ಕನ್ನಡ: ಮುರ್ಡೇಶ್ವರಕ್ಕೆ ಬಂದಿದ್ದ ಇಬ್ಬರು ಸಮುದ್ರಪಾಲು
ಸಮಯ ಸಮಯದಲ್ಲಿ ಪ್ರತೀ ಡ್ಯಾಂಗಳ ಒಳಹರಿವು ಹಾಗೂ ಹೊರಹರಿವು ಮಟ್ಟ ಎಷ್ಟಿದೆ ಅನ್ನೋ ಮಾಹಿತಿ ಕಂಟ್ರೋಲ್ ರೂಂಗೆ ದೊರೆಯುತ್ತದೆ. ಇದನ್ನು ಕೆಪಿಸಿಎಲ್ ಮೂಲಕ ಮಾಡಲಾಗಿದ್ದು, ಜಿಲ್ಲಾಡಳಿತಕ್ಕೆ ಇದರ ಸಂಪೂರ್ಣ ಮಾಹಿತಿ ದೊರಕುತ್ತದೆ. ಇದರೊಂದಿಗೆ ಮಳೆಯ ಪ್ರಮಾಣದ ಮಾಹಿತಿ ಕೂಡಾ ಲಭ್ಯವಿರಲಿದೆ. ಒಟ್ಟಿನಲ್ಲಿ ಈ ಬಾರಿ ನೆರೆ ಕಾಟ ಉಂಟಾದಲ್ಲಿ ಜನರು ಸಂಕಷ್ಟ ಎದುರಿಸಬಾರದು ಎಂಬ ಉದ್ದೇಶದಿಂದ ಉತ್ತರಕನ್ನಡ ಜಿಲ್ಲಾಡಳಿತ ಡ್ಯಾಂ ಮ್ಯಾನೇಜ್‌ಮೆಂಟ್ ಸಿಸ್ಟಂ ಮಾಡಿಕೊಂಡಿದೆ. ಪ್ರತೀ ವರ್ಷದಂತೆ ಈ ಬಾರಿಯೂ ನೆರೆ ಕಾಣಿಸಿಕೊಂಡಲ್ಲಿ ಈ ವ್ಯವಸ್ಥೆ ಎಷ್ಟು ಸಫಲವಾಗಲಿದೆ ಎಂದು ಕಾದುನೋಡಬೇಕಷ್ಟೇ.